ನೀವು ಇಲ್ಲಿ ಪಿಕ್ ನಿಕ್ ಮಾಡಿತ್ತಿದ್ದೀರಾ ?
ಹೊಸದಿಲ್ಲಿ , ಎ. 8: ಹರ್ಯಾಣ, ಗುಜರಾತ್ ಗಳ ತೀವ್ರ ಬರಪೀಡಿತ ಪ್ರದೇಶಗಳ ಜನರಿಗೆ ಸಹಾಯ ನೀಡುವಲ್ಲಿ ನಿರ್ಲಕ್ಷ್ಯ ತೋರಿಸಿದ್ದಕ್ಕೆ ಶುಕ್ರವಾರ ಸುಪ್ರೀಂ ಕೋರ್ಟ್ ಕೇಂದ್ರ ಸರಕಾರ ಹಾಗು ಬಿಜೆಪಿ ಆಡಳಿತವಿರುವ ಹರ್ಯಾಣ ಹಾಗು ಗುಜರಾತ್ ಸರಕಾರಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡಿದೆ. ಈ ಸಂದರ್ಭ ಕೇಂದ್ರದ ಹೆಚ್ಚುವರಿ ಸಾಲಿಸಿಟರ್ ಜನರಲ್ ಪಿಂಕಿ ಆನಂದ್ ಅವರು ಇನ್ನೊಂದು ನ್ಯಾಯಾಲಯದಲ್ಲಿದ್ದಾರೆ ಎಂದು ಕ್ಷುಲ್ಲಕ ಕಾರಣ ನೀಡಿ ವಿಚಾರಣೆಯನ್ನು ಮುಂದೂಡಲು ಕೋರಿದ ಕೇಂದ್ರ ಸರಕಾರಕ್ಕೆ ನ್ಯಾ. ಮದನ್ ಬಿ. ಲೋಕುರ್ ಹಾಗು ನ್ಯಾ. ಎನ್ ವಿ ರಮಣ ಅವರ ಪೀಠ ಚಾಟಿ ಬೀಸಿತು.
" ಇದು ನಿಮಗೆ ಆದ್ಯತೆಯಲ್ಲವೇ ? ಇಬ್ಬರು ನ್ಯಾಯಾಧೀಶರು ಇಲ್ಲಿ ಕುಳಿತಿದ್ದಾರೆ. ನಾವು ಏನನ್ನೂ ಮಾಡದೆ ಕೇವಲ ವಾಚ್ ನೋಡಿ ಸಮಯ ಕಳೆಯಬೇಕು ಎಂದು ನೀವು ಬಯಸುತ್ತೀರಿ. ಇಬ್ಬರು ಸುಪ್ರೀಂ ಕೋರ್ಟ್ ನ್ಯಾಯಾಧೀಶರು ಯಾವುದೇ ಕೆಲಸವಿಲ್ಲದೇ ಇಲ್ಲಿಗೆ ಬಂದು ಕೂತು ಗಡಿಯಾರ ನೋಡಿ ವಾಪಸ್ ಹೋಗಬೇಕು. ನೀವು ಈ ವಿಷಯದಲ್ಲಿ ಏನೇನೂ ಗಂಭೀರವಾಗಿಲ್ಲ " ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿತು.
ವಿಷಯ ತಿಳಿದ ಕೂಡಲೇ ಎ ಎಸ್ ಜಿ ಆನಂದ್ ಕೋರ್ಟ್ ತಲುಪಿದರು.
