ನಿಮ್ಮ ಗದ್ದೆ ಎಲ್ಲಿದೆ ಸಾರ್?

Update: 2016-04-09 18:08 GMT

ನನ್ನ ಗದ್ದೆಗೆ ನೀರಿಲ್ಲ...ನನ್ನ ಗದ್ದೆಗೆ ನೀರಿಲ್ಲ ಎಂದು ಮಹಾರಾಷ್ಟ್ರದ ರೈತ, ಪ್ರಧಾನಿ ನರೇಂದ್ರ ಮೋದಿಗೆ ಕೇಳುವಂತೆ ಅಳುತ್ತಿದ್ದ. ಅರೇ...ಇಷ್ಟು ಜೋರಾಗಿ ರೈತರು ಅಳುವುದನ್ನು ಪತ್ರಕರ್ತ ಎಂಜಲು ಕಾಸಿ ಇದೇ ಮೊದಲ ಬಾರಿ ಕೇಳಿರುವುದು. ಕಾಸಿ ನೇರವಾಗಿ ಮಹಾರಾಷ್ಟ್ರದೆಡೆಗೆ ಧಾವಿಸಿದ.

ನೋಡಿದರೆ ಮುಖ್ಯಮಂತ್ರಿ ಫಡ್ನವೀಸ್ ಅವರು ವಾಂಖೇಡೇ ಸ್ಟೇಡಿಯಂನ ಮಧ್ಯದಲ್ಲಿ ಕುಳಿತು ಜೋರಾಗಿ ಅಳುತ್ತಿದ್ದರು. "ಸಾರ್ ನೀವೇ ಅಳುವುದಾ...?" ಕಾಸಿ ಆತಂಕದಿಂದ ಕೇಳಿದ.

"ಅಳದೇ ಮತ್ತೇನು ಮಾಡಬೇಕು. ನಮ್ಮಂತಹ ಕೃಷಿಕರು ಕೃಷಿ ಮಾಡುವುದಕ್ಕೆ ಹೊರಟರೆ ನೀರು ಕೊಡುವುದಿಲ್ಲ ಎಂದು ಹೇಳುತ್ತಾರೆ...ಲಕ್ಷಾಂತರ ರೂಪಾಯಿ ಬಂಡವಾಳ ಹಾಕಿದ್ದೆಲ್ಲ ಸುಟ್ಟು ಕರಕಲಾಗಿ ಹೋಗುತ್ತದೆಯಲ್ಲ..." ಫಡ್ನವೀಸ್ ಬಾಯಿ ಬಾಯಿ ಬಡಿದುಕೊಳ್ಳತೊಡಗಿದರು.

"ಸಾರ್ ನಿಮ್ಮ ಗದ್ದೆ ಎಲ್ಲಿದೆ ಸಾರ್? ಏನು ಬಿತ್ತಿದ್ರಿ ಸಾರ್?" ಕಾಸಿ ಅರ್ಥವಾಗದೆ ಕೇಳಿದ.

