ಮತ್ತೆ ಅಧಿಕಾರಕ್ಕೇರಿದರೆ ಮದ್ಯ ನಿಷೇಧ: ಜಯಾ
Update: 2016-04-09 23:47 IST
ಚೆನ್ನೈ,ಎ.9: ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ತನ್ನ ಪಕ್ಷವು ಮರಳಿ ಅಧಿಕಾರಕ್ಕೇರಿದಲ್ಲಿ ರಾಜ್ಯದಲ್ಲಿ ಮದ್ಯ ನಿಷೇಧಿಸುವುದಾಗಿ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಘೋಷಿಸಿದ್ದಾರೆ.
ಚೆನ್ನೈನಲ್ಲಿ ಶನಿವಾರ ನಡೆದ ಎಡಿಎಂಕೆ ಪಕ್ಷದ ಚುನಾವಣಾ ಪ್ರಚಾರ ರ್ಯಾಲಿಯಲ್ಲಿ ಮಾತನಾಡುತ್ತಿದ್ದ ಅವರು, ‘‘ಒಂದು ವೇಳೆ ನಾನು ಪುನರಾಯ್ಕೆಗೊಂಡಲ್ಲಿ, ತಮಿಳುನಾಡಿನಲ್ಲಿ ಮದ್ಯವನ್ನು ಹಂತಹಂತವಾಗಿ ನಿಷೇಧಿಸಲಾಗುವುದು’’ಎಂದು ಹೇಳಿದರು. ತನ್ನ ಭಾಷಣದುದ್ದಕ್ಕೂ ಅವರು ಡಿಎಂಕೆ ನಾಯಕ ಕರುಣಾನಿಧಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಕರುಣಾನಿಧಿ ಆಳ್ವಿಕೆಯಲ್ಲಿ ರಾಜ್ಯದಲ್ಲಿ ಮದ್ಯ ಉದ್ಯಮವು ವ್ಯಾಪಕವಾಗಿ ಬೆಳೆದಿತ್ತಾದರೂ, ಈಗ ಅವರು ಮದ್ಯ ನಿಷೇಧವನ್ನು ಬಯಸುತ್ತಿದ್ದಾರೆಂದು ಟೀಕಿಸಿದರು. 1971ರಲ್ಲಿ ತಮಿಳುನಾಡಿನಲ್ಲಿ ಜಾರಿಯಲ್ಲಿದ್ದ ಮದ್ಯ ವಿರೋಧಿ ನೀತಿಯನ್ನು ಕರುಣಾನಿಧಿ ಸಡಿಲಗೊಳಿಸಿದ್ದರು. ಈಗ ಅವರು ರಾಜಕೀಯ ಉದ್ದೇಶಗಳಿಗಾಗಿ ಈ ವಿಷಯವನ್ನು ಕೆದಕುತ್ತಿದ್ದಾರೆಂದು ಆರೋಪಿಸಿದರು.