ಅಧಿಕಾರಿಗಳ ಬೆವರಿಳಿಸಿದ ಗೋವಾ ಕನ್ಹಯ್ಯಾ!
ಗೋವಾಗೆ ಪ್ರತಿ ವರ್ಷ ಲಕ್ಷಾಂತರ ಪ್ರವಾಸಿಗರು ಆಗಮಿಸುತ್ತಾರೆ. ಕಡಲ ಕಿನಾರೆಯಲ್ಲಿ ರಿಲ್ಯಾಕ್ಸ್ ಆಗಿದ್ದು, ಮೀನು ಖಾದ್ಯ ಸವಿಯಲು, ಬೇಸಗೆಯ ಧಗೆಯಲ್ಲಿ ತಂಪು ಬಿಯರ್ ಹೀರಲು ಬರುತ್ತಾರೆ. ರಜೆ ಮುಗಿದ ಬಳಿಕ, ಗೋವಾದ ಅವಿಸ್ಮರಣೀಯ ದೃಶ್ಯಾವಳಿಗಳ ಫೋಟೊದೊಂದಿಗೆ ಸಂತೋಷದಿಂದ ಹಿಂದಿರುಗುತ್ತಾರೆ. ಆದರೆ ಗೋವನ್ನರ ಹೋರಾಟ ಇಲ್ಲದಿದ್ದರೆ ಈ ಚೆಲುವು ಎಂದೋ ಮಾಯವಾಗುತ್ತಿತ್ತು ಎಂಬ ಕಲ್ಪನೆಯೂ ಅವರಲ್ಲಿಲ್ಲ. ಈ ಮಂದಿಯ ಧೈರ್ಯ ಹಾಗೂ ಬದ್ಧತೆ, ಈ ಚೆಲುವಿನ ತಾಣವನ್ನು ಗಣಿಗಾರಿಕಾ ಕಾರ್ಪೊರೇಟ್ ಕಂಪೆನಿಗಳ ಕಪಿಮುಷ್ಟಿಗೆ ಸಿಗದಂತೆ ತಡೆದಿದೆ. ಇದು ಅಂಥ ಗೋವನ್ ಸಾಹಸಿಯ ಕಥೆ...
ರವೀಂದ್ರ ವೆಲಿಪ್ ಇನ್ನೂ 27ರ ತರುಣ. ಬುಡಕಟ್ಟು ಹೋರಾಟಗಾರ. ಗೌರೆಮ್ ಗ್ರಾಮದ ಪಂಚ. ವಿನಾಶಕಾರಿ ಗಣಿಗಾರಿಕೆ ವಿರುದ್ಧ ಕೆಚ್ಚೆದೆಯಿಂದ ಹೋರಾಡುತ್ತಿರುವ ಕ್ರಾಂತಿಕಾರಿ. ರೈನ್‌ಬೋ ವಾರಿಯನ್ಸ್ ಎಂಬ ಸಂಘಟನೆ ಹುಟ್ಟುಹಾಕಿ, ಗೋವಾ ರಾಜ್ಯದಲ್ಲಿ ಕೃಷಿ ಹಾಗೂ ಇತರ ಸ್ವಾಭಾವಿಕ ಹಾಗೂ ಪರಿಸರ ಆರ್ಥಿಕತೆಯನ್ನೇ ನಂಬಿರುವ ಮಂದಿಯ, ಸಮುದಾಯಗಳ ಹಾಗೂ ಸಹ ಸಂಘಟನೆಗಳ ಹಿತಾಸಕ್ತಿ ಕಾಪಾಡುವ ನಿಟ್ಟಿನಲ್ಲಿ ಹೋರಾಡುತ್ತಿದ್ದಾರೆ.