"ನೋಡ್ರೀ ಕಾಸಿಯವ್ರೇ...ಒಂದೆಡೆ ದೇಶ ಕೃಷಿಯಲ್ಲಿ ಕ್ರಾಂತಿ ಮಾಡಬೇಕು ಎಂದು ಹೇಳುತ್ತಾರೆ. ಆದರೆ ಕೃಷಿ ಮಾಡುವುದಕ್ಕೆ ನೀರು ಕೇಳಿದರೆ ಕೋರ್ಟಿಗೆ ಹೋಗುತ್ತಾರೆ. ಇದು ಸರೀನಾ? "ಫಡ್ನವೀಸ್ ಪ್ರಶ್ನಿಸಿದರು. "ಕೃಷಿ ಮಾಡುವುದಕ್ಕೆ ನೀರು ಕೇಳಿದ್ದಕೆ ಕೋರ್ಟಿಗೆ ಹೋದ್ರಾ...ಸಾರ್ ನಿಮ್ಮ ಗದ್ದೆ ಎಲ್ಲಿದೆ ಸಾರ್?" ಕಾಸಿಗೆ ಇನ್ನಷ್ಟು ಗೊಂದಲವಾಯಿತು. ಫಡ್ನವೀಸ್ ಅವರು ವಾಂಖೇಡೆ ಸ್ಟೇಡಿಯಂನ್ನು ತೋರಿಸಿದರು "ಕಾಣುವುದಿಲ್ಲವೇನ್ರಿ...ಇಷ್ಟು ವಿಶಾಲ ಗದ್ದೆ....ಇಲ್ಲಿ ಕೃಷಿ ಮಾಡುವುದಕ್ಕೆ ನೀರು ಕೊಡಿ ಎಂದು ಕೇಳಿದರೆ ಕೋರ್ಟ್ ಬಾಯಿಗೆ ಬಂದಂತೆ ಬಯ್ಯುತ್ತದೆ. ಹೀಗಾದರೆ ನಾವು ಕೃಷಿಕರು ಬದುಕುವುದು ಹೇಗೆ? ನೀವೇ ಹೇಳಿ...." ಕಾಸಿಗೂ ಹೌದೆನಿಸಿತು. "ಯಾವ ಬೆಳೆ ಬೆಳೆಯಬೇಕು ಎಂದಿದ್ದೀರಿ ಸಾರ್...ಈ ಗದ್ದೆಯಲ್ಲಿ..."

"ನೋಡ್ರೀ...ಈಗ ಬೇರೆ ಯಾವುದೇ ಕೃಷಿ ಲಾಭದಾಯಕ ಅಲ್ಲ. ಆದುದರಿಂದಲೇ ರೈತ ಆತ್ಮಹತ್ಯೆ ಮಾಡುತ್ತಿದ್ದಾನೆ. ಆದುದರಿಂದ ಈ ಗದ್ದೆಯಲ್ಲಿ ನಾನು ಕ್ರಿಕೆಟ್ ಕೃಷಿ ಮಾಡಿ ರನ್‌ಗಳ ಬೆಳೆ ಬೆಳೆಯಬೇಕು ಎಂದು ತೀರ್ಮಾನಿಸಿದ್ದೆ...ಆದರೆ ಪಿಚ್‌ಗೆ ಸುರಿಯಲು ಕೋರ್ಟು ನೀರು ಕೊಡುವುದಿಲ್ಲ ಅನ್ನುತ್ತಿದ್ದೆ. ಇದೆಂತಹ ಅನ್ಯಾಯ...ರೈತರ ಮೇಲೆ ಇದೆಂತಹ ದೌರ್ಜನ್ಯ..." ಫಡ್ನವೀಸ್ ಗೊಳೋ ಎಂದು ಅಳ ತೊಡಗಿದರು. ಕಾಸಿಗೂ ಅಳು ಬಂತು. ಒಬ್ಬ ರೈತನನ್ನು ಹೀಗೆ ಅಳಿಸುವುದು ಯಾವ ನ್ಯಾಯ? ರೈತ ದೇಶದ ಬೆನ್ನೆಲುಬು ಎಂದು ಹೇಳುತ್ತಾರೆ. ಆದರೆ ನೀರು ಕೇಳಿದರೆ ಇಲ್ಲ ಎನ್ನುತ್ತಾರೆ.

"ಈ ಬಾರಿ ಕ್ರಿಕೆಟ್ ಕೃಷಿಗೆ ಒಳ್ಳೆ ಮಾರುಕಟ್ಟೆ ಬೆಲೆ ಸಿಗುತ್ತಿತ್ತಾ?" ಕಾಸಿ ಕೇಳಿದ.

