ಬಿಜೆಪಿ ನಾಯಕನ ಸಮಾನ ಶಿಕ್ಷಣ ಕುರಿತ ಅರ್ಜಿಯನ್ನು ತಳ್ಳಿಹಾಕಿದ ಸುಪ್ರೀಂ ಕೋರ್ಟ್
Update: 2016-04-02 13:37 IST
ಹೊಸದಿಲ್ಲಿ, ಎಪ್ರಿಲ್.2: ಸುಪ್ರೀಂಕೋರ್ಟ್ ಇಂದು ದೇಶಾದ್ಯಂತ ಎಲ್ಲ ಶಾಲೆಗಳಲ್ಲಿ ಏಕ ರೀತಿಯ ಪಠ್ಯಕ್ರಮ ಪ್ರಾರಂಭಿಸಲು ಸೂಚಿಸಬೇಕೆಂದು ಸಲ್ಲಿಸಲಾದ ಅರ್ಜಿಯನ್ನು ವಜಾ ಮಾಡಿದೆ. ನ್ಯಾಯಮೂರ್ತಿ ಮದನ್ ಬಿ. ಲೋಕೂರ್ ಮತ್ತು ನ್ಯಾಯಮೂರ್ತಿ ಎನ್.ವಿ. ರಾಮಣ್ಣರ ಪೀಠವು ದಿಲ್ಲಿಯ ಬಿಜೆಪಿ ನಾಯಕ ಅಶ್ವಿನ್‌ಕುಮಾರ್ ಉಪಾಧ್ಯಾಯರು ಸಲ್ಲಿಸಿದ್ದ ಪಿಐಎಲ್‌ನ್ನು ಈ ಅರ್ಜಿಯಲ್ಲಿ ಆಲಿಕೆಗೆ ಸೂಕ್ತವಾದ ಯಾವುದೇ ಆಧಾರವಿಲ್ಲ ಎಂದು ಹೇಳಿ ವಿಚಾರಣೆಗೆತ್ತಿಕೊಳ್ಳಲು ನಿರಾಕರಿಸಿ ತಳ್ಳಿಹಾಕಿರುವುದಾಗಿ ವರದಿಗಳು ತಿಳಿಸಿವೆ.
ಉಪಾಧ್ಯಾಯರು ಕಳೆದ ಜನವರಿಯಲ್ಲಿ ಅರ್ಜಿಯನ್ನು ಸಲ್ಲಿಸಿದ್ದರು. ದೇಶಾದ್ಯಂತವಿರುವ ಎಲ್ಲ ಶಾಲೆಗಳಲ್ಲಿ ಸಮಾನ ಪಠ್ಯಕ್ರಮ ಆರಂಭಿಸಬೇಕೆಂದು ಕೇಂದ್ರ ಸರಕಾರಕ್ಕೆ ನಿರ್ದೇಶನ ನೀಡಬೇಕೆಂದು ಅವರು ವಿನಂತಿಸಿದ್ದರು. ಅರ್ಜಿದಾರರು ಸಂವಿಧಾನ ದತ್ತ ಸಮಾನತೆ ಮತ್ತು ಶಿಕ್ಷಣದ ಹಕ್ಕುಗಳ ಅನ್ವಯ ಎಲ್ಲ ಶಾಲೆಗಳಲ್ಲಿ ಸಮಾನ ಪಠ್ಯಕ್ರಮ ಇರಬೇಕೆಂದು ಅರ್ಜಿಯಲ್ಲಿ ಹೇಳಿಕೊಂಡಿದ್ದರು.