ಅಮಿತ್ ಶಾಗೆ ಇಷ್ಟು ಬೇಗ ಕ್ಲೀನ್ ಚಿಟ್ ಸಿಗುವಾಗ " ರಾಮಮಂದಿರ " ವಿಷಯ ಯಾಕೆ ಇತ್ಯರ್ಥ ಆಗುವುದಿಲ್ಲ ?

Update: 2016-04-09 10:16 GMT

ಮುಂಬೈ , ಎ. 9 : ಮಹಾರಾಷ್ಟ್ರ ನವನಿರ್ಮಾಣ ಸೇನೆಯ ಮುಖ್ಯಸ್ಥ ರಾಜ್ ಠಾಕ್ರೆ ಮತ್ತೆ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಮತ್ತೆ ವಾಗ್ದಾಳಿ ನಡೆಸಿದ್ದಾರೆ. ಮುಂಬೈಯಲ್ಲಿ ಗುಡಿ ಪಾಡ್ವ ಪ್ರಯುಕ್ತ ನಡೆದ ಸಮಾವೇಶದಲ್ಲಿ ಮಾತನಾಡುತ್ತಾ ಅವರು ಮೋದಿ ಸರಕಾರದ ಕಾರ್ಯ ವೈಖರಿಯನ್ನು ಟೀಕಿಸಿದರು. 
" ಯಾವ್ ಪ್ರಧಾನಿ ಇಷ್ಟು ವಿದೇಶ ಪ್ರವಾಸ ಹೋಗಿದ್ದಾರೆ ? ಎಲ್ಲಿವೆ ಅಚ್ಚೇ ದಿನ್ ? ಎಂದು ಪ್ರಶ್ನಿಸಿದ ಠಾಕ್ರೆ  ತಮ್ಮ ಪಕ್ಷಕ್ಕೆ ಸೂಕ್ತ  ಗೌರವ ನೀಡದ ಮೈತ್ರಿಕೂಟದಿಂದ ಶಿವಸೇನೆ ಹೊರಬರಬೇಕು ಎಂದು ಸವಾಲು ಹಾಕಿದರು. 


" ನೀವು ಕಪ್ಪು ಹಣ ವಾಪಸ್ ತರುತ್ತೇವೆ ಎಂದು ಭರವಸೆ ಕೊಟ್ಟಿರಿ. ಎಲ್ಲಿದೆ ಅದು ? ಈಗ ಇಲ್ಲಿಂದ ಕೊಟ್ಯಂತರ ಹಣದೊಂದಿಗೆ ವಿಜಯ್ ಮಲ್ಯ ಪರಾರಿಯಾಗಿದ್ದಾನೆ. " ಎಂದವರು ಚುಚ್ಚಿದರು. 


ಆಡಳಿತಕ್ಕೆ ಬರುವ ಮೊದಲು ಚಿನ್ನಾಭರಣ ಮಾರಾಟಗಾರರಿಗೆ ಬೆಂಬಲ ನೀಡುವ ಮಾತನಾಡಿದ ಮೋದಿ ಈಗ ಆಡಳಿತಕ್ಕೆ ಬಂದ ಮೇಲೆ ಈ ಹಿಂದೆ ತಾನೇ ವಿರೋಧಿಸಿದ ನೀತಿ ನಿಯಮಗಳನ್ನು ಹೇರುತ್ತಿದ್ದಾರೆ. ಚಿನ್ನಾಭರಣ ಮಾರಾಟಗಾರರು " ಏಕ್ ಹೀ ಬೂಲ್ , ಕಮಲ್ ಕೀ ಫೂಲ್  ( ಒಂದೇ ತಪ್ಪು, ಬಿಜೆಪಿಗೆ ಮತ ನೀಡಿದ್ದು ) " ಎಂದು ಈಗ ಹೇಳುತ್ತಿದ್ದಾರೆ. ನಾನು ಮೋದಿಯೇ ಭರವಸೆ ಎಂದು ಹೇಳುತ್ತಿದ್ದೆ. ಆದರೆ ಈಗ ಅವರ ಕಾರ್ಯವೈಖರಿ ನೋಡಿ ವಿರೋಧಿಸುತ್ತಿದ್ದೇನೆ " ಎಂದು ಹೇಳಿದ್ದಾರೆ. 


ನೀವು ನೂರು ದಿನದಲ್ಲಿ ಪವಾಡ ಮಾಡುತ್ತೇವೆ ಎಂದು ಹೇಳಿದ್ದಿರಿ . ಈಗ ಏನಾಗುತ್ತಿದೆ ? ಈಗ ನೀವು ಆರೆಸ್ಸೆಸ್ ಸಹಾಯ ಪಡೆದು ರಾಷ್ಟ್ರೀಯತೆಯ ಮಾತಾಡುತ್ತಿದ್ದೀರಿ. ಆರೆಸ್ಸೆಸ್ ಈಗ ಜನರಿಗೆ ದೇಶ ಪ್ರೇಮದ ಸರ್ಟಿಫಿಕೇಟ್ ನೀಡುತ್ತದೆಯೇ ? ಎಂದವರು ಪ್ರಶ್ನಿಸಿದರು . 


" ರಾಮ ಮಂದಿರದ ವಿಷಯ ಕೇಳಿದರೆ ಅದು ನ್ಯಾಯಾಲಯದ ಮುಂದಿದೆ ಎಂದು ಹೇಳುತ್ತೀರಿ. ಆದರೆ ಅಮಿತ್ ಶಾ ಗೆ ನ್ಯಾಯಾಲಯ ಕ್ಲೀನ್ ಚಿಟ್ ನೀಡಿಯೂ ಆಯಿತು. ಹಾಗಾದರೆ ರಾಮ ಮಂದಿರ ವಿಷಯ ಯಾಕೆ ಇತ್ಯರ್ಥ ಆಗುತ್ತಿಲ್ಲ " ಎಂದವರು ಸವಾಲು ಹಾಕಿದರು .
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News