ಜಾಟರಿಗೆ ಮೀಸಲಾತಿ: ಬಿಗಡಾಯಿಸಲಿದೆ ವಿವಾದ
ಕೊನೆಗೂ ಹರ್ಯಾಣದಲ್ಲಿ ಜಾಟರ ಕೈ ಮೇಲಾಗಿದೆ. ಮೀಸಲಾತಿಯ ಹರಿವಿನ ದಿಕ್ಕನ್ನು ಅವರು ಬದಲಿಸಲು ಯಶಸ್ವಿಯಾಗಿದ್ದಾರೆ. ಈವರೆಗೆ ದುರ್ಬಲವರ್ಗದ ಕಡೆಗಷ್ಟೇ ಹರಿಯುತ್ತಿದ್ದ ಮೀಸಲಾತಿ, ಈ ಬಾರಿ ಮೇಲ್ವರ್ಗದೆಡೆಗೆ ತನ್ನ ಮುಖವನ್ನು ತಿರುಗಿಸಿದೆ. ಈ ಶೋಷಿತರ, ದಮನಿತರ ನೂರಾರು ಒತ್ತಾಯಗಳು, ಆಗ್ರಹಗಳು ನನೆಗುದಿಯಲ್ಲಿದ್ದರೂ ಜಾಟರ ಮೀಸಲಾತಿ ಆಗ್ರಹ ಅತಿ ಶೀಘ್ರದಲ್ಲಿ ಈಡೇರಿ ಬಿಟ್ಟಿತು. ಕಾರಣ, ಅವರು ಆ ಮೀಸಲಾತಿ ಆಗ್ರಹಕ್ಕೆ ಹೆಚ್ಚು ಅರ್ಹರು ಎನ್ನುವ ಕಾರಣಕ್ಕಾಗಿಯಲ್ಲ. ಬದಲಿಗೆ, ಜಾಟರು ತಮ್ಮ ಸಂಖ್ಯಾಬಲ, ರಾಜಕೀಯ ಬಲ ಮತ್ತು ದುಡ್ಡಿನ ಬಲವನ್ನು ಬಳಸಿಕೊಂಡು ರಾಜ್ಯ ಮತ್ತು ಕೇಂದ್ರ ಸರಕಾರಗಳನ್ನು ಬಲವಾಗಿ ಅಲ್ಲಾಡಿಸಿ ಬಿಟ್ಟರು. ಸಾಧಾರಣವಾಗಿ ಮೂಲಭೂತ ಬೇಡಿಕೆಗಳಿಗಾಗಿ ಬೀದಿಗಿಳಿಯುವುದು ಪ್ರತಿಭಟನೆ ನಡೆಸುವುದು ಪ್ರಜಾಸತ್ತಾತ್ಮಕ ವ್ಯವಸ್ಥೆಯಲ್ಲಿ ಒಂದು ಸಹಜ ಪ್ರಕ್ರಿಯೆಯಾಗಿದೆ. ಆದರೆ, ಇಲ್ಲಿ ಜಾಟರು ಬೀದಿಗಿಳಿದಿರುವುದು, ಈ ದೇಶದ ಶೋಷಿತರು, ದುರ್ಬಲ ವರ್ಗಗಳಿಗಾಗಿ ಸಂವಿಧಾನ ನೀಡಿದ ಹಕ್ಕುಗಳಲ್ಲಿ ಪಾಲು ಕೇಳಲು. ಮೀಸಲಾತಿಯಂತಹ ವಿಶೇಷ ಹಕ್ಕುಗಳಿಗೆ ಓರ್ವ ಅರ್ಹನಾಗಬೇಕಾದರೆ, ಆತ ಜಾತಿಯ ಕಾರಣದಿಂದಾಗಿ ಶೋಷಿತನಾಗಿರಬೇಕು, ಆರ್ಥಿಕವಾಗಿ ಹಿಂದುಳಿದವರಾಗಿರಬೇಕು. ಆದರೆ ಜಾಟರು ಮೀಸಲಾತಿಯ ಮಾನದಂಡದ ವ್ಯಾಪ್ತಿಯಲ್ಲಿ ಬರುವುದಿಲ್ಲ. ಆದರೂ ತಮ್ಮ ಜಾತಿ ಮತ್ತು ರೆಟ್ಟೆಯ ಬಲದಿಂದ ಸರಕಾರವನ್ನು ಮಣಿಸಿ, ತಾವೂ ಮೀಸಲಾತಿಗೆ ಅರ್ಹರು ಎಂದು ಘೋಷಿಸಿಕೊಂಡಿದ್ದಾರೆ. ಇದು ಭಾರತದ ಸಾಮಾಜಿಕ ನ್ಯಾಯದ ಪಾಲಿಗೆ ಬಹುದೊಡ್ಡ ಸೋಲು. ಯಾವ ರೀತಿಯಲ್ಲಿಯೂ ಜಾಟರಿಗೆ ಸರಕಾರ ನೀಡಿರುವ ಮೀಸಲಾತಿ, ಸಾಮಾಜಿಕ ನ್ಯಾಯದ ವ್ಯಾಪ್ತಿಯಲ್ಲಿ ಬರುವುದಿಲ್ಲ. ಈ ಮೀಸಲಾತಿ, ಸಾಮಾಜಿಕ ಅನ್ಯಾಯದ ಭಾಗವಾಗಿ ಅವರಿಗೆ ನೀಡಲ್ಪಟ್ಟಿದೆ.
