×
Ad

ಐಪಿಎಲ್‌ನಲ್ಲಿ ಧೋನಿ-ಕೊಹ್ಲಿ ನಾಯಕತ್ವ ಹಣಾಹಣಿ

Update: 2016-04-06 23:49 IST

ಹೊಸದಿಲ್ಲಿ,ಎ.6: ಟ್ವೆಂಟಿ-20 ವಿಶ್ವಕಪ್ ಮುಗಿಯಿತು. ಇನ್ನು ಐಪಿಎಲ್ ಹಣಾಹಣಿ. ಒಂದೇ ತಂಡದಲ್ಲಿ ಟೀಮ್ ಇಂಡಿಯಾ ಪರ ಆಡಿರುವ ಧೋನಿ, ಕೊಹ್ಲಿ, ರೈನಾ, ರೋಹಿತ್, ಜಡೇಜ ಇದೀಗ ಬೇರೆ ಐಪಿಎಲ್ ತಂಡಗಳಲ್ಲಿ ಆಡಲು ಸಜ್ಜಾಗಿದ್ದಾರೆ.
ಸ್ಪಾಟ್ ಫಿಕ್ಸಿಂಗ್, ಬೆಟ್ಟಿಂಗ್ ಹಗರಣದಲ್ಲಿ ತಂಡದ ಮಾಲಕರು ಸಿಲುಕಿಕೊಂಡ ಹಿನ್ನೆಲೆಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಜಸ್ಥಾನ ರಾಯಲ್ಸ್ ತಂಡ ಎರಡು ವರ್ಷಗಳ ಕಾಲ ಐಪಿಎಲ್‌ನಿಂದ ಹೊರದಬ್ಬಲ್ಪ್ಟಟ್ಟಿದ್ದು, ಇವುಗಳ ಬದಲಿಗೆ ಎರಡು ಹೊಸ ತಂಡಗಳು ಒಂಬತ್ತನೇ ಆವೃತ್ತಿಗೆ ಸೇರ್ಪಡೆಗೊಂಡಿದೆ.
 ಧೋನಿ  ರೈಸಿಂಗ್ ಪುಣೆ ಸೂಪರ್ ಜೈಂಟ್ಸ್ ತಂಡದ ನಾಯಕ: ರೈಸಿಂಗ್ ಪುಣೆ ಸೂಪರ್‌ಜೈಂಟ್ಸ್ ಮತ್ತು ಗುಜರಾತ್ ಲಯನ್ಸ್ ಈ ಬಾರಿ ಸೇರ್ಪಡೆಗೊಂಡಿರುವ ಹೊಸ ತಂಡಗಳು. ಹಿಂದೆ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕರಾಗಿದ್ದ ಮಹೇಂದ್ರ ಸಿಂಗ್ ಧೋನಿ ಇದೀಗ ರೈಸಿಂಗ್ ಪುಣೆ ಸೂಪರ್ ಜೈಂಟ್ಸ್ ತಂಡದ ನಾಯಕತ್ವ ವಹಿಸಿಕೊಂಡಿದ್ದಾರೆ.
 ಎಂಟು ವರ್ಷಗಳ ಕಾಲ ಚೆನ್ನೈ ತಂಡದಲ್ಲಿದ್ದುಕೊಂಡು ಎರಡು ಬಾರಿ ಐಪಿಎಲ್ ಮತ್ತು ಚಾಂಪಿಯನ್ಸ್ ಲೀಗ್‌ನಲ್ಲಿ ಚಾಂಪಿಯನ್‌ಪಟ್ಟ ತಂದುಕೊಟ್ಟಿದ್ದ ಧೋನಿಗೆ ಮುಂದಿನ ಎರಡು ಆವೃತ್ತಿಗಳಲ್ಲಿ ಹೊಸ ತಂಡವನ್ನು ಮುನ್ನಡೆಸುವ ಅವಕಾಶ. ಆದರೆ ಹೊಸ ತಂಡ ಸೇರ್ಪಡೆಗೊಳ್ಳುವ ಹೊತ್ತಿಗೆ ಹಿಂದೆ ಚೆನ್ನೈ ತಂಡದಲ್ಲಿದ್ದ ಹಲವು ಮಂದಿ ಸಹ ಆಟಗಾರರನ್ನು ಧೋನಿ ಕಳೆದುಕೊಂಡಿದ್ದಾರೆ.
 ಸುರೇಶ್ ರೈನಾ, ಬ್ರೆಂಡನ್ ಮೆಕಲಮ್, ಡ್ವೇಯ್ನೆ ಬ್ರಾವೊ ಮತ್ತು ರವೀಂದ್ರ ಜಡೇಜ ಅವರು ಧೋನಿ ತಂಡದಿಂದ ದೂರವಾಗಿದ್ದಾರೆ. ಅವರೆಲ್ಲರೂ ಗುಜರಾತ್ ಲಯನ್ಸ್ ತಂಡ ಸೇರ್ಪಡೆಗೊಂಡಿದ್ಧಾರೆ.