"ಏನ್ರೀ ನೀವು ಹೀಗೆ ಹೇಳುತ್ತೀರಿ...ಹಿಂದೆ ಸಚಿನ್‌ನಂತಹ ಒಳ್ಳೆಯ ರೈತರು ಅದೆಷ್ಟೋ ರನ್‌ಗಳನ್ನು ಸಂಗ್ರಹಿಸಿರುವುದರಿಂದಲೇ ನಮ್ಮ ದೇಶದ ಆಹಾರ ಭದ್ರತೆ ಇನ್ನೂ ದುರ್ಬಲವಾಗದೇ ಇರುವುದು. ಅಂದು ಸೆಹವಾಗ್, ಸಚಿನ್‌ನಂತಹ ರೈತರು ಕ್ರಿಕೆಟ್ ಕೃಷಿ ಮಾಡಿ ಅಪಾರ ರನ್‌ಗಳನ್ನು ಸಂಗ್ರಹಿಸಿದ್ದು, ಅದನ್ನು ನಾವು ವಿದೇಶಗಳಿಗೆ ಮಾರಿ ಅದೆಷ್ಟು ವಿದೇಶಿ ವಿನಿಮಯ ಹೆಚ್ಚಿಸಿಲ್ಲ. ಈ ಬಾರಿ ಐಪಿಎಲ್ ಸೀಸನ್‌ನಲ್ಲಿ ಕ್ರಿಕೆಟ್ ಪಿಚ್‌ಗೆ ಹಲವು ಸಾವಿರ ಗ್ಯಾಲನ್ ಸುರಿದಿದ್ದರೆ, ರನ್‌ಗಳನ್ನು ರಾಶಿ ರಾಶಿಯಾಗಿ ಬೆಳೆಯಬಹುದಿತ್ತು. ಇಡೀ ದೇಶದ ಆಹಾರ ಕೊರತೆ ಇಂಗಿ ಬಿಡುತ್ತಿತ್ತು. ಅಪೌಷ್ಟಿಕತೆ ಇಲ್ಲವಾಗುತ್ತಿತ್ತು...ರೇಶನ್ ಅಂಗಡಿಯಲ್ಲಿ ಅಕ್ಕಿಗಳ ಬದಲಿಗೆ ರನ್‌ಗಳನ್ನು ಪುಕ್ಕಟೆಯಾಗಿ ವಿತರಿಸಿ ಬಿಪಿಎಲ್ ಕಾರ್ಡ್‌ನವರ ಆಹಾರದ ಸಮಸ್ಯೆಯನ್ನೇ ಇಲ್ಲವಾಗಿಸಬಹುದಿತ್ತು...."

ಎಂದು ತನ್ನ ಕೃಷಿಯ ಲಾಭಗಳನ್ನು ಫಡ್ನವೀಸ್ ವಿವರಿಸತೊಡಗಿದರು.

ಕಾಸಿಗೆ ನಿಜಕ್ಕೂ ಬಾಯಲ್ಲಿ ನೀರೂರಿತು. ಈ ಕೃಷಿಯನ್ನು ಬೆಳೆದದ್ದೇ ಆದರೆ, ಈ ದೇಶದಲ್ಲಿ ಅಚ್ಛೇ ದಿನ ಬಹಳ ಬೇಗ ಬರಲಿದೆ ಎನ್ನುವುದು ಅವನಿಗೆ ಮನವರಿಕೆಯಾಯಿತು. ಫಡ್ನವೀಸ್ ಇನ್ನಷ್ಟು ವಿವರಿಸಿದರು "ನೋಡಿ...ಈಗಾಗಲೇ ಈ ದೇಶದ ನೂರಾರು ರೈತರು ಈ ಗದ್ದೆಯಲ್ಲಿ ಬೆವರು ಸುರಿಸಿ ಕೆಲಸ ಮಾಡಲು ಸಿದ್ಧರಾಗಿ ನಿಂತಿದ್ದಾರೆ. ಇದೀಗ ನೀರು ಕೊಡದೇ ಇದ್ದುದರಿಂದ ಪಾಪ ಅವರೆಲ್ಲ ನಿರುದ್ಯೋಗಿಗಳಾಗಬೇಕಾಗುತ್ತದೆ. ಆಮೇಲೆ ಅವರೆಲ್ಲ ಆತ್ಮಹತ್ಯೆ ಮಾಡಿಕೊಂಡರೆ ಅದಕ್ಕೆ ಯಾರು ಹೊಣೆ? ಧೋನಿಯಂತಹ ಅದೆಷ್ಟೋ ರೈತರು ಇರುವುದರಿಂದ ಈ ದೇಶದಲ್ಲಿ ಕೃಷಿ ಎನ್ನುವುದು ಇನ್ನೂ ಉಳಿದಿದೆ....ಆದರೆ...." ಎನ್ನುತ್ತಾ ಮತ್ತೆ ಅಳತೊಡಗಿದರು.

