ಪಂಜಾಬ್ ನಲ್ಲಿ ಆಪ್ ಗೆ ಪ್ರಚಂಡ ಬಹುಮತ !
ಹೊಸದಿಲ್ಲಿ,ಮಾ.30: ಆಮ್ ಆದ್ಮಿ ಪಕ್ಷದ ಪ್ರಭಾವವು ದಿಲ್ಲಿಗೆ ಮಾತ್ರ ಸೀಮಿತವಾಗಿಲ್ಲವೆಂಬುದು ಇದೀಗ ಸಾಬೀತಾಗಿದೆ. 117 ಸದಸ್ಯ ಬಲದ ಪಂಜಾಬ್ ವಿಧಾನಸಭಾ ಚುನಾವಣೆಗೆ ಇನ್ನು ಕೆಲವು ತಿಂಗಳು ಉಳಿದಿರುವಂತೆಯೇ, ಆ ರಾಜ್ಯದಲ್ಲಿ ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಪ್ ಪಕ್ಷದ ಅಲೆ ಜೋರಾಗಿ ಬೀಸುತ್ತಿದೆಯೆಂದು ಹಫಿಂಗ್ಟನ್‌ಪೋಸ್ಟ್-ಸಿವೋಟರ್‌ನ ವಿಶೇಷ ಸಮೀಕ್ಷಾ ವರದಿಯು ಬಹಿರಂಗಪಡಿಸಿದೆ.
ನೂತನ ಸಮೀಕ್ಷೆಯ ಪ್ರಕಾರ 117 ಸದಸ್ಯ ಬಲದ ಪಂಜಾಬ್ ವಿಧಾನಸಭೆಗೆ ನಡೆಯಲಿರುವ ಚುನಾವಣೆಯಲ್ಲಿ ಎಎಪಿ 94ರಿಂದ 100 ಸ್ಥಾನಗಳನ್ನು ಗಳಿಸಲಿದೆ. ಕಳೆದ ವರ್ಷದ ಎಪ್ರಿಲ್‌ನಲ್ಲಿ ಸಿವೋಟರ್ ನಡೆಸಿದ ಸಮೀಕ್ಷೆಯು ಆಪ್‌ಗೆ 83-90 ಸ್ಥಾನಗಳನ್ನು ನೀಡಿತ್ತು.
‘‘ಇದರಲ್ಲಿ ಅಚ್ಚರಿಯೇನೂ ಇಲ್ಲ. ಸಮೀಕ್ಷೆಯಲ್ಲಿ ಅಪ್‌ನ ಸ್ಥಾನಗಳಿಕೆಯು 2013 ಹಾಗೂ 2014ರಲ್ಲಿ ಏರುಗತಿಯನ್ನು ಕಾಣುತ್ತಲೇ ಇದೆ. ಇದೀಗ ಅದು ಇನ್ನಷ್ಟು ದೃಢತೆಯನ್ನು ಪಡೆದುಕೊಂಡಿದೆ’’ ಎಂದು ಸಿ-ವೋಟರ್‌ನ ಸಂಸ್ಥಾಪಕ ಯಶವಂತ್ ದೇಶಮುಖ್ ಹೇಳುತ್ತಾರೆ.
ಇತ್ತೀಚಿನ ಸಿವೋಟರ್-ಹಫಿಂಗ್ಟನ್‌ಪೋಸ್ಟ್ ಸಮೀಕ್ಷೆಯ ಪ್ರಕಾರ ಕಾಂಗ್ರೆಸ್ ಪಕ್ಷಕ್ಕೆ ಕೇವಲ 8-14 ಸ್ಥಾನಗಳಷ್ಟೇ ದೊರೆಯಲಿದೆ. ಕಳೆದ ವರ್ಷದ ಸಮೀಕ್ಷೆಯಲ್ಲಿ ಕಾಂಗ್ರೆಸ್‌ಗೆ 12-18 ಸ್ಥಾನಗಳು ದೊರೆಯಲಿದೆಯೆಂದು ಭವಿಷ್ಯ ನುಡಿಯಲಾಗಿತ್ತು. ಆದರೆ ಆಡಳಿತಾರೂಢ ಶಿರೋಮಣಿ ಅಕಾಲಿದಳ (ಎಸ್‌ಎಡಿ)-ಬಿಜೆಪಿ ಮೈತ್ರಿಕೂಟದ ಸಾಧನೆ ಇನ್ನಷ್ಟು ಕಳಪೆಯಾಗಿದ್ದು, ಅದಕ್ಕೆ ಕೇವಲ 6-12 ಸ್ಥಾನ ಮಾತ್ರ ದೊರೆಯಲಿದೆ. ಕಳೆದ ವರ್ಷ ಸಮೀಕ್ಷೆಯು ಎಸ್‌ಎಡಿ-ಬಿಜೆಪಿ ಮೈತ್ರಿಕೂಟಕ್ಕೆ 6-12 ಸ್ಥಾನಗಳನ್ನು ನೀಡಿತ್ತು.