ರಾಜ್ಯದ ಜನರಿಗೆ ಸರಕಾರ ಆರ್ಥಿಕ ಹಾಗೂ ಕಾನೂನು ಭದ್ರತೆ, ಸಾಕಷ್ಟು ನೆರವು ಹಾಗೂ ದೀರ್ಘಕಾಲದಿಂದ ನಿರಾಕರಿಸಲ್ಪಟ್ಟ ಗೌರವ ಹಾಗೂ ಅಸ್ತಿತ್ವವನ್ನು ಕಲ್ಪಿಸಿಕೊಡುವ ನಿಟ್ಟಿನಲ್ಲಿ ಅವಿರತವಾಗಿ ಶ್ರಮಿಸುತ್ತಿದ್ದಾರೆ. ವೆಲಿಪ್ ತಮ್ಮ ಹೋರಾಟದ ಕಾರಣದಿಂದ ಸರಕಾರ ಹಾಗೂ ಕಾರ್ಪೊರೇಟ್ ಕಂಪೆನಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಇದಕ್ಕಾಗಿ ಸಂವಿಧಾನಾತ್ಮಕ ತತ್ವಗಳನ್ನು ಗಾಳಿಗೆ ತೂರಲೂ ಇವು ಸಿದ್ಧವಾಗಿವೆ. ನ್ಯಾಯಾಂಗ ಬಂಧನದಲ್ಲಿದ್ದ ಅವರ ಮೇಲೆ ಸಾದಾ ಉಪಕಾರಾಗೃಹದಲ್ಲಿ ಮಾರ್ಚ್ 23ರಂದು ಅಮಾನವೀಯವಾಗಿ ಹಲ್ಲೆ ಮಾಡಲಾಗಿದೆ. ಈ ಪ್ರಕರಣದಲ್ಲಿ ಇದುವರೆಗೂ ಎಫ್‌ಐಆರ್ ದಾಖಲಿಸಿಲ್ಲ. ಈ ಘೋರ ಲೋಕವನ್ನು ಮಾಧ್ಯಮಗಳು ಕೂಡಾ ಎತ್ತಿಹಿಡಿದಿವೆ. ಆದರೆ ಕೈಗಾರಿಕಾ ಸಚಿವಾಲಯ ಜತೆ ನಿಕಟ ಸಂಬಂಧ ಹೊಂದಿರುವ ಮಾಧ್ಯಮದ ಒಂದು ವರ್ಗ, ಈ ಸಂಚಿನಲ್ಲಿ ಶಾಮೀಲಾಗಿ ಮೌನವಾಗಿದೆ. ಇತ್ತೀಚೆಗೆ ನಡೆದ ಪತ್ರಿಕಾಗೋಷ್ಠಿಯಲ್ಲಿ ಈ ಮಾಧ್ಯಮ ದ್ವೇಷ ಬೆಳಕಿಗೆ ಬಂತು.
ವೆಲಿಪ್ ಮೇಲೆ ಹಲ್ಲೆ ನಡೆದ ಬಳಿಕ ಒಂದು ಸತ್ಯಶೋಧನಾ ಸಮಿತಿ ರಚಿಸಲಾಯಿತು. ಅದರಲ್ಲಿ ನಾನು, ಹೈದರಾಬಾದ್ ನಲ್ಸಾರ್ ಕಾನೂನು ವಿವಿಯ ಪ್ರೊ.ಅಮಿತಾ ಧಂಡ, ಲಂಡನ್ ಮೂಲದ ಸೌತ್ ಏಷ್ಯಾ ಸಾಲಿಡಾರಿಟಿ ಗ್ರೂಪ್‌ನ ಜಾನ್ ಫೆರ್ನಾಂಡಿಸ್ ಸದಸ್ಯರು. ಈ ವಾರ ರೈನ್‌ಬೋವಾರಿಯರ್ಸ್, ಮರ್ಡರಸ್ ಅಸಾಲ್ಟ್ ಆನ್ ಟ್ರೈಬಲ್ ರೆಸಿಸ್ಟನ್ಸ್ ಇನ್ ಗೋವಾ ಎಂಬ ಈ ಸತ್ಯಶೋಧನಾ ತಂಡದ ವರದಿ ಬಿಡುಗಡೆ ಮಾಡಲು ಪತ್ರಿಕಾಗೋಷ್ಠಿ ಕರೆದಿದ್ದರು.
ನ್ಯಾಯಾಂಗ ಬಂಧನದಲ್ಲಿದ್ದ ವೆಲಿಪ್ ಮೇಲೆ ಹಲ್ಲೆ ನಡೆದ ಮರುದಿನ ಗಣಿಗಾರಿಕೆ ವಿರೋಧಿ ಹೋರಾಟಗಾರರು ಘಟನೆಯನ್ನು ಖಂಡಿಸಿ, ತನಿಖೆಗೆ ಆಗ್ರಹಿಸಿದರು. ಇದಕ್ಕೆ ಸ್ಪಂದಿಸಿದ ಮುಖ್ಯಮಂತ್ರಿ, ಕಾರಾಗೃಹಗಳ ಇನ್‌ಸ್ಪೆಕ್ಟರ್ ಜನರಲ್ ಅವರ ಸ್ವತಂತ್ರ ತನಿಖಾ ವರದಿಯ ಅಂಶಗಳನ್ನು ನೋಡಿದ ಬಳಿಕ ಈ ಬೇಡಿಕೆಯನ್ನು ಪರಿಶೀಲಿಸುವುದಾಗಿ ಹೇಳಿಕೆ ನೀಡಿದರು.
ಆದಾಗ್ಯೂ ಯಾರು ಕೂಡಾ ಈ ಬಗ್ಗೆ ಎಫ್‌ಐಆರ್ ಏಕೆ ದಾಖಲಿಸಿಲ್ಲ ಎನ್ನುವುದನ್ನು ಏಕೆ ಪ್ರಶ್ನಿಸಿಲ್ಲ ಎಂಬ ಬಗ್ಗೆ ಸತ್ಯಶೋಧನಾ ಸಮಿತಿ ಗಮನ ಸೆಳೆದಿದೆ.
