ಗರ್ಭಿಣಿಯರಿಗೆ ಹಜ್ ಅವಕಾಶ ಇಲ್ಲ
ಬರೇಲಿ, ಎ. 8: ಹಜ್ ಸಮಿತಿಯ ಇತ್ತೀಚಿನ ನಿರ್ದೇಶನದ ಅನ್ವಯ, ಹಜ್‌ಯಾತ್ರೆಗೆ ಅರ್ಜಿ ಸಲ್ಲಿಸುವಾಗ ಗರ್ಭಿಣಿಯರಾಗಿರುವವರಿಗೆ ಮತ್ತು ಸೆಪ್ಟೆಂಬರ್‌ಗೆ ನಾಲ್ಕು ತಿಂಗಳ ಗರ್ಭಿಣಿಯಾಗಿರುವವರಿಗೆ ಹಜ್ ಯಾತ್ರೆಗೆ ಅವಕಾಶ ಇರುವುದಿಲ್ಲ. ಈ ಮಾಹಿತಿಯನ್ನು ಮುಚ್ಚಿಟ್ಟು ಹಜ್ ಪ್ರಯಾಣ ಬೆಳೆಸಿದರೂ, ವಿಷಯ ಗಮನಕ್ಕೆ ಬಂದ ತಕ್ಷಣ ಅವರನ್ನು ವಿಮಾನದಿಂದ ಹೊರಗೆ ಕಳುಹಿಸಲಾಗುವುದು ಎಂದು ಹಜ್ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಆದರೆ ವಿಮಾನದಲ್ಲಿ ಅವರನ್ನು ಯಾರು ತಪಾಸಣೆ ಮಾಡುತ್ತಾರೆ ಎನ್ನುವುದು ಸ್ಪಷ್ಟವಾಗಿಲ್ಲ.
"ಈ ಬಾರಿ ಪವಿತ್ರ ಹಜ್‌ಯಾತ್ರೆ ಸೆಪ್ಟೆಂಬರ್‌ನಲ್ಲಿ ಆರಂಭವಾಗಲಿದೆ. ಸೆಪ್ಟೆಂಬರ್‌ಗೆ ನಾಲ್ಕು ತಿಂಗಳ ಗರ್ಭಿಣಿಯಲ್ಲದವರು ಮಾತ್ರ ಯಾತ್ರೆ ಕೈಗೊಳ್ಳಲು ಅವಕಾಶ ಇರುತ್ತದೆ. ತಪ್ಪಿದರೆ ಪವಿತ್ರ ಸ್ಥಳ ಸಂದರ್ಶನಕ್ಕೆ ಅವಕಾಶ ನೀಡುವುದಿಲ್ಲ" ಎಂದು ಬರೇಲಿ ಹಜ್‌ಸೇವಾ ಸಮಿತಿ ಕಾರ್ಯದರ್ಶಿ ನಝಿಂ ಬೇಗ್ ಪ್ರಕಟಿಸಿದ್ದಾರೆ.
ಕೇಂದ್ರ ಹಜ್ ಸಮಿತಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅತಾವುರ್ ರಹ್ಮಾನ್ ಅವರಿಂದ ಈ ನಿರ್ದೇಶನ ಬಂದಿದ್ದು, ಅಂಥ ಮಹಿಳೆಯರು ತಮ್ಮ ಹಣ ವಾಪಾಸು ಪಡೆದು ಕಾಯ್ದಿರಿಸುವಿಕೆ ರದ್ದು ಮಾಡಬೇಕು ಎಂದು ಸೂಚಿಸಿದ್ದಾರೆ.
ಗರ್ಭಿಣಿಯರ ಹಿತಾಸಕ್ತಿ ಕಾಪಾಡುವ ಸಲುವಾಗಿಯೇ ಈ ನಿರ್ಧಾರ ಕೈಗೊಳ್ಳಲಾಗಿದೆ. ಏಕೆಂದರೆ ಮೊದಲ ಐದು ದಿನಗಳ ಯಾತ್ರೆ ಅತ್ಯಂತ ಕಠಿಣ. ಒಂದೆಡೆಯಿಂದ ಮತ್ತೊಂದು ಕಡೆಗೆ ವೇಗವಾಗಿ ಹೋಗಬೇಕಾಗುತ್ತದೆ. ಪವಿತ್ರ ವಿಧಿ ಅನ್ವಯ ಹಲವು ಪವಿತ್ರ ಸ್ಥಳಗಳನ್ನು ಸುತ್ತು ಹೊಡೆಯಬೇಕಾಗುತ್ತದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.