×
Ad

ಈಗ ಕನ್ಹಯ್ಯ ಎಮರ್ಜಿಂಗ್ ಬ್ರ್ಯಾಂಡ್ !

Update: 2016-04-06 23:47 IST

ಹೊಸದಿಲ್ಲಿ, ಎ.6: ದೇಶದ್ರೋಹದ ಆರೋಪದ ಮೇಲೆ ಬಂಧಿತನಾಗಿ ಈಗ ಬಿಡುಗಡೆಯಾಗಿರುವ ಜವಾಹರ್‌ಲಾಲ್ ನೆಹರೂ ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ನಾಯಕ ಕನ್ಹಯ್ಯಾ ಕುಮಾರ್ ಅವರ ‘ಆಝಾದಿ’ ಕರೆ ವಿವಿಧ ಶೋಷಣೆಗಳಿಂದ ಸ್ವಾತಂತ್ರ್ಯ ಒದಗಿಸುವ ವಿಚಾರದ ಹೊಸ ಸಂಕೇತವಾಗಿದೆ. ಕೆಲವು ರಾಜಕಾರಣಿಗಳು, ರ್ಯಾಪ್ ಹಾಡುಗಾರ ಹಾಗೂ ಪ್ರವಾಸಿ ವೆಬ್‌ಸೈಟ್ ಕನ್ಹಯ್ಯಾ ಕುಮಾರ್ ಅವರ ಆಝಾದಿ ಘೋಷಣೆಯಿಂದ ಸ್ಫೂರ್ತಿ ಪಡೆದಿದ್ದಾರೆ.

ವಿದ್ಯಾರ್ಥಿ ಸಂಘದ ನಾಯಕನೊಬ್ಬನನ್ನುಇಷ್ಟೊಂದು ದೊಡ್ಡ ವಟ್ಟದಲ್ಲಿ ಎತ್ತಿ ಹಿಡಿದಿರುವುದು ಸಿಪಿಐನ ವಿದ್ಯಾರ್ಥಿ ಘಟಕ ಆಲ್ ಇಂಡಿಯಾ ಸ್ಟೂಡೆಂಟ್ಸ್ ಫೆಡರೇಶನ್‌ಗೆ ಸಮ್ಮತವೆಂದೇ ಹೇಳಲಾಗುತ್ತಿದೆ. ದೇಶದ ಜನಪ್ರಿಯ ಟ್ರಾವೆಲ್ ವೆಬ್‌ಸೈಟ್ ಯಾತ್ರಾ.ಕಾಂ ಈಗಾಗಲೇ ಕನ್ಹಯ್ಯಾರನ್ನೇ ಹೋಲುವಂತಹ ಯುವಕನೊಬ್ಬ ಕಾಣಿಸಿಕೊಳ್ಳುವಂತಹ ಹಾಗೂ ಬಿಹಾರಿಯಂತೆ ಬಿಂಬಿತವಾಗಿರುವ ಯುವಕನೊಬ್ಬ ವಿಮಾನದಲ್ಲಿ ಕಿಟಿಕಿ ಬದಿಯ ಸೀಟು ಬೇಕೆಂದು ಹೇಳುತ್ತಿರುವ ತಮಾಷೆಯ ಜಾಹೀರಾತು ವೀಡಿಯೊವೊಂದನ್ನು ಬಿಡುಗಡೆ ಮಾಡಿದ್ದು ಈ ವೀಡಿಯೊದಲ್ಲ್ಲಿ ಆ ಯುವಕನಿಗೆ ಆ ಸೀಟು ದೊರೆಯದಿದ್ದಾಗ ಆತ ಆಝಾದಿಯ ಮಂತ್ರ ಪಠಿಸುತ್ತಾ ತನಗೆ ಎಲ್ಲಿ ಬೇಕೆಂದರೂ ಕುಳಿತುಕೊಳ್ಳುವ ಸ್ವಾತಂತ್ರ್ಯವಿದೆಯೆಂದು ಹೇಳಿದಾಗ ಇತರರೂ ಆತನ ಜತೆಗೂಡುತ್ತಾರೆ.
‘‘ಪ್ರವಾಸಿಗರನ್ನು ಸಂತಸ ಪಡಿಸುವುದು ನಮ್ಮ ಉದ್ದೇಶ. ಇದಕ್ಕಾಗಿ ನಾವು ಆಯ್ದುಕೊಂಡ ವಿಧಾನನಿಮ್ಮ ಪ್ರಯಾಣವನ್ನು ನಿಮ್ಮ ಅನುಕೂಲಕ್ಕೆತಕ್ಕಂತೆ ಪ್ಲಾನ್ ಮಾಡಲು ನಾವು ನೀಡುವ ಸ್ವಾತಂತ್ರ್ಯ.’’ ಎಂದು ಯಾತ್ರಾ.ಕಾಂನ ಮುಖ್ಯ ಮಾರ್ಕೆಟಿಂಗ್ ಅಧಿಕಾರಿ ವಿಕ್ರಾಂತ್ ಮುದಲಿಯಾರ್ ಹೇಳುತ್ತಾರೆ.

ಆದರೆ ಸಾಮಾಜಿಕ ಜಾಲತಾಣದಲ್ಲಿ ಜನಪ್ರಿಯವಾದ ಈ 1.15 ಅವಧಿಯ ಕಮರ್ಷಿಯಲ್‌ನಿಂದ ಯಾತ್ರಾ.ಕಾಂ ಪ್ರಯೋಜನ ಪಡೆಯುವ ಮೊದಲೇ ಸಿದ್ಧಾರ್ಥ್ ಶರ್ಮ ಆಝಾದಿ ವಿಷಯದ ಮೇಲೆ ರ್ಯಾಪ್ ಹಾಡೊಂದನ್ನು ಸಿದ್ಧಪಡಿಸಿದ್ದರು.
ದಿಲ್ಲಿಯ ಎಎಪಿ ಸರಕಾರಕ್ಕೆಕನ್ಹಯ್ಯೆರ ಆಝಾದಿ ಘೋಷಣೆ ಹೆಚ್ಚುತ್ತಿರುವ ವಿದ್ಯುತ್ ಹಾಗೂ ನೀರಿನ ಬಿಲ್ಲುಗಳಿಂದಸ್ವಾತಂತ್ರ್ಯವೆಂದಾದರೆ, ಅದು ಆ ಪಕ್ಷಕ್ಕೆ ಬಿಜೆಪಿಯನ್ನು ಬೆಲೆಯೇರಿಕೆಯ ವಿರುದ್ಧ ಟೀಕಿಸುವ ಅಸ್ತ್ರವೂ ಆಗಿ ಬಿಟ್ಟಿದೆ.
‘‘ಯಾವುದೇ ಸಿದ್ಧಾಂತಗಳಿಗೆ ಅಂಟಿಕೊಳ್ಳದ ಕನ್ಹಯ್ಯಾರ ಸಂದೇಶ ಮಾಧ್ಯಮದಿಂದ ಹಿಡಿದು ಮಾರ್ಕೆಟಿಂಗ್ ಕ್ಷೇತ್ರದ ವೃತ್ತಿಪರರ ಗಮನ ಸೆಳೆದಿದೆ’’ ಎಂದು ಶೈಕ್ಷಣಿಕ ತಜ್ಞ ಅಪೂರ್ವಾನಂದ ಹೇಳುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News