ಮಹಿಳಾ ನ್ಯಾಯಾಧೀಶೆಯೊಂದಿಗೆ ದಿಲ್ಲಿ ಕಾನ್ಸ್‌ಟೇಬಲ್ ಅನುಚಿತ ವರ್ತನೆ
ಹೊಸದಿಲ್ಲಿ, ಎ.8: ದಿಲ್ಲಿ ಪೊಲೀಸ್ ಕಾನ್‌ಸ್ಟೇಬಲ್‌ವೊಬ್ಬ ಕುಡಿದ ಅಮಲಿನಲ್ಲಿ ದಿಲ್ಲಿಯ ನ್ಯಾಯಾಲಯದ ಮೆಟ್ರೊಪಾಲಿಟನ್ ಮಹಿಳಾ ಮ್ಯಾಜಿಸ್ಟ್ರೇಟ್‌ರಿಗೆ ಲೈಂಗಿಕ ಕಿರುಕುಳ ನೀಡಿದ ಆಘಾತಕಾರಿ ಘಟನೆ ದಕ್ಷಿಣ ದಿಲ್ಲಿಯ ಯಮುನಾ ಘಾಟ್‌ನಲ್ಲಿ ನಡೆದಿದೆ.
ದಿಲ್ಲಿಯ ಮ್ಯಾಜಿಸ್ಟ್ರೇಟ್ ಅವರು ತಮ್ಮ ಪತಿ ಹಾಗೂ ಮಗನ ಜೊತೆ ಯಮುನಾ ಘಾಟ್‌ನಲ್ಲಿ ಧಾರ್ಮಿಕ ವಿಧಿ ವಿಧಾನದಲ್ಲಿ ಪಾಲ್ಗೊಳ್ಳಲು ತೆರಳಿದ್ದಾಗ ಈ ಘಟನೆ ನಡೆದಿದೆ.
ಮದ್ಯದ ಅಮಲಿನಲ್ಲಿದ್ದ ಕಾನ್‌ಸ್ಟೇಬಲ್ ನ್ಯಾಯಾಧೀಶೆ ಕುಳಿತಿದ್ದ ಕಾರಿನ ಬಳಿ ಬಂದು ಅಸಭ್ಯವಾಗಿ ನಡೆದುಕೊಂಡಿದ್ದಾನೆ. ಕಾರಿನ ಫೋಟೊವನ್ನು ತೆಗೆದಿದ್ದ ಆತ ಅವಾಚ್ಯ ಪದಗಳಿಂದ ಅವರನ್ನು ನಿಂದಿಸಿದ್ದಾನೆ. ನ್ಯಾಯಾಧೀಶೆ ಆಕ್ಷೇಪ ವ್ಯಕ್ತಪಡಿಸಿದಾಗ ಜೀವ ಬೆದರಿಕೆಯನ್ನು ಹಾಕಿದ್ದಾನೆ.
ಕುಡುಕ ಪೊಲೀಸ್ ಕಾನ್‌ಸ್ಟೇಬಲ್ ವಿರುದ್ಧ ಜೈತ್‌ಪುರದ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 341 ಹಾಗೂ 254-ಎ ಅಡಿ ಪ್ರಕರಣ ದಾಖಲಿಸಲಾಗಿದೆ.
ಯಮುನಾ ಘಾಟ್‌ನ ಪೊಲೀಸ್ ಪೋಸ್ಟ್‌ನ ಬಳಿ ಕಾರನ್ನು ಪಾರ್ಕ್ ಮಾಡಿ ಹಿಂದೂ ಧಾರ್ಮಿಕ ವಿಧಿ ವಿಧಾನ ನೆರವೇರಿಸಲು ಘಾಟ್‌ಗೆ ತೆರಳಿದ್ದೆ. ಎರಡೇ ನಿಮಿಷದಲ್ಲಿ ಮರಳಿ ಕಾರಿನ ಬಳಿ ಬಂದಾಗ ಪೊಲೀಸ್ ಕಾನ್‌ಸ್ಟೇಬಲ್ ನನ್ನ ಹಾಗೂ ನನ್ನ ಕಾರಿನ ಫೋಟೊ ತೆಗೆದ. ಈ ಕುರಿತು ತಾನು ಪ್ರಶ್ನಿಸಿದಾಗ, ನೀನು ಹೋಗು, ಇದು ನನ್ನ ಇಷ್ಟ. ಈಗ ನೀವು ಹೇಗೆ ಬಚಾವಾಗುತ್ತೀರಿ ಎಂದು ನೋಡುವೆ ಎಂದು ಆತ ಹೇಳಿದ. ಆತ ಕುಡಿದ ಮತ್ತಿನಲ್ಲಿರುವುದು ಕಂಡು ಬಂದಿತು. ನನ್ನ ಸಹಾಯಕ್ಕೆ ಬೇರ್ಯಾವ ಪೊಲೀಸ್ ಅಧಿಕಾರಿಗಳು ಮುಂದೆ ಬರಲಿಲ್ಲ ಎಂದು ಎಫ್‌ಐಆರ್‌ನಲ್ಲಿ ತಿಳಿಸಲಾಗಿದೆ.