ಕಾಸಿಯ ಕಣ್ಣಲ್ಲೂ ನೀರು ಬಂತು. "ಈಗಾಗಲೇ ರಾಜ್ಯಾದ್ಯಂತ ಬೃಹತ್ ಗೋದಾಮುಗಳನ್ನು ತೆರೆಯಲಾಗಿದೆ. ಇಲ್ಲಿ ಕೃಷಿ ನಡೆದರೆ, ರನ್‌ಗಳನ್ನೆಲ್ಲ ಅಲ್ಲಿ ಸಂಗ್ರಹಿಸಿಟ್ಟು ವಿದೇಶಕ್ಕೂ ರವಾನಿಸಲು ತೀರ್ಮಾನಿಸಲಾಗಿದೆ. ಈಗಾಗಲೇ ಒಬಾಮ ಸೇರಿದಂತೆ ಹಲವು ದೇಶಗಳ ಅಧ್ಯಕ್ಷರು, ಈ ಕುರಿತಂತೆ ಆಮದು ಮಾಡಲು ಪ್ರಸ್ತಾಪ ಇಟ್ಟಿದ್ದಾರೆ. ಇಲ್ಲಿ ರನ್‌ಗಳನ್ನು ಬೆಳೆದು ಅದನ್ನು ರಫ್ತು ಮಾಡಿದ್ದರೆ, ವಿಶ್ವದಲ್ಲೇ ಅತಿ ಹೆಚ್ಚು ಆಹಾರ ಉತ್ಪಾದನೆ ಮಾಡಿದ ದೇಶ ಎನ್ನುವ ಹೆಗ್ಗಳಿಕೆಗೂ ಭಾರತ ಪಾತ್ರವಾಗುತ್ತಿತ್ತು..." ಫಡ್ನವೀಸ್ ವಿವರಿಸಿದರು.

"ಛೇ ಛೇ..." ಎಂದ ಕಾಸಿ. "ರನ್‌ಗಳಿಂದ ಬಗೆ ಬಗೆಯ ಖಾದ್ಯಗಳನ್ನು ಮಾಡಬಹುದು. ಎಲ್ಲ ಹೊಟೇಲುಗಳಲ್ಲಿ ರನ್‌ಗಳ ಬಿರಿಯಾನಿ ಗಮಗಮಿಸುತ್ತಿತ್ತು. ರನ್‌ಗಳ ರೊಟ್ಟಿ, ರನ್‌ಗಳಿಂದ ಚಪಾತಿ ಕೂಡ ಮಾಡುವುದಕ್ಕೆ ಆಗುತ್ತದೆ. ರನ್‌ಗಳ ಬಳಕೆಯಿಂದ ಹೊಸ ಬಗೆಯ ಮ್ಯಾಗಿಯನ್ನು ತಯಾರಿಸಿ ಮಾರುಕಟ್ಟೆಗೆ ಬಿಡುವುದಾಗಿ ಬಾಬಾ ರಾಮ್‌ದೇವ್ ಭರವಸೆ ನೀಡಿದ್ದರು. ಹಾಗೆಯೇ ರನ್‌ಗಳಲ್ಲಿ ಕ್ಯಾನ್ಸರ್‌ನಂತಹ ಮಾರಕ ರೋಗಗಳಿಗೆ ಔಷಧಿಗಳನ್ನು ಕಂಡು ಹುಡುಕಿ ಅದನ್ನೂ ಪತಂಜಲಿಯ ಮೂಲಕ ಮಾರಾಟ ಮಾಡುತ್ತೇನೆ ಎಂದಿದ್ದರು. ಆದರೆ ಸರರ ರನ್‌ಗಳನ್ನು ಬೆಳೆಸಲು ಗದ್ದೆ ನೀರು ಬಿಡುವುದಿಲ್ಲ ಎಂದು ಹೇಳುತ್ತಿದೆ...ಹೀಗೆ ಈ ದೇಶದಲ್ಲಿ ಕೃಷಿಯ ಅವಸ್ಥೆ ಏನಾಗಬೇಕು..." ಫಡ್ನವೀಸ್ ಜೋರು ದನಿಯಲ್ಲಿ ಕೇಳಿದರು.

