×
Ad

ಐಪಿಎಲ್ ಪಂದ್ಯಗಳಿಗೆ ಕುಡಿಯುವ ನೀರು ಒದಗಿಸುವುದಿಲ್ಲ: ಮಹಾ ಸಿಎಂ ಫಡ್ನವೀಸ್

Update: 2016-04-08 23:11 IST

ಮುಂಬೈ,ಎ.8: ಐಪಿಎಲ್ ಪಂದ್ಯಗಳಿಗಾಗಿ ಪಿಚ್‌ಗಳ ನಿರ್ವಹಣೆಗಾಗಿ ಭಾರೀ ಪ್ರಮಾಣದ ನೀರು ಬಳಕೆಯಾಗುತ್ತಿರುವ ಕುರಿತು ಟೀಕೆಗೆ ಗುರಿಯಾಗಿರುವ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು, ಐಪಿಎಲ್ ಪಂದ್ಯಗಳನ್ನು ಹೊರಗೆ ಸ್ಥಳಾಂತರಿಸಿದರೂ ಮಹಾರಾಷ್ಟ್ರಕ್ಕೇನೂ ಸಮಸ್ಯೆಯಿಲ್ಲ, ಆದರೆ ಕ್ರಿಕೆಟ್ ಮೈದಾನಗಳನ್ನು ನಿರ್ವಹಿಸಲು ಕುಡಿಯುವ ನೀರನ್ನು ಒದಗಿಸುವುದಿಲ್ಲ ಎಂದು ಶುಕ್ರವಾರ ಇಲ್ಲಿ ಕಾರ್ಯಕ್ರಮವೊಂದರ ನೇಪಥ್ಯದಲ್ಲಿ ಸುದ್ದಿಗಾರರಿಗೆ ಸ್ಪಷ್ಟಪಡಿಸಿದರು.

ಶನಿವಾರ ಇಲ್ಲಿ ನಡೆಯಲಿರುವ ಪ್ರಥಮ ಐಪಿಎಲ್ ಪಂದ್ಯಕ್ಕೆ ತಡೆಯಾಜ್ಞೆ ನೀಡಲು ಗುರುವಾರ ನಿರಾಕರಿಸಿದ್ದ ಬಾಂಬೆ ಉಚ್ಚ ನ್ಯಾಯಾಲಯವು, ಕ್ರೀಡಾಂಗಣಗಳಿಗೆ ಟ್ಯಾಂಕರ್‌ಗಳಲ್ಲಿ ಪೂರೈಸಲಾಗುತ್ತಿರುವ ನೀರು ಕುಡಿಯಲು ಯೋಗ್ಯವಾಗಿರುವುದೇ ಎನ್ನುವುದನ್ನು ರಾಜ್ಯ ಸರಕಾರ ಮತ್ತು ಮಹಾನಗರಪಾಲಿಕೆಯಿಂದ ತಿಳಿಯಲು ಬಯಸಿತ್ತು.

ಪಿಚ್‌ಗಳ ನಿರ್ವಹಣೆಗಾಗಿ 60 ಲಕ್ಷ ಲೀಟರ್‌ಗೂ ಅಧಿಕ ನೀರಿನ ಬಳಕೆಯನ್ನು ಪ್ರಶ್ನಿಸಿ ನ್ಯಾಯಾಲಯಕ್ಕೆ ಅರ್ಜಿಯನ್ನು ಸಲ್ಲಿಸಿದ್ದ ನಗರದ ಸರಕಾರೇತರ ಸಂಸ್ಥೆ(ಎನ್‌ಜಿಒ)ಯೊಂದು ರಾಜ್ಯದಲ್ಲಿ ಸತತ ಎರಡನೇ ಬಾರಿಗೂ ಬರಗಾಲವಿರುವುದರಿಂದ ಐಪಿಎಲ್ ಪಂದ್ಯಗಳನ್ನು ರಾಜ್ಯದಿಂದ ಹೊರಕ್ಕೆ ಸ್ಥಳಾಂತರಿಸುವಂತೆ ಕೋರಿತ್ತು.

ಮುಂಬೈ,ಪುಣೆ ಮತ್ತು ನಾಗಪುರಗಳಲ್ಲಿ ಒಟ್ಟು 20 ಐಪಿಎಲ್ ಪಂದ್ಯಗಳನ್ನು ಆಡಲಾಗುತ್ತಿದ್ದು, ಈ ಎಲ್ಲ ನಗರಗಳೂ ನೀರಿನ ತೀವ್ರ ಬಿಕ್ಕಟ್ಟನ್ನು ಎದುರಿಸುತ್ತಿವೆ ಎಂದು ಅರ್ಜಿಯಲ್ಲಿ ಹೇಳಲಾಗಿತ್ತು. ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯವು ನೀರು ಧಾರಾಳ ಲಭ್ಯವಿರುವ ಬೇರೆ ರಾಜ್ಯಕ್ಕೆ ಪಂದ್ಯಗಳನ್ನು ಸ್ಥಳಾಂತರಿಸುವಂತೆ ಸಲಹೆ ನೀಡಿತ್ತಲ್ಲದೆ,ನಿಮ್ಮ ಕ್ರಿಕೆಟ್ ಪಂದ್ಯ ಜನರಿಗಿಂತ ಹೆಚ್ಚು ಮುಖ್ಯವೇ ಎಂದು ಪ್ರಶ್ನಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News