 ರವಿಚಂದ್ರನ್ ಅಶ್ವಿನ್, ಕೆವಿನ್ ಪೀಟರ್ಸನ್, ಅಜಿಂಕ್ಯ ರಹಾನೆ, ಎಫ್‌ಡು ಪ್ಲೆಸಿಸ್, ಸ್ಟೀವನ್ ಸ್ಮಿತ್ ಅವರು ಧೋನಿ ತಂಡದಲ್ಲಿದ್ದಾರೆ.
ಧೋನಿ ಟ್ವೆಂಟಿ-20 ವಿಶ್ವಕಪ್‌ನಲ್ಲಿ ತಂಡವನ್ನು ಫೈನಲ್‌ಗೆ ಮುನ್ನಡೆಸುವಲ್ಲಿ ವಿಫಲರಾಗಿದ್ದರು. ಇದೀಗ ಅವರಿಗೆ ಹೊಸ ತಂಡಕ್ಕೆ ಚೊಚ್ಚಲ ಟ್ರೋಫಿಯನ್ನು ತಂದು ಕೊಡುವ ಸವಾಲು ಎದುರಾಗಿದೆ. ಧೋನಿ ತಂಡದಲ್ಲಿ ಧೋನಿ ಸೇರಿದಂತೆ ಮೂವರು ಅಂತಾರಾಷ್ಟ್ರೀಯ ಕ್ರಿಕೆಟ್ ನಾಯಕರಾಗಿದ್ಧಾರೆ. ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಸ್ಟೀಪನ್ ಫ್ಲೆಮಿಂಗ್ ಕೋಚ್ ಆಗಿದ್ದರು. ಇದೀಗ ಪುಣೆ ತಂಡಕ್ಕೂ ಕೋಚ್ ಆಗಿ ಫ್ಲೆಮಿಂಗ್ ನೇಮಕಗೊಂಡಿದ್ದಾರೆ. ಈ ಕಾರಣದಿಂದಾಗಿ ಧೋನಿ-ಫ್ಲೆಮಿಂಗ್ ಜೊತೆಯಾಟ ಮುಂದುವರಿದಿದೆ.
ಕೊಹ್ಲಿ ಆರ್‌ಸಿಬಿ ನಾಯಕರಾಗಿ ಮುಂದುವರಿಕೆ: ಮಹೇಂದ್ರ ಸಿಂಗ್ ಧೋನಿ ಭಾರತದ ಸೀಮಿತ ಓವರ್‌ಗಳ ಕ್ರಿಕೆಟ್ ತಂಡದ ನಾಯಕತ್ವನ್ನು ತೊರೆದರೆ ತೆರವಾಗುವ ಸ್ಥಾನಕ್ಕೆ ಸಹಜ ಆಯ್ಕೆ ವಿರಾಟ್ ಕೊಹ್ಲಿ. ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡದ ನಾಯಕರಾಗಿರುವ ವಿರಾಟ್ ಕೊಹ್ಲಿಗೆ ಈ ಬಾರಿ ನಾಯಕತ್ವದ ಸತ್ವ ಪರೀಕ್ಷೆಗೆ ಇನ್ನೊಂದು ಅವಕಾಶ. ಅವರ ತಂಡದಲ್ಲಿ ಕ್ರಿಸ್ ಗೇಲ್, ಎಬಿಡಿ ವಿಲಿಯರ್ಸ್‌, ಶೇನ್ ವ್ಯಾಟ್ಸನ್ ಇದ್ದಾರೆ.
ಕಳೆದ ಎಂಟು ವರ್ಷಗಳಲ್ಲಿ ಆರ್‌ಸಿಬಿಗೆ ಪ್ರಶಸ್ತಿ ಗೆಲ್ಲಲು ಸಾಧ್ಯವಾಗಲಿಲ್ಲ. ಕಳೆದ ಟ್ವೆಂಟಿ-20ವಿಶ್ವಕಪ್‌ನಲ್ಲಿ ಉತ್ತಮ ಫಾರ್ಮ್‌ನಲ್ಲಿದ್ದ ಕೊಹ್ಲಿ ಅದೇ ಪ್ರದರ್ಶನವನ್ನು ಐಪಿಎಲ್‌ನಲ್ಲೂ ಮುಂದುವರಿಸುವುದನ್ನು ನಿರೀಕ್ಷಿಸಲಾಗಿದೆ. ನ್ಯೂಝಿಲೆಂಡ್ ತಂಡದ ಮಾಜಿ ನಾಯಕ ಡೇನಿಯೆಲ್ ವೆಟೋರಿ ಆರ್‌ಸಿಬಿ ಕೋಚ್.