"ಸಾರ್...ರಾಜ್ಯದಲ್ಲಿ ಈಗಾಗಲೇ ನೂರಾರು ಕೃಷಿಕರು ಸಾಯುತ್ತಿದ್ದಾರೆ. ಅವರ ಬಗ್ಗೆ ಏನು ಹೇಳುತ್ತೀರಿ..." ಕಾಸಿ ಕೇಳಿದ.
"ನೋಡ್ರೀ ಅವರಿಂದಾಗಿಯೇ ಈಗ ನಾವು ವಾಂಖೇಡೆಯಲ್ಲಿ ಕೃಷಿ ಮಾಡದಂತಾಗಿದೆ. ಅವರು ತಮ್ಮ ಭೂಮಿಯನ್ನೆಲ್ಲ ಕ್ರಿಕೆಟ್ ಕೃಷಿಗೆ ಬಿಟ್ಟುಕೊಟ್ಟಿದ್ದರೆ ಇಂದು ಸಮಸ್ಯೆಯೇ ಇರಲಿಲ್ಲ. ರಾಜ್ಯದಲ್ಲಿರುವ ಎಲ್ಲ ಗದ್ದೆಗಳನ್ನು ಕ್ರಿಕೆಟ್ ಮೈದಾನ ಮಾಡಿ, ಎಲ್ಲ ನೀರನ್ನು ಪಿಚ್‌ಗೆ ಮಾತ್ರ ಬಳಸುವಂತಾಗಬೇಕು. ಈ ಕುರಿತಂತೆ ನಾನು ಶೀಘ್ರದಲ್ಲೇ ಕಾನೂನು ಮಾಡಬೇಕು ಎಂದು ಪ್ರಧಾನಿ ಮೋದಿಯವರನ್ನು ಕೇಳಿಕೊಂಡಿದ್ದೇನೆ. ಅದಕ್ಕೆ ಅವರು ಒಪ್ಪಿಕೊಂಡಿದ್ದಾರೆ. ಈ ದೇಶದ ನದಿ, ಕೆರೆ ಮತ್ತು ಕಡಲಿನ ನೀರನ್ನು ಮೊದಲು ಕ್ರಿಕೆಟ್ ಕೃಷಿಗೆ ಬಳಕೆ ಮಾಡುವಂತಾಗಬೇಕು.ಆ ಬಳಿಕ ಉಳಿದ ನೀರನ್ನು ಕುಡಿಯುವುದಕ್ಕೆ ಇನ್ನಿತರ ಕೃಷಿಗೆ ಬಳಸುವಂತಾಗಬೇಕು. ಈ ಬಗ್ಗೆ ಶೀಘ್ರದಲ್ಲೇ ಒಂದು ಜಲನೀತಿಯನ್ನು, ಕೃಷಿ ನೀತಿಯನ್ನು ಜಾರಿಗೆ ತಂದು ದೇಶದಲ್ಲಿ ಕೃಷಿಯನ್ನು ಉಳಿಸಿ ಬೆಳೆಸಬೇಕೆಂದಿದ್ದೇವೆ..."
"ಸಾರ್ ಉಳಿದವರಿಗೆ ನೀರು ಬೇಕಾದರೆ..." ಕಾಸಿ ಆತಂಕದಿಂದ ಕೇಳಿದ.

"ಉಳಿದವರಿಗೆ ಈ ದೇಶದಲ್ಲಿ "ಭಾರತ್ ಮಾತಾ ಕಿ ಜೈ" ಎಂದು ಕೂಗುವ ಹಕ್ಕನ್ನು ಧಾರಾಳವಾಗಿ ಕೊಡಲಾಗುತ್ತದೆ. ಆದರೆ ನೀರನ್ನು ಮಾತ್ರ ಅವರು ಮುಟ್ಟುವಂತಿಲ್ಲ..." ಫಡ್ನವೀಸ್ ಘೋಷಿಸಿದರು.

Writer - -ಚೇಳಯ್ಯ chelayya@gmail.com

contributor

Editor - -ಚೇಳಯ್ಯ chelayya@gmail.com

contributor

Similar News