ಹಲವು ಮಂದಿ ಪತ್ರಕರ್ತರು, ಸತ್ಯಶೋಧನಾ ಸಮಿತಿ ಸದಸ್ಯರು ಜೈಲಿಗೆ ಭೇಟಿ ನೀಡಿದ್ದಾರೆಯೇ, ಐಜಿಯವರನ್ನು ಭೇಟಿಯಾಗಿದ್ದಾರೆಯೇ ಅಥವಾ ಜಾಮೀನು ಪಡೆದ ಬಳಿಕ ವೆಲಿಪ್ ಚಿಕಿತ್ಸೆ ಪಡೆಯುತ್ತಿರುವ ಗೋವಾ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ತೆರಳಿದ್ದಾರೆಯೇ ಎಂಬ ಪ್ರಶ್ನೆಗಳನ್ನು ಕೇಳಿದರು. ಆದರೆ ನಾವು ಪೊಲೀಸರಿಗೆ ಬದಲಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ ಎನ್ನುವುದನ್ನು ವರದಿಯಲ್ಲಿ ಸ್ಪಷ್ಟಪಡಿಸಿದ್ದೇವೆ. ಅಪರಾಧ ತನಿಖೆ ನಡೆಸಬೇಕಾದ್ದು ಪೊಲೀಸರ ಜವಾಬ್ದಾರಿ. ಅಪರಾಧ ದಂಡಸಂಹಿತೆಯ ಸೆಕ್ಷನ್ 154 (1) ಅನ್ವಯ ಎಫ್‌ಐಆರ್ ದಾಖಲಿಸಿರುವುದು ಅವರ ಕರ್ತವ್ಯ. ಇದು ಕಡ್ಡಾಯ ಹಾಗೂ ಈ ಹಿಂದೆ ಕೂಡಾ ತನಿಖೆ ಆರಂಭಿಸುವ ಮುನ್ನ ಇದನ್ನು ಪಾಲಿಸಲಾಗಿದೆ.
ಜತೆಗೆ ಕಾರಾಗೃಹಗಳ ಇನ್‌ಸ್ಪೆಕ್ಟರ್ ಜನರಲ್ ನೇಮಿಸಿದ ತನಿಖಾ ಸಮಿತಿ ಕೂಡಾ ವೆಲಿಪ್ ಜತೆ ಅಥವಾ ಅದೇ ಸೆಲ್‌ನಲ್ಲಿದ್ದ ನಾಲ್ವರು ಸಹ ಕೈದಿಗಳ ಜತೆ ಮಾತನಾಡಿಲ್ಲ.
ಆದರೆ ಮಾಧ್ಯಮದ ಒಂದು ವರ್ಗ, ಸತ್ಯಶೋಧನಾ ಸಮಿತಿಯ ಪ್ರಾಮಾಣಿಕತೆ ಬಗ್ಗೆ ಸಂಶಯ ವ್ಯಕ್ತಪಡಿಸುವ ಸಿದ್ಧಾಂತವನ್ನು ಮುಂದಿಟ್ಟಿದೆ. ಎರಡು ತನಿಖಾ ಸಮಿತಿಗಳನ್ನು ನೇಮಿಸಿರುವಂಥ ಗಂಭೀರ ಪ್ರಕರಣದ ಬಗ್ಗೆ ಕೂಡಾ ಇನ್ನೂ ಏಕೆ ಎಫ್‌ಐಆರ್ ದಾಖಲಿಸಿಲ್ಲ ಎಂಬ ನಮ್ಮ ಪ್ರಶ್ನೆಗೆ ಏಕೆ ಮಾಧ್ಯಮಗಳು ಆಕ್ಷೇಪಿಸುತ್ತಿವೆ?
ಅಪರಾಧ ದಂಡಸಂಹಿತೆಯ ಸೆಕ್ಷನ್ 154 (1) ಅನ್ನು ಶಾಸನಾತ್ಮಕ ಯೋಜನೆಯಡಿ ಅರ್ಥೈಸಿಕೊಳ್ಳಬೇಕು. ಯಾವುದೇ ಠಾಣೆಯ ಉಸ್ತುವಾರಿ ಹೊಂದಿರುವ ಅಧಿಕಾರಿಯ ವಿವೇಚನೆ ಮೇರೆಗೆ, ಎಫ್‌ಐಆರ್ ದಾಖಲಿಸದೇ ಪ್ರಾಥಮಿಕ ತನಿಖೆಯನ್ನು ನಡೆಸುವಂತಿಲ್ಲ. ಇಲ್ಲಿ ಇರುವ ಅವಕಾಶಗಳು ಗೊಂದಲಮಯವಾಗಿದ್ದರೂ, ಶಾಸನದ ಉದ್ದೇಶ ಸ್ಪಷ್ಟವಾಗಿದ್ದು, ಈ ಬಗ್ಗೆ ಯಾವುದೇ ಹೊಸ ನಿಯಮಾವಳಿ ಜಾರಿಗೆ ತರುವ ಅಗತ್ಯವನ್ನು ಕೋರ್ಟ್ ಹೇಳಬೇಕಿಲ್ಲ ಎಂದು ಸುಪ್ರೀಂಕೋರ್ಟ್ ಸ್ಪಷ್ಟಪಡಿಸಿದೆ.
