×
Ad

ಐಪಿಎಲ್ ಹೊರಹೋದಲ್ಲಿ 100 ಕೋಟಿ ರೂ. ನಷ್ಟ

Update: 2016-04-09 23:46 IST

ಮುಂಬೈ, ಎ.9: ಐಪಿಎಲ್ ಕ್ರಿಕೆಟ್ ಪಂದ್ಯಕೂಟವನ್ನು ಬರಪೀಡಿತ ಮಹಾರಾಷ್ಟ್ರದ ಹೊರಗೆ ಸ್ಥಳಾಂತರಿಸಿದಲ್ಲಿ ಸರಕಾರಕ್ಕೆ ಯಾವುದೇ ಸಮಸ್ಯೆಯಿಲ್ಲವೆಂದು ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ತಿಳಿಸಿದ ಬೆನ್ನಲ್ಲೇ, ಬಿಸಿಸಿಐ ಅಧ್ಯಕ್ಷ ಅನುರಾಗ್ ಠಾಕೂರ್ ಶನಿವಾರ ಹೇಳಿಕೆಯೊಂದನ್ನು ನೀಡಿ, ಹಾಗೆ ಮಾಡಿದಲ್ಲಿ ರಾಜ್ಯಕ್ಕೆ 100 ಕೋಟಿ ರೂ. ನಷ್ಟವಾಗಲಿದೆಯೆಂದು ಎಚ್ಚರಿಕೆ ನೀಡಿದ್ದಾರೆ.

‘‘ಐಪಿಎಲ್‌ನಿಂದ ಮಹಾರಾಷ್ಟ್ರ 100 ಕೋಟಿ ರೂ. ಲಾಭಗಳಿಸುತ್ತದೆ, ಒಂದು ವೇಳೆ ಪಂದ್ಯಕೂಟವು ರಾಜ್ಯದಿಂದ ಹೊರ ಹೋದಲ್ಲಿ, ಅದರಿಂದ ರಾಜ್ಯಕ್ಕೆ ದೊಡ್ಡ ನಷ್ಟವಾಗಲಿದೆ’’ ಎಂದವರು ಹೇಳಿದ್ದಾರೆ. ಮುಂಬೈಯಲ್ಲಿ ಐಪಿಎಲ್ ಕ್ರೀಡಾಕೂಟದ ನೇಪಥ್ಯದಲ್ಲಿ ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು. ಹಿಂದಿನ ಆವೃತ್ತಿಯ ಐಪಿಎಲ್ ಪಂದ್ಯಕೂಟದ ಬಳಿಕ ಬಿಸಿಸಿಐ ನಡೆಸಿದ ಅಧ್ಯಯವನ್ನು ಆಧರಿಸಿ ತಾನು ಈ ಅಂಕಿಅಂಶವನ್ನು ನೀಡಿರುವುದಾಗಿ ಅವರು ಹೇಳಿದರು.

ಮಹಾರಾಷ್ಟ್ರ ಬರದಿಂದ ತತ್ತರಿಸುತ್ತಿದ್ದರೂ, ಐಪಿಎಲ್‌ನಕ್ರೀಡಾಕೂಟ ನಡೆಯುವ ಸ್ಟೇಡಿಯಂಗಳ ಪಿಚ್‌ಗಳ ನಿರ್ವಹಣೆಗಾಗಿ ಭಾರೀ ಪ್ರಮಾಣದ ನೀರನ್ನು ಬಳಸಲಾಗುತ್ತಿರುವ ಬಗ್ಗೆ ನ್ಯಾಯಾಲಯವು ರಾಜ್ಯ ಸರಕಾರವನ್ನು ತರಾಟೆಗೆ ತೆಗೆದುಕೊಂಡ ಹಿನ್ನೆಲೆಯಲ್ಲಿ ಫಡ್ನವೀಸ್ ಶುಕ್ರವಾರ ಹೇಳಿಕೆ ನೀಡಿ ‘‘ಈ ಆವೃತ್ತಿಯ ಐಪಿಎಲ್ ಕ್ರೀಡಾಕೂಟವು ರಾಜ್ಯದಿಂದ ಹೊರಹೋದಲ್ಲಿ ನಮಗೆ ಯಾವುದೇ ಸಮಸ್ಯೆಯಿಲ್ಲ’’ ಎಂದಿದ್ದರು. ಈ ವರ್ಷ ಐಪಿಎಲ್‌ಗೆ ಯಾವುದೇ ಕುಡಿಯಲು ಯೋಗ್ಯವಾದ ನೀರನ್ನು ಸರಕಾರವು ಪೂರೈಸುವುದಿಲ್ಲವೆಂದು ಅವರು ಸ್ಪಷ್ಟಪಡಿಸಿದ್ದರು.

