‘ಪಟ್ಟಿಯಲ್ಲಿರುವ ಭಾರತೀಯರ ವಿರುದ್ಧ ಕಠಿಣ ಕ್ರಮ ಸಾಧ್ಯವಿಲ್ಲ’
ಹೊಸದಿಲ್ಲಿ, ಎ.5: ಸೋರಿಕೆಯಾಗಿರುವ ಪನಾಮಾ ದಾಖಲೆಗಳಲ್ಲಿ ಕಾಣಿಸಿಕೊಂಡಿರುವ ಪಟ್ಟಿಯಲ್ಲಿ ಹೆಸರಿರುವ 500 ಮಂದಿ ಭಾರತೀಯರು ತೆರಿಗೆ ವಂಚನೆಗಾಗಿ ಕೇವಲ ಒಂದು ಸಣ್ಣ ಮೊತ್ತವನ್ನು ದಂಡವಾಗಿ ಮಾತ್ರ ಪಾವತಿಸಬೇಕಾಗಬಹುದು. ಈ ದಾಖಲೆಗೆಳ ಬಗ್ಗೆ ಸ್ಪಷ್ಟ ಮಾಹಿತಿಯನ್ನು ಪಡೆಯುವುದು ಕಷ್ಟಕರವಾಗಬಹುದಾದುದರಿಂದ ಅವರಿಗೆ ಜೈಲು ಶಿಕ್ಷೆ ಮುಂತಾದ ಕಠಿಣ ಶಿಕ್ಷೆ ವಿಧಿಸುವ ಅವಕಾಶವಿಲ್ಲವೆನ್ನಲಾಗಿದೆ.
ಭಾರತದ ಖ್ಯಾತ ನಟರಾದ ಅಮಿತಾಭ್ ಬಚ್ಚನ್, ಐಶ್ವರ್ಯಾ ರೈ ಹಾಗೂ ಹಲವು ಉದ್ಯಮಿಗಳ ಹೆಸರಿರುವ ಪನಾಮ ಮೂಲದ ಕಾನೂನು ಸಂಸ್ಥೆ ಮೊಸ್ಸೆಕ್ ಪೊನ್ಸೆಕಾದ ದಾಖಲೆಗಳನ್ನು ಇಂಟರ್ನ್ಯಾಶನಲ್ ಕನ್ಸೋರ್ಟಿಯಂ ಆಫ್ ಇನ್ವೆಸ್ಟಿಗೇಟಿವ್ ಜರ್ನಲಿಸ್ಟ್ಸ್ ಬಿಡುಗಡೆ ಮಾಡಿತ್ತು. ಆದರೆ ಈ ದಾಖಲೆಗಳ ಬಗ್ಗೆ ಮಾಹಿತಿಯನ್ನು ವಿದೇಶಗಳ ಸರಕಾರಗಳು ಭಾರತದ ಆದಾಯ ತೆರಿಗೆ ಇಲಾಖೆಗೆ ಡಬಲ್ ಟ್ಯಾಕ್ಸೇಶನ್ ಅವಾಯ್ಡೆನ್ಸ್ ಅಗ್ರೀಮೆಂಟ್ (ಡಿಟಿಎಎ)ಅನ್ವಯ ಮಾತ್ರ ಒದಗಿಸಲಾಗುವುದು.
ಇದರರ್ಥ ತೆರಿಗೆ ವಂಚಕರ ವಿರುದ್ಧ ಪ್ರಿವೆನ್ಶನ್ ಆಫ್ ಮನಿ ಲಾಂಡರಿಂಗ್ ಕಾಯ್ದೆ ಹಾಗೂ ಫಾರೆನ್ ಎಕ್ಸ್ ಚೇಂಜ್ ಮ್ಯಾನೇಜ್ಮೆಂಟ್ ಕಾಯ್ದೆಯನ್ವಯ ಕಾನೂನು ಕ್ರಮ ಕೈಗೊಳ್ಳಲಾಗುವುದಿಲ್ಲ. ಡಿಟಿಎಎ ಅನ್ವಯ ಭಾರತ ಸುಮಾರು 88 ದೇಶಗಳೊಂದಿಗೆ ಒಪ್ಪಂದ ಮಾಡಿಕೊಂಡಿದೆ.
ಸೋಮವಾರದಂದು ದಿಲ್ಲಿಯಲ್ಲಿ ಮುಖ್ಯ ಕಾರ್ಯಾಲಯವಿರುವ ಜಾರಿ ನಿರ್ದೇಶನಾಲಯ ಪಟ್ಟಿಯಲ್ಲಿರುವ 500 ಮಂದಿಯ ಬಗೆಗಿನ ದಾಖಲೆಗಳನ್ನು ದೇಶದಲ್ಲಿನ ತನ್ನ ಇತರ 16 ವಿಭಾಗೀಯ ಘಟಕಗಳಿಂದ ಕೇಳಿದೆ. ಸೋರಿಕೆಗೊಂಡ ದಾಖಲೆಗಳ ಪಟ್ಟಿಯಲ್ಲಿ ದಾವೂದ್ ಇಬ್ರಾಹಿಂ ಸಹವರ್ತಿ ಹಾಗೂ 2013ರಲ್ಲಿ ಇಂಗ್ಲೆಂಡಿನಲ್ಲಿ ಮೃತ ಪಟ್ಟ ಇಕ್ಬಾಲ್ ಮಿರ್ಚಿ ಹೆಸರೂ ಸೇರಿದೆ.