ಭೂಮಿ ನಿರಾಕರಣೆ
ವೆಲಿಪ್ ವಿರುದ್ಧ್ಧದ ಹಲ್ಲೆ ಬಗ್ಗೆ ಏಕೆ ಎಫ್‌ಐಆರ್ ದಾಖಲಿಸಿಲ್ಲ ಎಂದು ಅರ್ಥ ಮಾಡಿಕೊಳ್ಳಬೇಕಾದರೆ, ವೆಲಿಪ್ ಮೇಲೆ ಹಲ್ಲೆ ನಡೆದದ್ದು ಏಕೆ ಎನ್ನುವುದನ್ನು ಮೊದಲು ಅರ್ಥ ಮಾಡಿಕೊಳ್ಳಬೇಕು.
ರವೀಂದ್ರ ವೆಲಿಪ್, ಗೋವಾದ ಕ್ವೆಪೆನ್ ತಾಲೂಕಿನ ಕೌರೆಂ ಎಂಬ ಬುಡಕಟ್ಟು ಗ್ರಾಮದಿಂದ ಬಂದವರು. ವೆಲಿಪ್ ಸಮುದಾಯಕ್ಕೆ ಸೇರುತ್ತಾರೆ. ಈ ಸಮುದಾಯ ಸಂವಿಧಾನಾತ್ಮಕವಾಗಿ 2000ದಲ್ಲಿ ಪರಿಶಿಷ್ಟ ಪಂಗಡ ಎಂದು ಗುರುತಿಸಲ್ಪಟ್ಟಿದೆ. ಪೋರ್ಚ್‌ಗೀಸ್ ಆಡಳಿತಾವಧಿಯಲ್ಲಿ ಈ ಸಮುದಾಯದ ಅರಣ್ಯ ಹಾಗೂ ಭೂಮಿಯ ಹಕ್ಕನ್ನು ವ್ಯವಸ್ಥಿತವಾಗಿ ನಿರಾಕರಿಸುತ್ತಾ ಬರಲಾಯಿತು. ಅದೇ ಪ್ರಕ್ರಿಯೆ ಪ್ರಜಾಸತ್ತಾತ್ಮಕ ಭಾರತದಲ್ಲೂ ಮುಂದುವರಿದಿದೆ. ಅವರ ಭೂಮಿಯನ್ನು ಬುಡಕಟ್ಟು ಜನಾಂಗಕ್ಕೆ ಹೊರತಾದವರು, ಅತಿಕ್ರಮಿಸಿಕೊಂಡು ಗಣಿಗಾರಿಕೆ ಕಂಪೆನಿಗಳಿಗೆ ವರ್ಗಾಯಿಸಿದ್ದಾರೆ. ಕಂಪೆನಿಗಳು ಹಾಗೂ ಇತರ ಜನರ ದುರಾಕ್ರಮಣ, ಬುಡಕಟ್ಟು ಜನರನ್ನು ದುರ್ಬಲರನ್ನಾಗಿ ಮಾಡಿದೆ. ಇಂದು ಕೌರೆಂ ಗ್ರಾಮದಲ್ಲಿ ಐದು ಕಬ್ಬಿಣ ಅದಿರು ಕಂಪೆನಿಗಳು ಕಾರ್ಯ ನಿರ್ವಹಿಸುತ್ತಿವೆ.
ಈಟಿಂಗ್ ಡಸ್ಟ್ ಎಂಬ ಕೃತಿಯಲ್ಲಿ ಹರ್ಟ್‌ಮನ್ ಡಿಸೋಜಾ ಉಲ್ಲೇಖಿಸುವಂತೆ, ದೇಶದ ಶೇಕಡ 35ರಷ್ಟು ಅದಿರು ರಫ್ತು ಮಾಡುವ ಸಲುವಾಗಿ ಗಣಿಗಾರಿಕೆ ಕಂಪೆನಿಗಳು ರಾಜ್ಯದ ಶೇ.8ರಷ್ಟು ಸಮೃದ್ಧ ಭೂಮಿಯನ್ನು ಬಳಸಿಕೊಂಡು ಅದರ ಶೇ.4ರಷ್ಟು ಹಣವನ್ನು ಮಾತ್ರ ಬೊಕ್ಕಸಕ್ಕೆ ಪ್ರತಿಯಾಗಿ ನೀಡುತ್ತಿವೆ.