ನೂತನ ಆವೃತ್ತಿಯ ಐಪಿಎಲ್ ಟೂರ್ನಮೆಂಟ್‌ನ 16 ಪಂದ್ಯಗಳು ಮಹಾರಾಷ್ಟ್ರ ಮುಂಬೈ, ಪುಣೆ ಹಾಗೂ ನಾಗಪುರಗಳಲ್ಲಿ ನಡೆಯಲಿವೆ. ಮಹಾರಾಷ್ಟ್ರವು ಎದುರಿಸುತ್ತಿರುವ ತೀವ್ರವಾದ ಜಲಕ್ಷಾಮದ ಬಗ್ಗೆ ಬಿಸಿಸಿಐಗೂ ತೀವ್ರ ಆತಂಕವಿದೆ ಹಾಗೂ ಕ್ರೀಡಾಂಗಣದ ಮೈದಾನದ ನಿರ್ವಹಣೆಗೆ ಕುಡಿಯುವ ನೀರನ್ನು ಬಳಸಲು ಅದು ಇಚ್ಛಿಸುವುದಿಲ್ಲವೆಂದು ಅವರು ಸ್ಪಷ್ಟಪಡಿಸಿದರು.

ನೀರಿನ ತೀವ್ರ ಅಭಾವದ ಹಿನ್ನೆಲೆಯಲ್ಲಿ ಐಪಿಎಲ್ ಪಂದ್ಯಗಳನ್ನು ರಾಜ್ಯದ ಹೊರಗೆ ವರ್ಗಾಯಿಸುವಂತೆ ಕೋರಿ ಸಲ್ಲಿಸಲಾದ ಅರ್ಜಿಯ ವಿಚಾರಣೆಯನ್ನು ಬಾಂಬೆ ಹೈಕೋರ್ಟ್ ಎಪ್ರಿಲ್ 12ರಂದು ನಡೆಸಲಿದ್ದು, ಈ ಸಂದರ್ಭದಲ್ಲಿ ಬಿಸಿಸಿಐ ಹಾಗೂ ಐಪಿಎಲ್‌ನಲ್ಲಿ ಪಾಲ್ಗೊಳ್ಳುವ ಕ್ರಿಕೆಟ್ ತಂಡಗಳ ಫ್ರಾಂಚೈಸ್ ಕಂಪೆನಿಗಳು ತಮ್ಮ ವಾದಗಳನ್ನು ಮಂಡಿಸಲಿವೆ.

ಕ್ರೀಡಾಂಗಣದ ಪಿಚ್‌ಗಳ ನಿರ್ವಹಣೆಗೆ 60 ಲಕ್ಷ ಲೀಟರ್‌ಗೂ ಅಧಿಕ ನೀರನ್ನು ಬಳಸುವುದನ್ನು ಪ್ರಶ್ನಿಸಿ, ನಗರ ಮೂಲದ ಎನ್‌ಜಿಓ ನ್ಯಾಯಾಲಯಕ್ಕೆ ಅರ್ಜಿಯನ್ನು ಸಲ್ಲಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News