  ಝಹೀರ್ ಡೆಲ್ಲಿ ತಂಡದ ಹೊಸ ಜವಾಬ್ದಾರಿ: ಟೀಮ್ ಇಂಡಿಯಾದ ಮಾಜಿ ನಂ.1 ವೇಗದ ಬೌಲರ್ ಝಹೀರ್ ಖಾನ್ ಡೆಲ್ಲಿ ಡೇರ್ ಡೆವಿಲ್ಸ್ ತಂಡದ ಹೊಸ ನಾಯಕರಾಗಿ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ. ಅಪಾರ ಅನುಭವಿ ಝಹೀರ್ ಖಾನ್‌ಗೆ ತಂಡವನ್ನು ಮುನ್ನಡೆಸುವ ಸಾಮರ್ಥ್ಯ ಇದ್ದರೂ, ಅವರು ಆಗಾಗ ಫಿಟ್‌ನೆಸ್ ಸಮಸ್ಯೆ ಎದುರಿಸುತ್ತಿರುವುದು ದೊಡ್ಡ ಸಮಸ್ಯೆ.ಕಳೆದ ಆವೃತ್ತಿಯಲ್ಲಿ ಫಿಟ್‌ನೆಸ್ ಸಮಸ್ಯೆಯಿಂದಾಗಿ ಅವರು ಆಡಿರಲಿಲ್ಲ.ಆದರೆ ತಂಡದಲ್ಲಿ ಹಿರಿಯ ಅನುಭವಿ, ಮತ್ತು ಪ್ರತಿಭಾವಂತ ಆಟಗಾರರಿದ್ದಾರೆ. ಗೋಡೆ ಖ್ಯಾತಿಯ ಕಲಾತ್ಮಕ ಬ್ಯಾಟ್ಸ್‌ಮನ್ ರಾಹುಲ್ ದ್ರಾವಿಡ್ ಡೆಲ್ಲಿ ತಂಡದ ಕೋಚ್.
  ರೈನಾ ಗುಜರಾತ್ ಲಯನ್ಸ್‌ಗೆ: ಸುರೇಶ್ ರೈನಾ ಈ ಮೊದಲು ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿದ್ದರು, ಎಂಟು ಆವೃತಿಗಳಲ್ಲಿ ಧೋನಿ ನಾಯಕತ್ವದಲ್ಲಿ ಆಡಿದ್ದರು. ರೈನಾ ಈ ಬಾರಿ ಗುಜರಾತ್ ಲಯನ್ಸ್‌ನ ಸಾರಥ್ಯ ವಹಿಸಿಕೊಂಡಿದ್ದಾರೆ. ಫಾರ್ಮ್ ಕಳೆದುಕೊಂಡಿರುವ ರೈನಾಗೆ ಹೊಸ ತಂಡದಲ್ಲಿ ಹೊಸ ಸವಾಲು ಎದುರಾಗಿದೆ.132 ಪಂದ್ಯಗಳನ್ನು ಆಡಿರುವ ರೈನಾ ಅನುಭವಿ ಆಟಗಾರ. ತಂಡದಲ್ಲಿ ಅವರೊಂದಿಗೆ ಬ್ರೆಂಡನ್ ಮೆಕಲಮ್, ಡ್ವೇಯ್ನೆ ಬ್ರಾವೊ ಮತ್ತು ಡೇಲ್ ಸ್ಟೇಯ್ನಾ ಇದ್ದಾರೆ. ಬ್ರಾಡ್ ಹಾಡ್ಜ್ ತಂಡದ ಕೋಚ್.
ಗಂಭೀರ್ ಕೋಲ್ಕತಾ : ಭಾರತ ಕ್ರಿಕೆಟ್ ತಂಡದ ಮಾಜಿ ಆರಂಭಿಕ ದಾಂಡಿಗ ಗೌತಮ್ ಗಂಭೀರ್ ನಾಯಕತ್ವದಲ್ಲಿ ಕೋಲ್ಕತಾ ನೈಟ್ ರೈಡರ್ಸ್‌ ತಂಡ ಎರಡು ಬಾರಿ ಐಪಿಎಲ್ ಚಾಂಪಿಯನ್‌ಶಿಪ್‌ನ್ನು ಗೆದ್ದುಕೊಂಡಿತ್ತು.