2009ರ ಆರಂಭದಲ್ಲಿ ಕೌರೆಮ್ ಗ್ರಾಮದ ಯುವಕರು ಸಂಘಟಿತರಾಗಿ ಕೌರೆಮ್ ಆದಿವಾಸಿ ಬಚಾವೊ ಸಮಿತಿ ರಚಿಸಿಕೊಂಡರು. ಗಣಿಗಾರಿಕೆ ವಿರುದ್ಧ್ಧ ಹೋರಾಟ ಆರಂಭಿಸಿ, ಗಣಿಗಾರಿಕೆಯ ಯಾಂತ್ರೀಕರಣದ ವಿನಾಶಕಾರಿ ಅಂಶಗಳ ವಿರುದ್ಧ್ಧ ಜಾಗೃತಿ ಮೂಡಿಸಲು ತೊಡಗಿದರು. ಎಲ್ಲಾ ಮಾಲಿನ್ಯ ನಿಯಮಾವಳಿಗಳನ್ನೂ ಗಾಳಿಗೆ ತೂರಿ ಗಣಿಗಾರಿಕೆ ನಡೆಯುತ್ತಿದೆ. ತಮ್ಮ ಪ್ರತಿಪಾದನೆಯನ್ನು ಸಮರ್ಥಿಸಿಕೊಳ್ಳಲು ಗ್ರಾಮಸ್ಥರು ಮಾಹಿತಿ ಹಕ್ಕು ಕಾಯ್ದೆಯಡಿ ಮಾಹಿತಿಗಳನ್ನು ಕೇಳಿದ್ದಾರೆ. ಅಧಿಕಾರಿಗಳಿಗೆ ಪತ್ರವನ್ನೂ ಬರೆದಿದ್ದಾರೆ. ಆದರೆ ಅದನ್ನು ಯಾರೂ ಕಿವಿಗೆ ಹಾಕಿಕೊಂಡಿಲ್ಲ.
ಈ ಮಧ್ಯೆ ಸಮಿತಿಯ ಹೋರಾಟದ ಬಿಸಿ ತಟ್ಟಿ, ಕೆಲವರು ಸಮಿತಿಯ ಅಧ್ಯಕ್ಷ ನೀಲೇಶ್ ಗಾಂವ್ಕರ್ ಅವರ ಮೇಲೆ ದಾಳಿ ನಡೆಸಿದರು. 2011ರ ಮೇ ತಿಂಗಳಲ್ಲಿ ಮೆಕ್ಯಾನಿಕಲ್ ಇಂಜಿನಿಯರ್ ಗಾಂವ್ಕರ್, ವೆರ್ಣಾಗೆ ಹಿಂದಿರುಗುತ್ತಿದ್ದಾಗ ಅವರ ಭುಜಕ್ಕೆ ಕಬ್ಬಿಣದ ಸಲಾಕೆಯಿಂದ ಹೊಡೆಯಲಾಯಿತು. ಆಗ ಎಫ್‌ಐಆರ್ ದಾಖಲಾಯಿತು; ಆದರೆ ಹಲ್ಲೆಕೋರರು ಪತ್ತೆಯಾಗಲಿಲ್ಲ. ಪ್ರಕರಣವನ್ನು 2014ರಲ್ಲಿ ವಿಲೇವಾರಿ ಮಾಡಲಾಯಿತು.
ಕೆಲ ದಿನಗಳ ಬಳಿಕ ಮತ್ತೆ ಗಾಂವ್ಕರ್ ಮೇಲೆ ಹಲ್ಲೆ ನಡೆಯಿತು. ಆಗ ಯುನೈಟೆಡ್ ಟ್ರೈಬಲ್ ಅಸೋಸಿಯೇಶನ್ಸ್ ಅಲಯನ್ಸ್ ನೇತೃತ್ವದಲ್ಲಿ ಮತ್ತೆ ಚಳವಳಿ ಆರಂಭವಾಯಿತು. 12 ಬೇಡಿಕೆಗಳಿಗಾಗಿ ಹೋರಾಟಗಾರರು ಪಟ್ಟು ಹಿಡಿದರು. ಇವುಗಳ ಪೈಕಿ ಒಂದು ಬೇಡಿಕೆ ಎಂದರೆ ರಾಜ್ಯ ವಿಧಾನಸಭೆಯಲ್ಲಿ ಈ ಬುಡಕಟ್ಟು ಜನಾಂಗಕ್ಕೆ ಶೇ.12ರ ಮೀಸಲಾತಿ ನೀಡಬೇಕು ಎನ್ನುವುದು.