ಭಾರತ ದೇಶದ ಅರ್ಥವ್ಯವಸ್ಥೆಯ ಬೇರು ಜಾತಿಯ ತಳಹದಿಯ ಮೇಲೆ ನಿಂತಿದೆ. ಒಬ್ಬನ ಸಾಮಾಜಿಕ ಸ್ಥಾನಮಾನಗಳು ತೀರ್ಮಾನವಾಗುವಲ್ಲಿ ಆತನ ಜಾತಿ ಪ್ರಮುಖ ಪಾತ್ರ ವಹಿಸುವುದರಿಂದಲೇ, ತೀರಾ ಕೆಳ ಜಾತಿಯ ಜನರಿಗೆ ಮೀಸಲಾತಿಯನ್ನು ಸಂವಿಧಾನ ನೀಡಿದೆ. ಯಾರೆಲ್ಲ ಸಂಖ್ಯಾ ಬಲದಲ್ಲಿ ಹೆಚ್ಚಿದ್ದಾರೆ ಎನ್ನುವುದನ್ನು ಅಧ್ಯಯನ ಮಾಡಿ ಮೀಸಲಾತಿಯನ್ನು ಹಂಚಿರುವುದಲ್ಲ. ತಲೆ ತಲಾಂತರದಿಂದ ಜಾತಿ ಕಾರಣದಿಂದ ಶಿಕ್ಷಣ, ಆರ್ಥಿಕ ಕ್ಷೇತ್ರದಲ್ಲಿ ಮೂಲೆಗೊತ್ತಲ್ಪಟ್ಟವರನ್ನು ಗುರುತಿಸಿ ಅವರಿಗೆ ನ್ಯಾಯ ನೀಡುವುದಕ್ಕೋಸ್ಕರ ಮೀಸಲಾತಿಯನ್ನು ಜಾರಿಗೆ ತರಲಾಗಿದೆ. ಮೇಲ್ಜಾತಿಯ ಜನರು ಬಲಾಢ್ಯರು, ಸಂಖ್ಯೆಯಲ್ಲಿ ದೊಡ್ಡ ಭಾಗವನ್ನು ಹೊಂದಿದ್ದಾರೆ ಮತ್ತು ಅವರ ಬೇಡಿಕೆಯನ್ನು ಈಡೇರಿಸದೇ ಇದ್ದರೆ ಅವರು ಸರಕಾರವನ್ನು ಅಸ್ತವ್ಯಸ್ತಗೊಳಿಸಿ ಬಿಡುತ್ತಾರೆ ಎಂದು ಬೆದರಿ ಅವರಿಗೆ ಮೀಸಲಾತಿಯನ್ನು ಕೊಟ್ಟರೆ, ಅದರ ಪರಿಣಾಮವನ್ನು ದುರ್ಬಲ ಜಾತಿಯವರೇ ಮತ್ತೆ ಅನುಭವಿಸಬೇಕಾಗುತ್ತದೆ. ಇಲ್ಲಿ ಮೀಸಲಾತಿಯಿಂದ ಜಾಟರು ಅಭಿವೃದ್ಧಿಗೊಳ್ಳುವುದು ಎಂದರೆ ಅದರ ಅರ್ಥ, ದುರ್ಬಲ ವರ್ಗದವರು ಇನ್ನಷ್ಟು ದುರ್ಬಲರಾಗೆ ಜಾಟರಂತಹ ಮೇಲ್ವರ್ಗದ ದಮನಕ್ಕೆ ಒಳಗಾಗುವುದು. ಜಾಟರಂತಹ ಮೇಲ್ವರ್ಗದವರು ಇಂದು ಮೀಸಲಾತಿಯ ಮೇಲೆ ಕಣ್ಣಿಟ್ಟಿರುವುದು ದುರ್ಬಲವರ್ಗದ ಜನರು ತಮ್ಮ ಮಟ್ಟಕ್ಕೆ ಏರುವುದನ್ನು ಸಹಿಸಲಾಗದ ಕಾರಣಕ್ಕೆ. ಮತ್ತು