ತಂಡದಲ್ಲಿ ಸ್ಟಾರ್ ಆಟಗಾರರ ಕೊರತೆ ಇದ್ದರೂ, ಗಂಭೀರ್ ಸೀಮಿತ ಸಂಪನ್ಮೂಲವನ್ನು ಬಳಸಿಕೊಂಡು ತಂಡಕ್ಕೆ ಎರಡು ಬಾರಿ ಟ್ರೋಫಿ ತಂದು ಕೊಟ್ಟಿದ್ದಾರೆ. ಯೂಸುಫ್ ಪಠಾಣ್, ರಾಬಿನ್ ಉತ್ತಪ್ಪ, ಸುನೀಲ್ ನರೇನ್, ಶಾಕಿಬ್ ಅಲ್ ಹಸನ್, ಮನೀಷ್ ಪಾಂಡೆ ತಂಡದಲ್ಲಿರುವ ಆಟಗಾರರು.
ದಕ್ಷಿಣ ಆಫ್ರಿಕದ ಗ್ರೇಟ್ ಜಾಕ್ ಕಾಲಿಸ್ ಮತ್ತು ವಸೀಮ್ ಅಕ್ರಮ್ ತಂಡದ ಕೋಚ್.
 ರೋಹಿತ್ ಶರ್ಮ ಮುಂಬೈ ಇಂಡಿಯನ್ಸ್‌ನ ನಾಯಕ: ರೋಹಿತ್ ಶರ್ಮ 2013ರಿಂದ ಮುಂಬೈ ಇಂಡಿಯನ್ಸ್‌ನ ನಾಯಕರಾಗಿದ್ದಾರೆ. ತಂಡದಲ್ಲಿ ಜಸ್‌ಪ್ರೀತ್ ಬುಮ್ರಾ, ಜೋಸ್ ಬಟ್ಲರ್, ಮತ್ತು ಕೋರಿ ಆ್ಯಂಡರ್ಸನ್ ತಂಡದ ಶಕ್ತಿ. ಕೀರನ್ ಪೊಲಾರ್ಡ್ ಮತ್ತು ಹರ್ಭಜನ್ ಸಿಂಗ್ ತಂಡದಲ್ಲಿದ್ದಾರೆ. ಲಸಿತ್ ಮಾಲಿಂಗ ಗಾಯಗೊಂಡಿರುವುದು ನಾಯಕ ರೋಹಿತ್‌ಗೆ ದೊಡ್ಡ ತಲೆನೋವು ತಂದಿದೆ.ರಿಕಿ ಪಾಂಟಿಂಗ್ ತಂಡದ ಕೋಚ್.
 ಡೇವಿಡ್ ವಾರ್ನರ್ ಸನ್‌ರೈಸರ್ಸ್‌ : ಡೇವಿಡ್ ವಾರ್ನರ್ ಸನ್‌ರೈಸರ್ಸ್‌ ತಂಡದ ನಾಯಕರು. ಕಳೆದ ಆವೃತ್ತಿಯಲ್ಲಿ ಅವರು ತಂಡದ ನಾಯಕರಾಗಿ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದು. ಆದರೆ ತಂಡವನ್ನು ಪ್ಲೇ ಆಫ್‌ಗೆ ತಲುಪಿಸುವಲ್ಲಿ ವಿಫಲರಾಗಿದ್ದರು. ಇಯಾನ್ ಮೊರ್ಗನ್ ಮತ್ತು ಕೇನೆ ವಿಲಿಯ್ಸುನ್ ತಂಡದಲ್ಲಿರುವ ಅಂತಾರಾಷ್ಟ್ರೀಯ ನಾಯಕರು. ಆಲ್‌ರೌಂಡರ್ ಯುವರಾಜ್ ಸಿಂಗ್ ಈ ಬಾರಿ ತಂಡಕ್ಕೆ ಹೊಸ ಸೇರ್ಪಡೆ.
 ಕಿಂಗ್ಸ್ ಇಲೆವೆನ್‌ಗೆ ಮಿಲ್ಲರ್ ನಾಯಕ: ದಕ್ಷಿಣ ಆಫ್ರಿಕದ ಆಟಗಾರ ಡೇವಿಡ್ ಮಿಲ್ಲರ್ ಕಳೆದ ಟ್ವೆಂಟಿ-20 ವಿಶ್ವಕಪ್‌ನಲ್ಲಿ ಮಾಡಿದ್ದು ಏನೂ ಇಲ್ಲ.ಕಳಪೆ ಪ್ರದರ್ಶನ ನೀಡಿದ್ದರು. ಅವರು ಕಿಂಗ್ಸ್ ಇಲೆವನ್ ತಂಡದ ನಾಯಕರು. ಶಾನ್ ಮಾರ್ಷ್, ಗ್ಲೆನ್ ಮ್ಯಾಕ್ಸ್‌ವೆಲ್, ಮುರಳಿ ವಿಜಯ್, ವೃದ್ಧಿಮಾನ್ ಸಹಾ ತಂಡದ ಆಟಗಾರರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News