ಈ ಚಳವಳಿ ಅಧಿಕಾರ ಹಾಗೂ ಅಭಿವೃದ್ಧಿಯ ಲಾಭದಿಂದ ವಂಚಿತರಾದ ಬುಡಕಟ್ಟು ಜನ ಹಾಗೂ ಬುಡಕಟ್ಟು ಜನಾಂಗದವರಿಗೆ ಅವಕಾಶಗಳನ್ನು ವಂಚಿಸಿ ಅವರ ಭೂಮಿಯನ್ನು ಕಬಳಿಸಿ ಯಾವುದೇ ಪರಿಹಾರವನ್ನೂ ನೀಡದೇ ಪರಿಸ್ಥಿತಿಯ ದುರ್ಲಾಭ ಪಡೆದ ಜನರ ನಡುವಿನ ಸಂಘರ್ಷವಾಗಿ ಅದು ಮಹತ್ವ ಪಡೆಯಿತು. ಬುಡಕಟ್ಟು ಜನಾಂಗದವರು ಹೆದ್ದಾರಿ ಹಾಗೂ ರೈಲು ತಡೆಗಳನ್ನು ನಡೆಸಿದರು. ಪೊಲೀಸರೂ ಬಹಳ ಸಂಖ್ಯೆಯಲ್ಲಿದ್ದರು.
ಆ ದಿನ ಮಂಗೇಶ್ ಗಾಂವ್ಕರ್ ಹಾಗೂ ದಿಲೀಪ್ ವೆಲಿಪ್ ಎಂಬ ಇಬ್ಬರು ಬುಡಕಟ್ಟು ಮುಖಂಡರನ್ನು ಪೊಲೀಸರು ಹಾಗೂ ಇತರರ ಸಮ್ಮುಖದಲ್ಲೇ ಉರಿಯುತ್ತಿದ್ದ ಕಟ್ಟಡಕ್ಕೆ ತಳ್ಳಲಾಯಿತು. ಇಬ್ಬರೂ ಸಜೀವ ದಹನವಾದರು. ಈ ಬಗ್ಗೆ ತನಿಖೆ ನಡೆಯಿತಾದರೂ, ಆರೋಪಿಗಳು ದೋಷಮುಕ್ತರಾದರು.
ನ್ಯಾಯಕ್ಕಾಗಿ ಆಗ್ರಹ
ಈ ಎಲ್ಲ ಹೋರಾಟ ಹಾಗೂ ತಮ್ಮ ಮಂದಿಯ ಮೇಲಾದ ಹಿಂಸೆಗೆ ಸಾಕ್ಷಿಯಾಗಿದ್ದ ರವೀಂದ್ರ ವೆಲಿಪ್, ಪಂಚಾಯತ್ ಚುನಾವಣೆಗೆ ಸ್ಪರ್ಧಿಸಲು ನಿರ್ಧರಿಸಿದರು. ಗ್ರಾಮದ ಅತಿ ಕಿರಿಯ ಸ್ಪರ್ಧಿಯಾಗಿದ್ದ ಇವರು ಪಂಚರಾಗಿ ಆಯ್ಕೆಯೂ ಆದರು. ಅವರ ನೇತೃತ್ವದಲ್ಲಿ ಪಂಚಾಯತ್ ಅಕ್ರಮ ಗಣಿಗಾರಿಕೆಯನ್ನು ನಿಯಂತ್ರಿಸುವ ಪ್ರಯತ್ನ ಮಾಡಿ, ಹಲವು ನಿರ್ಣಯಗಳನ್ನು ಅಂಗೀಕರಿಸಿತು.
ಆದರೆ ಪ್ರತೀಕಾರವಾಗಿ ಗೋವಾದ ಗಣಿಗಾರಿಕೆ ಹಾಗೂ ಭೂವಿಜ್ಞಾನ ನಿರ್ದೇಶನಾಲಯ ಆದೇಶ ಹೊರಡಿಸಿ, ಅಕ್ರಮ ಗಣಿಗಾರಿಕೆ ತಡೆಯಲು ಗ್ರಾಮಪಂಚಾಯತ್‌ಗಳಿಗೆ ಅಧಿಕಾರವಿಲ್ಲ ಎಂದು ಸ್ಪಷ್ಟಪಡಿಸಿತು.
ಈ ಸಮಸ್ಯೆಯನ್ನು ಧನಾತ್ಮಕವಾಗಿಯೇ ಪರಿಹರಿಸಲು ವೆಲಿಪ್ ಹಾಗೂ ಗ್ರಾಮಸ್ಥರು ಮುಂದಾದರು. ತಾವೇ ಗಣಿಗಾರಿಕೆ ನಡೆಸುವುದು ಸೂಕ್ತ; ಈ ಮೂಲಕ ಗಣಿಗಾರಿಕೆಯನ್ನು ಎಲ್ಲ ಪರಿಸರ ನಿಯಮಗಳಿಗೆ ಅನುಸಾರವಾಗಿ ಪಾರದರ್ಶಕವಾಗಿ ಮಾಡಬೇಕು ಎಂಬ ನಿರ್ಧಾರಕ್ಕೆ ಬಂದರು. ಇದಕ್ಕಾಗಿ ಸಹಕಾರ ಸಂಘ ರಚಿಸಿಕೊಂಡರು. ಈ ಭಾಗದ ಹಲವು ಮಂದಿ ಗಣಿ ಕೆಲಸಗಾರರನ್ನು ತೆಗೆದು ಹಾಕಿರುವ ಹಿನ್ನೆಲೆಯಲ್ಲಿ ತಾವು ಗಣಿಗಾರಿಕೆಯನ್ನು ಯಶಸ್ವಿಯಾಗಿ ನಿರ್ವಹಿಸಬಹುದು ಎಂಬ ವಿಶ್ವಾಸದಲ್ಲಿದ್ದರು. ಸಾರಿಗೆ ವಹಿವಾಟಿನ ಪರಿಜ್ಞಾನವೂ ಅವರಿಗೆ ಇತ್ತು.
