ಅಸ್ಸಾಂ, ಪ.ಬಂಗಾಳ ಚುನಾವಣೆ: ಜಾಹೀರಾತಿಗೆ ಚು.ಆಯೋಗದ ಅಂಕುಶ
ಹೊಸದಿಲ್ಲಿ, ಎ.9: ವಿಧಾನಸಭಾ ಚುನಾವಣೆಗೆ ತೆರಳಿರುವ ಅಸ್ಸಾಂ ಹಾಗೂ ಪಶ್ಚಿಮಬಂಗಾಳದಲ್ಲಿ ಎಪ್ರಿಲ್ 10 ಹಾಗೂ 11ರಂದು, ಸುದ್ದಿಪತ್ರಿಕೆಗಳಲ್ಲಿ ತನ್ನ ಅನುಮೋದನೆಯಿಲ್ಲದೆ ಯಾವುದೇ ಜಾಹೀ ರಾತುಗಳನ್ನು ಪ್ರಕಟಿಸಬಾರದೆಂದು ಚುನಾವಣಾ ಆಯೋಗವು ಶನಿವಾರ ಆದೇಶಿಸಿದೆ. ಕಳೆದ ವರ್ಷ ನಡೆದ ಬಿಹಾರ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಬಿಜೆಪಿಯು ಕೆಲವು ವಿವಾದಾತ್ಮಕ ಜಾಹೀರಾತುಗಳನ್ನು ಪ್ರಕಟಿಸಿದ್ದ ಹಿನ್ನೆಲೆಯಲ್ಲಿ ಅದು ಈ ಕ್ರಮ ಕೈಗೊಂಡಿದೆ.
ಅಸ್ಸಾಂ ವಿಧಾನಸಭಾ ಚುನಾವಣೆಯ ಎರಡನೆ ಹಂತದ ಮತದಾನ ಹಾಗೂ ಪಶ್ಚಿಮಬಂಗಾಳದ ವಿಧಾನಸಭಾ ಚುನಾವಣೆಯ ಮೊದಲ ಹಂತದ ಮತದಾನ ಎಪ್ರಿಲ್ 11ರಂದು ನಡೆಯಲಿದೆ.
‘‘ನಿಂದನಾತ್ಮಕ ಹಾಗೂ ತಪ್ಪು ಅಭಿಪ್ರಾಯ ಮೂಡಿಸುವಂತಹ ಜಾಹೀರಾತುಗಳನ್ನು ಈ ಹಿಂದೆ ಚುನಾವಣೆಗಳ ಸಂದರ್ಭಗಳಲ್ಲಿ ಪ್ರಕಟಿಸಿರು ನಿದರ್ಶನಗಳು ತನ್ನ ಗಮನಕ್ಕೆ ಬಂದಿರುವುದಾಗಿ ಕೇಂದ್ರ ಚುನಾವಣಾ ಆಯೋಗವು, ಅಸ್ಸಾಂ ಹಾಗೂ ಪ.ಬಂಗಾಳ ರಾಜ್ಯಗಳ ಮುಖ್ಯ ಚುನಾವಣಾ ಆಯುಕ್ತರಿಗೆ ಜಾರಿಗೊಳಿಸಿದ ಆದೇಶದಲ್ಲಿ ತಿಳಿಸಿದೆ.
ಚುನಾವಣೆಯ ಕೊನೆಯ ಹಂತದಲ್ಲಿ‘ ಇಂತಹ ಜಾಹೀರಾತುಗಳು ಚುನಾವಣೆಯನ್ನು ಹಾಳುಗೆಡವುತ್ತದೆ. ಇಂತಹ ಪ್ರಕರಣಗಳಲ್ಲಿ ಬಾಧಿತರಾದ ಅಭ್ಯರ್ಥಿಗಳು ಅಥವಾ ಪಕ್ಷಗಳಿಗೆ ಸ್ಪಷ್ಟೀಕರಣ ಅಥವಾ ಪ್ರತ್ಯುತ್ತರ ನೀಡಲು ಅವಕಾಶ ದೊರೆಯುವುದಿಲ್ಲ’’ ಎಂದು ಆಯೋಗ ತಿಳಿಸಿದೆ.