ಬಳಿಕ ಬರ ಪೀಡಿತ ಪ್ರದೇಶಗಳ ಕುರಿತು ಅಸಮರ್ಪಕ ಅಂಕಿ ಅಂಶ ನೀಡಿದ ಗುಜರಾತ್ ಹಾಗು ಹರ್ಯಾಣ ಸರಕಾರಗಳ ವಿರುದ್ಧ ನ್ಯಾಯಾಲಯ ತೀವ್ರ ಅಸಮಾಧಾನ ವ್ಯಕ್ತಪಡಿಸಿತು. " ನೀವು ಇದನ್ನು ಯಾಕೆ ಸಲ್ಲಿಸಿದ್ದೀರಿ ? ನಿಮಗೆ ನಿಮ್ಮ ಕಚೇರಿಯಲ್ಲಿ ಸಿಕ್ಕಿತು ಎಂದು ಇಲ್ಲಿಗೆ ತಂದು ಸಲ್ಲಿಸಿದ್ದೀರಾ ? ಇಂತಹ ವಿಷಯದಲ್ಲಿ ನೀವು ತೋರಿಸುವ ಗಂಭೀರತೆಯೇ ಇದು ? ಜನರು ಸಾಯುತ್ತಿದ್ದಾರೆ. ಇದು ನಿಮಗೆ ಹರ್ಯಾಣದಲ್ಲಿ ಪಿಕ್ನಿಕ್ ಅಲ್ಲ " ಎಂದು ಹರ್ಯಾಣ ಸರಕಾರವನ್ನು ತರಾಟೆಗೆ ತೆಗೆದುಕೊಂಡಿತು.
ಮೂರು ಜಿಲ್ಲೆಗಳ 526 ಗ್ರಾಮಗಳನ್ನು ಬರಪೀಡಿತ ಎಂದು ಘೋಷಿಸಲಾಗಿದೆ. ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯನ್ನು ಜಾಗಿಗೊಳಿಸಿ ಎಪ್ರಿಲ್ ಒಂದರಂದು ಸುತ್ತೋಲೆ ಹೊರಡಿಸಲಾಗಿದೆ ಎಂದು ಗುಜರಾತ್ ಸರಕಾರ ನ್ಯಾಯಾಲಯಕ್ಕೆ ತಿಳಿಸಿತು.
ಇದಕ್ಕೆ ಪ್ರತಿಕ್ರಿಯಿಸಿದ ಸುಪ್ರೀಂ ಕೋರ್ಟ್ ಕಳೆದ ವರ್ಷದ ಸೆಪ್ಟೆಂಬರ್ ನಲ್ಲೇ ಪರಿಸ್ಥಿತಿ ಸ್ಪಷ್ಟವಾಗಿದ್ದರೂ ಎಪ್ರಿಲ್ ವರೆಗೆ ಬರಪೀಡಿತ ಎಂದು ಘೋಷಿಸಲು ಸರಕಾರ ಕಾದದ್ದೇಕೆ ಎಂದು ಪ್ರಶ್ನಿಸಿತು. ಸ್ಥಳೀಯಾಡಳಿತ ಚುನಾವಣೆಯಿಂದ ಇದು ತಡವಾಯಿತು ಎಂದು ಗುಜರಾತ್ ಸರಕಾರ ಉತ್ತರಿಸಿದ್ದಕ್ಕೆ " ಚುನಾವಣೆ ಇದ್ದರೆ ಎಲ್ಲ ಕೆಲಸ ನಿಲ್ಲುತ್ತದೆಯೇ ?" ಎಂದು ತೀಕ್ಷ್ಣವಾಗಿ ಪ್ರಶ್ನಿಸಿತು ನ್ಯಾಯಾಲಯ.
ಎಷ್ಟು ರಾಜ್ಯಗಳಲ್ಲಿ ಬರ ನಿರ್ವಹಣಾ ಘಟಕವಿದೆ ಹಾಗು ಜಿಲ್ಲಾ ವಿಪತ್ತು ನಿರ್ವಹಣಾ ಘಟಕಗಳನ್ನು ಏಕೆ ರಚಿಸಲಾಗಿಲ್ಲ ಎಂದು ಕಳೆದ ಮಾರ್ಚ್ 31 ರಂದು ನ್ಯಾಯಾಲಯ ಕೇಂದ್ರ ಸರಕಾರವನ್ನು ಕೇಳಿತ್ತು.