ಸಾಧನಾ ವಿವಿಧೋದ್ದೇಶ ಸಹಕಾರ ಸಂಘ ಎಂಬ ಹೆಸರಿನಲ್ಲಿ ನೋಂದಾಯಿಸಲು ವೆಲಿಪ್ ಮುಂದಾದರು. ಭಾರತದ ಸಂವಿಧಾನದ ಸೆಕ್ಷನ್ 19 (1) (ಎ) ಅನ್ವಯ ಭಾರತೀಯ ನಾಗರಿಕರು ಸಹಕಾರ ಸಂಘಗಳನ್ನು ರಚಿಸಿಕೊಳ್ಳುವುದು ಮೂಲಭೂತ ಹಕ್ಕು. ಆದರೆ 2014ರಿಂದ ಇದುವರೆಗೂ ಈ ಸೊಸೈಟಿಯನ್ನು ನೋಂದಾಯಿಸಿಕೊಳ್ಳಲು ರಿಜಿಸ್ಟ್ರಾರ್ ಆಫ್ ಸೊಸೈಟೀಸ್ ನಿರಾಕರಿಸುತ್ತಿದೆ. ಇದುವರೆಗೂ ಅನುಮತಿ ಸಿಕ್ಕಿಲ್ಲ.
ಯಾರಿಗೆ ಮೊರೆ?
ಗೋವಾದ ಪರಿಶಿಷ್ಟ ಜಾತಿ ಹಾಗೂ ಪಂಗಡಗಳ ಆಯೋಗದ ಕಾರ್ಯವ್ಯಾಪ್ತಿಯಲ್ಲಿ, ಪರಿಶಿಷ್ಟರ ಹಕ್ಕನ್ನು ಸಂರಕ್ಷಿಸಲು ವಿಫಲವಾಗುವ ಸಾರ್ವಜನಿಕ ಅಧಿಕಾರಿಗಳ ವಿರುದ್ಧ್ಧ ಕ್ರಮಕ್ಕೆ ಶಿಫಾರಸ್ಸು ಮಾಡುವುದೂ ಸೇರುತ್ತದೆ.. ಈ ಪ್ರಕರಣದಲ್ಲಿ ಅಂಥ ಶಿಫಾರಸ್ಸು ಮಾಡಲು ಅವಕಾಶವಿತ್ತು. ಆದರೆ ಬುಡಕಟ್ಟು ಜನರ ಹಕ್ಕು ಸಂರಕ್ಷಣೆಗೆ ಆಯೋಗ ಯಾವ ಗಂಭೀರ ಪ್ರಯತ್ನವನ್ನೂ ಮಾಡಿಲ್ಲ.
ಈ ಮಧ್ಯೆ ರವೀಂದ್ರ ವೆಲಿಪ್ ಜೀವಕ್ಕೆ ಅಪಾಯವಿದೆ. ಮಾಧ್ಯಮ ಇಡಿಯಾಗಿ ಅಲ್ಲದಿದ್ದರೂ ಒಂದು ವರ್ಗ ಅವರ ಮೇಲೆ ದ್ವೇಷಸಾಧನೆಗೆ ಹವಣಿಸುತ್ತಿದೆ. ನನ್ನ ಅನಿಸಿಕೆಯಂತೆ ದಲಿತರು, ಆದಿವಾಸಿಗಳು ಹಾಗೂ ಯುವಕರು ದೇಶಾದ್ಯಂತ ನಮ್ಮ ಸಮಾಜ ಹಾಗೂ ರಾಜಕೀಯ ವ್ಯವಸ್ಥೆಯ ಅಧಿಕಾರಯುತ ಸಂರಚನೆಗೆ ಸವಾಲಾಗಿದ್ದಾರೆ. ಗೋವಾದಲ್ಲಿ ಅದು ರವೀಂದ್ರ ವೆಲಿಪ್ ಇರಬಹುದು; ಹೈದರಾಬಾದ್‌ನಲ್ಲಿ ರೋಹಿತ್ ವೇಮುಲಾ, ದಿಲ್ಲಿಯಲ್ಲಿ ಕನ್ಹಯ್ಯೆ ಕುಮಾರ್. ಇವರ ಪ್ರಯತ್ನಗಳು ಭಾರತದ ಸ್ವಾತಂತ್ರ್ಯ ಹೋರಾಟವನ್ನು ಮುಂದಕ್ಕೆ ಒಯ್ಯುವ ಪ್ರಯತ್ನ. ಅವರು ನಮ್ಮ ಕಾಲದ ಭಗತ್‌ಸಿಂಗ್‌ಗಳು ಎಂದರೆ ಅತಿಶಯೋಕ್ತಿಯಲ್ಲ.