ಒಂದು ವೇಳೆ ಪಂಜಾಬ್ ವಿಧಾನಸಭಾ ಚುನಾವಣೆ ಈಗ ನಡೆದಲ್ಲಿ, ಶೇ. 48ರಷ್ಟು ಮತದಾರರು ಆಪ್ ಪರವಾಗಿ ಮತಚಲಾಯಿಸಲಿದ್ದಾರೆಂದು ಸಮೀಕ್ಷೆ ಭವಿಷ್ಯ ನುಡಿದಿದೆ.
2012ರ ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿ ಎಸ್‌ಎಡಿ 56 ಸ್ಥಾನಗಳನ್ನು, ಅದರ ಮಿತ್ರಪಕ್ಷವಾದ ಬಿಜೆಪಿ 12 ಸ್ಥಾನಗಳನ್ನು ಗೆದ್ದಿದ್ದವು. ಕಾಂಗ್ರೆಸ್ 46 ಸ್ಥಾನಗಳಲ್ಲಿ ಗೆಲುವು ಕಂಡಿತ್ತು. ಸಮೀಕ್ಷೆಯಲ್ಲಿ ಪಾಲ್ಗೊಂಡ ಶೇ. 78ರಷ್ಟು ಮಂದಿ,ಸರಕಾರದ ಬದಲಾವಣೆಯನ್ನು ಬಯಸುವುದಾಗಿ ಹೇಳಿರುವುದು, ರಾಜ್ಯದಲ್ಲಿ ಆಡಳಿತವಿರೋಧ ಅಲೆ ಬಲವಾಗಿ ಬೀಸುತ್ತಿರುವುದಕ್ಕೆ ಸಾಕ್ಷಿಯಾಗಿದೆ.
ನಿರುದ್ಯೋಗ, ಮಾದಕದ್ರವ್ಯ ವ್ಯಸನ ಹಾಗೂ ಭ್ರಷ್ಟಾಚಾರ ಪಂಜಾಬ್ ಎದುರಿಸುತ್ತಿರುವ ಮುಖ್ಯ ಸಮಸ್ಯೆಗಳೆಂದು ಸಮೀಕ್ಷೆಯು ಗುರುತಿಸಿದೆ. ಫೆಬ್ರವರಿಯಲ್ಲಿ ನಡೆದ ಈ ಸಮೀಕ್ಷೆಯಲ್ಲಿ ಭಾಗವಹಿಸಿದವರಲ್ಲಿ ಶೇ. 59ರಷ್ಟು ಮಂದಿ ಕೇಜ್ರಿವಾಲ್ ಪಂಜಾಬ್‌ನ ಮುಖ್ಯಮಂತ್ರಿಯಾಗುವುದನ್ನು ಬಯಸುತ್ತಿದ್ದಾರೆ. ಕಾಂಗ್ರೆಸ್ ನಾಯಕ ಅಮರೀಂದರ್ ಸಿಂಗ್ ಅವರಿಗಿಂತ ಕೇಜ್ರಿವಾಲ್ ಸಿಎಂ ಆಗಬೇಕೆಂದು ಶೇ. 51ರಷ್ಟು ಮಂದಿ ಹೇಳಿದ್ದಾರೆ.