×
Ad

ಬ್ರಸೆಲ್ಸ್ ಬಾಂಬರ್‌ಗಳಿಂದ ಪ್ಯಾರಿಸ್ ಸೊ್ಫೀಟಕ್ಕೆ ಸಂಚು: ಬೆಲ್ಜಿಯ ಪ್ರಾಸಿಕ್ಯೂಟರ್‌ಗಳು

Update: 2016-04-10 23:54 IST

ಬ್ರಸೆಲ್ಸ್, ಎ. 10: ಬ್ರಸೆಲ್ಸ್‌ನಲ್ಲಿ ಮಾರ್ಚ್22ರಂದು ನಡೆದ ಸರಣಿ ಬಾಂಬ್ ಸ್ಫೋಟಗಳ ರೂವಾರಿಗಳು, ಆರಂಭದಲ್ಲಿ ಇನ್ನೊಮ್ಮೆ ಪ್ಯಾರಿಸ್‌ನಲ್ಲಿ ಸ್ಫೋಟಗಳನ್ನು ನಡೆಸಲು ಯೋಜನೆ ರೂಪಿಸಿದ್ದರು, ಆದರೆ, ಪ್ಯಾರಿಸ್ ಮೇಲೆ ನಡೆದ ಮೊದಲ ಬಾಂಬ್ ದಾಳಿಯ ಪ್ರಮುಖ ಆರೋಪಿಗಳನ್ನು ಪೊಲೀಸರು ಬಂಧಿಸಿದ ಹಿನ್ನೆಲೆಯಲ್ಲಿ ಬ್ರಸೆಲ್ಸನ್ನು ಆಯ್ದುಕೊಂಡರು ಎಂದು ಬೆಲ್ಜಿಯಂನ ತನಿಖಾಧಿಕಾರಿಗಳು ಹೇಳಿದ್ದಾರೆ.
ಬ್ರಸೆಲ್ಸ್‌ನ ವಿಮಾನ ನಿಲ್ದಾಣ ಮತ್ತು ಮೆಟ್ರೊ ರೈಲು ನಿಲ್ದಾಣಗಳಲ್ಲಿ ನಡೆದ ಸ್ಫೋಟಗಳಲ್ಲಿ 32 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.

‘‘ಆರಂಭದಲ್ಲಿ ಭಯೋತ್ಪಾದಕ ಗುಂಪು ಇನ್ನೊಮ್ಮೆ ಪ್ಯಾರಿಸ್ ಮೇಲೆ ದಾಳಿ ನಡೆಸಲು ಯೋಜನೆ ರೂಪಿಸಿತ್ತು ಎನ್ನುವುದನ್ನು ತನಿಖೆಯಲ್ಲಿ ಪತ್ತೆಯಾದ ಹಲವು ಅಂಶಗಳು ಸಾಬೀತುಪಡಿಸಿವೆ’’ ಎಂದು ಬೆಲ್ಜಿಯಂನ ಫೆಡರಲ್ ಪ್ರಾಸಿಕ್ಯೂಟರ್ ರವಿವಾರ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.

‘‘ತನಿಖೆಯ ವೇಗದ ಪ್ರಗತಿಯಿಂದ ಚಕಿತರಾದ ಭಯೋತ್ಪಾದಕರು ಮೂಲ ಯೋಜನೆಯನ್ನು ಬದಲಿಸಿ ಬ್ರಸೆಲ್ಸ್ ಮೇಲೆ ದಾಳಿ ನಡೆಸುವ ನಿರ್ಧಾರವನ್ನು ತೆಗೆದುಕೊಂಡರು’’ ಎಂದು ಹೇಳಿಕೆ ತಿಳಿಸಿದೆ.

ಬಂಧಿತನು ‘ಟೊಪ್ಪಿ ಧರಿಸಿದ ವ್ಯಕ್ತಿ’

ಸ ರಣಿ ಬಾಂಬ್ ಸ್ಫೋಟಗಳು ನಡೆದ ದಿನ ಬ್ರಸೆಲ್ಸ್ ವಿಮಾನ ನಿಲ್ದಾಣದ ಸಿಸಿಟಿವಿ ಕ್ಯಾಮರದಲ್ಲಿ ಕಾಣಿಸಿಕೊಂಡ ‘ಟೊಪ್ಪಿ ಧರಿಸಿದ ವ್ಯಕ್ತಿ’ ತಾನೆ ಎಂಬುದನ್ನು ಶುಕ್ರವಾರ ಪೊಲೀಸ್ ಕಾರ್ಯಾಚರಣೆಯಲ್ಲಿ ಬಂಧನಕ್ಕೊಳಗಾದ ಶಂಕಿತ ಉಗ್ರ ಮುಹಮ್ಮದ್ ಅಬ್ರಿನಿ ಒಪ್ಪಿಕೊಂಡಿದ್ದಾನೆ. ತನಿಖಾ ತಂಡವೊಂದು ಸಿದ್ಧಪಡಿಸಿದ ದೃಶ್ಯಾವಳಿಗಳನ್ನು ಮುಂದಿಟ್ಟುಕೊಂಡು ಪ್ರಶ್ನಿಸಿದಾಗ, ಸರಣಿ ಸ್ಫೋಟಗಳ ಬಳಿಕ ಪೊಲೀಸರು ಬೇಟೆಯಾಡುತ್ತಿರುವ ವ್ಯಕ್ತಿ ತಾನೆ ಎಂಬುದನ್ನು ಆತ ಒಪ್ಪಿಕೊಂಡನು ಎಂದು ಪ್ರಾಸಿಕ್ಯೂಟರ್‌ಗಳು ಶನಿವಾರ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News