ಈ ಸತ್ಯಶೋಧನಾ ತಂಡ ತನ್ನ ವರದಿಯಲ್ಲಿ ಘಟನೆಯ ವಿವಿಧ ಮಜಲುಗಳನ್ನು ಪರಿಶೀಲಿಸಿ, ಏಳು ಆಗ್ರಹಗಳನ್ನು ಮುಂದಿಟ್ಟಿದೆ.
1. ಅಪರಾಧ ದಂಡಸಂಹಿತೆಯನ್ನು ಉಲ್ಲಂಘಿಸಿ, ಈ ಘಟನೆ ಬಗ್ಗೆ ಎಫ್‌ಐಆರ್ ದಾಖಲಿಸಲು ಪೊಲೀಸರು ಏಕೆ ಹಿಂದೇಟು ಹಾಕುತ್ತಿದ್ದಾರೆ ಎಂಬ ಬಗ್ಗೆ ಸ್ವತಂತ್ರ ತನಿಖೆ ನಡೆಯಬೇಕು.
2. ಯುನೈಟೆಡ್ ಟ್ರೈಬಲ್ ಅಸೋಸಿಯೇಶನ್ ಅಲೈನ್ಸ್ ಸಲ್ಲಿಸಿರುವ 12 ಅಂಶಗಳ ಬೇಡಿಕೆ ಪಟ್ಟಿಯನ್ನು ಸ್ವೀಕರಿಸಬೇಕು.3. ಗಣಿಗಾರಿಕಾ ಕಾರ್ಯಾಚರಣೆಯಲ್ಲಿ ಯಾವುದೇ ಅಕ್ರಮಗಳು ನಡೆಯದಂತೆ ನೋಡಿಕೊಳ್ಳಲು ಮೇಲ್ವಿಚಾರಣೆ ಅಧಿಕಾರವನ್ನು ಗ್ರಾಮ ಪಂಚಾಯತ್‌ಗಳಿಗೆ ಸಂಪೂರ್ಣ ಅಧಿಕಾರ ನೀಡಬೇಕು.
4. ಕಸ್ಟಡಿಯಲ್ಲಿದ್ದ ರವೀಂದ್ರ ವೆಲಿಪ್ ಅವರ ರಕ್ಷಣೆಗೆ ವಿಫಲವಾದ ಜೈಲು ಅಧಿಕಾರಿಗಳು ವೆಲಿಪ್‌ಗೆ ಸೂಕ್ತ ಪರಿಹಾರ ನೀಡಬೇಕು.
5. ಭಾರತದ ಸಂವಿಧಾನದತ್ತ ಮೂಲಭೂತ ಹಕ್ಕಿನ ಅನ್ವಯ, ಅದರಲ್ಲೂ ಮುಖ್ಯವಾಗಿ 14ನೆ ವಿಧಿ ಮತ್ತು 19 (1) (ಸಿ) ವಿಧಿ ಅನ್ವಯ ಸಹಕಾರ ಸಂಘವನ್ನು ಸ್ಥಾಪಿಸುವ ಮತ್ತು ಸಂಘಗಳನ್ನು ರಚಿಸುವುದು ಮೂಲಭೂತ ಹಕ್ಕು. ಆದ್ದರಿಂದ ಸರಕಾರ ತಕ್ಷಣ ಕೌರೆಂ ಸಹಕಾರ ಸಂಘವನ್ನು ನೋಂದಾಯಿಸಿಕೊಳ್ಳಬೇಕು ಹಾಗೂ ಅದು ಯಶಸ್ವಿಯಾಗಲು ಅಗತ್ಯ ನೆರವನ್ನು ನೀಡಬೇಕು.
6. ಗೋವಾದ ಬುಡಕಟ್ಟು ಜನಾಂಗದವರು ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯ ನ್ಯಾಯ ಪಡೆಯಲು ರಾಜ್ಯದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಆಯೋಗ ರಚನಾತ್ಮಕ ಹಾಗೂ ಸಕ್ರಿಯ ಪಾತ್ರವನ್ನು ನಿರ್ವಹಿಸಬೇಕು.
7. ಕೊನೆಯದಾಗಿ, ವಿಶ್ವಸಂಸ್ಥೆಯ ಜಾಗತಿಕ ಒಪ್ಪಂದದಲ್ಲಿ ಸೂಚಿಸಿರುವ ಹತ್ತು ಮೂಲತತ್ವಗಳನ್ನು ಗಣಿಗಾರಿಕೆ ಕಂಪೆನಿಗಳು ಕಟ್ಟುನಿಟ್ಟಾಗಿ ಪಾಲಿಸುವಂತೆ ನೋಡಿಕೊಳ್ಳಬೇಕು.