ಅವರನ್ನು ಇನ್ನಷ್ಟು ತುಳಿಯುವ ಉದ್ದೇಶದಿಂದ ಅವರಿಂದ ಮೀಸಲಾತಿಯನ್ನು ಕಸಿಯುವ ಯೋಜನೆಯನ್ನು ಹಾಕಿಕೊಂಡಿದ್ದಾರೆ. ಅದರಲ್ಲಿ ಭಾಗಶಃ ಯಶಸ್ವಿಯಾಗಿದ್ದಾರೆ. ಹಾಗೆಂದು ಜಾಟರಲ್ಲಿ ದುರ್ಬಲ ವರ್ಗದ ಜನರು ಇಲ್ಲವೆಂದೆಲ್ಲ. ಇಲ್ಲೂ ಅಲ್ಪಸಂಖ್ಯಾತ ದುರ್ಬಲ ಸಮುದಾಯಗಳಿವೆ. ಆದರೆ ಮೀಸಲಾತಿಯ ಅಂತಿಮ ಪರಿಣಾಮವನ್ನು ಮೇಲ್ವರ್ಗದ ಜನರು ತಮ್ಮದಾಗಿಸಿಕೊಳ್ಳುತ್ತಾರೆ ಎನ್ನುವುದರಲ್ಲಿ ಎರಡು ಮಾತಿಲ್ಲ.
ಮೀಸಲಾತಿಗಾಗಿ ಜಾಟರು ಹಮ್ಮಿಕೊಂಡ ಪ್ರತಿಭಟನೆ ಯಾವ ರೀತಿಯಲ್ಲೂ ಪ್ರಜಾಸತ್ತಾತ್ಮಕವಾಗಿರಲಿಲ್ಲ. ಭೀಕರ ಹಿಂಸೆಯನ್ನು ಹರ್ಯಾಣ ಎದುರಿಸಬೇಕಾಯಿತು. ವಾಹನಗಳು ದಹಿಸಲ್ಪಟ್ಟವು. ದುರ್ಬಲ ವರ್ಗದ ಜನರು ಹಲ್ಲೆಗೀಡಾದರು. ರಾಜ್ಯ ಸರಕಾರ ಮಾತ್ರವಲ್ಲ, ಕೇಂದ್ರ ಸರಕಾರವೂ ಆ ಪ್ರತಿಭಟನೆಯಿಂದ ಕಂಪಿಸಿತು. ಅವರ ಭಯದಿಂದಲೇ ಮೀಸಲಾತಿ ಏಕಾಏಕಿ ವಿಧಾನಸಭೆಯಲ್ಲಿ ಅಂಗೀಕರಿಸಲ್ಪಟ್ಟಿತು. ಜಾಟರ ಬಲಾಢ್ಯತೆಯನ್ನು ಇದು ಎತ್ತಿ ಹಿಡಿಯುತ್ತದೆ. ಸರಿ. ಜಾಟರಿಗೆ ಮೀಸಲಾತಿಯನ್ನು ನೀಡುವುದರಿಂದಾಗಿ ಸಮಸ್ಯೆ ಮುಗಿಯುತ್ತದೆ ಎಂದರೆ ಅದು ಇನ್ನೊಂದು ದೊಡ್ಡ ಸುಳ್ಳು. ಸಮಸ್ಯೆ ಆರಂಭವಾಗಿದೆ. ಈಗಾಗಲೇ ದೇಶದಲ್ಲಿ ಮೀಸಲಾತಿಗಾಗಿ ಗುಜ್ಜಾರರು ಮತ್ತು ಪಟೇಲರು ಭಾರೀ ಹೋರಾಟಕ್ಕಿಳಿದಿದ್ದಾರೆ. ಪಟೇಲರ ಮುಖಂಡ ಹಾರ್ದಿಕ್ ಪಟೇಲ್ ಅವರು ದೇಶದ್ರೋಹದ ಆರೋಪದಲ್ಲಿ ಜೈಲಿನೊಳಗಿದ್ದಾರೆ. ಜಾಟರಿಗೆ ಭಾಗಶಃ ಮೀಸಲಾತಿ ಅಂಗೀಕರಿಸಲ್ಪಟ್ಟಿರುವುದು ಪಟೇಲರು ಮತ್ತು ಗುಜ್ಜಾರರ ಹೋರಾಟಗಳಿಗೆ ನೀಡಿರುವ ಪರವಾನಿಗೆಯಾಗಿದೆ. ಮುಂದಿನ ದಿನಗಳಲ್ಲಿ ಈ ಸಮುದಾಯ ತಮ್ಮ ಪ್ರತಿಭಟನೆಯನ್ನು ಇನ್ನಷ್ಟು ತೀವ್ರಗೊಳಿಸುವುದರಲ್ಲಿ ಯಾವ ಅನುಮಾನವೂ ಇಲ್ಲ. ಅಂತಿಮವಾಗಿ ಮೀಸಲಾತಿಗಾಗಿ ನಡೆಯುವ ಹೋರಾಟ, ಮೀಸಲಾತಿ ವಿರೋಧಿ ಹೋರಾಟವಾಗಿ ಪರಿವರ್ತನೆಯಾಗಲಿದೆ. ಎಲ್ಲ ಬಲಾಢ್ಯ ಜಾತಿಗಳಿಗೂ ಮೀಸಲಾತಿ ಎಂದರೆ ಅದರ ಅರ್ಥ, ದಲಿತರು, ಹಿಂದುಳಿದ, ದುರ್ಬಲವರ್ಗದ ಜನರ ಮೀಸಲಾತಿಯನ್ನು ಕಿತ್ತುಕೊಳ್ಳುವುದು. ಅಥವಾ ಮುಂದೊಂದು ದಿನ ಈ ಹೋರಾಟವನ್ನು ಹತ್ತಿಕ್ಕುವ ನೆಪದಲ್ಲಿ "ಯಾರಿಗೂ ಮೀಸಲಾತಿ ಬೇಡ" ಎಂಬ ನಿರ್ಧಾರವನ್ನು ಮೋದಿ ಸರಕಾರ ತಳೆದರೆ ಅದರಲ್ಲಿ ಅಚ್ಚರಿಯೇನೂ ಇಲ್ಲ. ಜಾಟರು, ಪಟೇಲರು, ರೆಡ್ಡಿಗಳಂತಹ ಬಲಾಢ್ಯ ವರ್ಗ ಮೀಸಲಾತಿ ಕೇಳುತ್ತಿರುವುದು ಆರೆಸ್ಸೆಸ್‌ನ ಮೀಸಲಾತಿ ವಿರೋಧಿ ಸಂಚಿನ ಭಾಗವೇ ಆಗಿದೆ. ಆದರೆ ಮೀಸಲಾತಿಯ ಫಲಾನುಭವಿಗಳು ಇದರ ವಿರುದ್ಧ ಸಂಘಟಿತರಾಗದೆ ಗಾಢ ವಿಸ್ಮತಿಯಲ್ಲಿದ್ದಾರೆ. ಈ ವಿಸ್ಮತಿ ಹೀಗೆಯೇ ಮುಂದುವರಿದರೆ ಮುಂದೊಂದು ದಿನ ಸಂವಿಧಾನದಿಂದ ಮೀಸಲಾತಿಯನ್ನು ಸಂಪೂರ್ಣ ಕಿತ್ತೊಗೆಯಲ್ಪಡುವ ದಿನ ಬರಲಿದೆ. ಮತ್ತು ದಲಿತರು, ಶೋಷಿತರ ಧ್ವನಿ ಅರಣ್ಯರೋದನವಾಗಲಿದೆ. ಅದಕ್ಕೆ ಮೊದಲು ತಳಸ್ತರದ ಜನರು ಮೀಸಲಾತಿ ವಿರುದ್ಧ ಸಂಚನ್ನು ವಿಫಲಗೊಳಿಸಲು ಒಂದಾಗಬೇಕಾಗಿದೆ.