ಪಾಕಿಸ್ತಾನದಲ್ಲಿ 2 ಸಾವು
ಇಸ್ಲಾಮಾಬಾದ್, ಎ. 10: ರಿಕ್ಟರ್ ಮಾಪಕದಲ್ಲಿ 6.8ರ ತೀವ್ರತೆಯ ಪ್ರಬಲ ಭೂಕಂಪ ರವಿವಾರ ಸಂಜೆ ಪಾಕಿಸ್ತಾನ ಮತ್ತು ಹಿಂದೂಕುಷ್ ವಲಯದಲ್ಲಿರುವ ಅಫ್ಘಾನಿಸ್ತಾನ ಮತ್ತು ತಜಿಕಿಸ್ತಾನ ಗಡಿ ಭಾಗದಲ್ಲಿ ಸಂಭವಿಸಿದೆ. ಭೂಕಂಪದಲ್ಲಿ ಇಬ್ಬರು ಮೃತಪಟ್ಟಿದ್ದಾರೆ ಹಾಗೂ ನಾಲ್ವರು ಗಾಯಗೊಂಡಿದ್ದಾರೆ.
ಭೂಕಂಪ ಅಪರಾಹ್ನ 3.58ಕ್ಕೆ ಸಂಭವಿಸಿತು ಹಾಗೂ ಹಲವಾರು ನಿಮಿಷಗಳ ಕಾಲ ಭೂಮಿ ಕಂಪಿಸಿತು. ಭೂಕಂಪದ ಕೇಂದ್ರ ಬಿಂದು ಅಶ್ಕಶಂನಿಂದ 39 ಕಿಲೋಮೀಟರ್ ಹಾಗೂ ಅಫ್ಘಾನಿಸ್ತಾನ ರಾಜಧಾನಿ ಕಾಬೂಲ್‌ನಿಂದ 282 ಕಿ.ಮೀ. ದೂರದಲ್ಲಿತ್ತು. ಕೇಂದ್ರ ಬಿಂದುವಿನಿಂದ 200 ಕಿ.ಮೀ. ವ್ಯಾಪ್ತಿಯಲ್ಲಿ ಭೂಕಂಪದ ತೀವ್ರತೆ ಪ್ರಬಲವಾಗಿತ್ತು ಎಂದು ಯುರೋಪಿಯನ್ ಮೆಡಿಟರೇನಿಯನ್ ಭೂಕಂಪ ಕೇಂದ್ರದಿಂದ ಲಭಿಸಿದ ಮಾಹಿತಿ ತಿಳಿಸಿದೆ.
ಪಾಕಿಸ್ತಾನದಲ್ಲಿ ಇಬ್ಬರು ಮೃತಪಟ್ಟಿದ್ದಾರೆ ಹಾಗೂ ನಾಲ್ವರು ಗಾಯಗೊಂಡಿದ್ದಾರೆ. ಪೇಶಾವರ, ಚಿತ್ರಾಲ್, ಸ್ವಾತ್, ಗಿಲ್ಗಿಟ್, ಫೈಸಲಾಬಾದ್ ಮತ್ತು ಲಾಹೋರ್‌ಗಳಲ್ಲಿ ಪ್ರಬಲ ಕಂಪನಗಳು ಅನುಭವಕ್ಕೆ ಬಂದಿವೆ ಎಂದು ರೇಡಿಯೊ ಪಾಕಿಸ್ತಾನ್ ವರದಿ ಮಾಡಿದೆ. ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್ ಮತ್ತು ಪಾಕಿಸ್ತಾನದ ರಾಜಧಾನಿ ಇಸ್ಲಾಮಾಬಾದ್‌ಗಳಲ್ಲಿ ಭೂಕಂಪ ಸಂಭವಿಸಿದ ಬಳಿಕ ಕಟ್ಟಡಗಳು ಒಂದು ನಿಮಿಷಕ್ಕೂ ಹೆಚ್ಚು ಕಾಲ ತೊಯ್ದಾಡಿದವು. ಗಾಬರಿಗೊಂಡ ನಿವಾಸಿಗಳು ಕಟ್ಟಡಗಳಿಂದ ಹೊರಗೆ ಧಾವಿಸಿದರು.