ಕೇಂದ್ರಕ್ಕೆ ಉತ್ತರಾಖಂಡ್ ಹೈಕೋರ್ಟ್ ಎಚ್ಚರಿಕೆ
ನೈನಿತಾಲ್, ಎ. 8: ಉತ್ತರಾಖಂಡದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಿರುವ ಸಂಬಂಧ ಸಲ್ಲಿಕೆಯಾಗಿರುವ ಅರ್ಜಿಯ ವಿಚಾರಣೆ ನಡೆಸುತ್ತಿರುವ ಹೈಕೋರ್ಟ್ ವಿಭಾಗೀಯ ಪೀಠ ಎರಡನೇ ದಿನದ ವಿಚಾರಣೆಯಲ್ಲಿ, ಕೇಂದ್ರಕ್ಕೆ ಎಚ್ಚರಿಕೆ ನೀಡಿ ಯಾವ ಕಸರತ್ತಿನ ಪ್ರಯತ್ನ ಮಾಡಬೇಡಿ ಎಂದು ಹೇಳಿದೆ.
ಹೈಕೋರ್ಟ್‌ನ ರಜೆ ಅವಧಿಯಲ್ಲಿ (ಏಪ್ರಿಲ್ 13ರಿಂದ 17) ರಾಷ್ಟ್ರಪತಿ ಆಳ್ವಿಕೆ ವಾಪಾಸು ಪಡೆದು, ಬಹುಮತ ಸಾಬೀತುಪಡಿಸಲು ಬಿಜೆಪಿಗೆ ಅವಕಾಶ ನೀಡಲಿದೆ ಎಂದು ಆಪಾದಿಸಿ ಮಾಜಿ ಮುಖ್ಯಮಂತ್ರಿ ಹರೀಶ್ ರಾವತ್ ಅವರು ಸಲ್ಲಿಸಿದ ಅರ್ಜಿಯ ಹಿನ್ನೆಲೆಯಲ್ಲಿ ಕೇಂದ್ರಕ್ಕೆ ಈ ತಾಕೀತು ಮಾಡಿದೆ.
ಈ ಅರ್ಜಿಯನ್ನು ಗಂಭೀರವಾಗಿ ಪರಿಗಣಿಸಿದ ಮುಖ್ಯನ್ಯಾಯಮೂರ್ತಿ ಕೆ.ಎಂ.ಜೋಸೆಫ್ ಹಾಗೂ ವಿ.ಕೆ.ಬಿಷ್ಟ್ ಅವರನ್ನೊಳಗೊಂಡ ವಿಭಾಗೀಯ ನ್ಯಾಯಪೀಠ, ಕೇಂದ್ರದ ಪರ ವಾದ ಮಂಡಿಸುತ್ತಿರುವ ಅಟಾರ್ನಿ ಜನರಲ್ ಮುಕುಲ್ ರೋಹಟ್ಗಿ ಅವರನ್ನು ಈ ಬಗ್ಗೆ ಪ್ರಶ್ನೆ ಮಾಡಿತು. ಆದರೆ ಅದನ್ನು ಖಚಿತಪಡಿಸುವ ಸ್ಥಿತಿಯಲ್ಲಿ ತಾವು ಇಲ್ಲ. ಏಕೆಂದರೆ ಅದು ಉನ್ನತ ರಾಜಕೀಯ ಮಟ್ಟದ ನಿರ್ಧಾರ ಎಂದು ರೋಹಟ್ಗಿ ಅಸಹಾಯಕತೆ ವ್ಯಕ್ತಪಡಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಮೂರ್ತಿಗಳು ಹಾಗಿದ್ದರೆ, "ಯಾವುದೇ ಕಸರತ್ತು ನಡೆಸದಂತೆ" ಮಧ್ಯಂತರ ಆದೇಶ ನೀಡಬೇಕಾಗುತ್ತದೆ ಎಂದು ಸ್ಪಷ್ಟಪಡಿಸಿದರು. ಆಗ ರೋಹಟ್ಗಿ, ಯಾವುದೇ ನಿರ್ಧಾರವನ್ನು ಕೇಂದ್ರ ಕೈಗೊಳ್ಳುವ ಮುನ್ನ ಹೈಕೋರ್ಟ್‌ಗೆ ಮಾಹಿತಿ ನೀಡಲಿದೆ ಎಂದರು.
ರಾಷ್ಟ್ರಪತಿ ಆಳ್ವಿಕೆ ಹೇರಿಕೆ ಕ್ರಮವನ್ನು ಪ್ರಶ್ನಿಸಿ ರಾವತ್ ಸಲ್ಲಿಸಿರುವ ಅರ್ಜಿಗೆ ಪ್ರತಿಕ್ರಿಯೆ ಸಲ್ಲಿಸಲು ಏಪ್ರಿಲ್ 12ರವರೆಗೆ ಹೈಕೋರ್ಟ್, ಕೇಂದ್ರಕ್ಕೆ ಅವಕಾಶ ನೀಡಿತು.