ಹೆತ್ತವರ ವಿರುದ್ಧವೇ ದೂರು ನೀಡಿದ ಬಾಲಕಿ !
ಅಹಮದಾಬಾದ್ : ಗಾಂಧಿನಗರದಿಂದ ಸುಮಾರು 10 ಕಿ.ಮಿ. ದೂರವಿರುವ ಕೊಲವಾಡ ಗ್ರಾಮದ 17 ವರ್ಷದ ರಾಜಲ್ ಠಾಕೋರ್ (ಹೆಸರು ಬದಲಾಯಿಸಲಾಗಿದೆ) ಕಳೆದ ಶನಿವಾರ 181 ಅಭಯಂ ಸಹಾಯವಾಣಿಗೆ ಕರೆಮಾಡಿದಾಗ ಮೊದಲ ಕೆಲವು ನಿಮಿಷಗಳಲ್ಲಿ ಆಕೆಯ ಬಾಯಿಯಿಂದ ಮಾತೇಹೊರಟಿರಲಿಲ್ಲ. ಅದಕ್ಕೆ ಕಾರಣವೂ ಇತ್ತು-ಆಕೆ ತನ್ನ ಸ್ವಂತ ಹೆತ್ತವರ ವಿರುದ್ಧವೇ ದೂರು ದಾಖಲಿಸುವ ಮನಸ್ಸು ಮಾಡಿದ್ದಳು.
ಜೂನ್ 1999ರಲ್ಲಿ ಹುಟ್ಟಿದ ರಾಜಲ್ ವಿವಾಹ ಎಪ್ರಿಲ್ 18ಕ್ಕೆ ನಡೆಯುವುದೆಂದು ತೀರ್ಮಾನಿಸಲಾಗಿತ್ತು ಹಾಗೂ ಆಕೆಯ ಹೆತ್ತವರು ಈಗಾಗಲೇ ಸಂಬಂಧಿಕರೆಲ್ಲರಿಗೂ ಆಹ್ವಾನ ಪತ್ರಿಕೆಗಳನ್ನೂ ಹಂಚಿದ್ದರು. ಆದರೆ ರಾಜಲ್ ಳಿಗೆ ಈ ಮದುವೆ ಸುತರಾಂ ಇಷ್ಟವಿಲ್ಲವಾಗಿತ್ತು. ಆಕೆಗೆ ಕಲಿಯುವುದನ್ನು ಮುಂದುವರಿಸುವ ಹಂಬಲವಿದ್ದರೂ ಅದಕ್ಕೆ ಆಕೆಯ ಹೆತ್ತವರು ತಣ್ಣೀರೆರಚಿದ್ದರು.
ಕೊನೆಗೆ ದಾರಿ ಕಾಣದೆ ಆಕೆ ಸಹಾಯವಾಣಿಗೆ ಕರೆ ಮಾಡಿ ತನ್ನ ಸಮಸ್ಯೆಯನ್ನು ತೋಡಿಕೊಂಡಿದ್ದಳು. ತನ್ನ ಹೆತ್ತವರು ತನಗೆ ತೊಂದರೆಯುಂಟು ಮಾಡಬಹುದೆಂದು ಹೆದರಿ ತಾನು ಅವರೊಂದಿಗಿರುವುದಿಲ್ಲವೆಂದೂ ಆಕೆ ತಿಳಿಸಿದ್ದಳು.
ಅಧಿಕಾರಿಗಳು ಹಾಗೂ ಮಹಿಳಾ ಪೊಲೀಸರು ಯುವತಿಯ ಮನೆಗೆ ಆಗಮಿಸಿದಾಗಆಕೆಯ ಹೆತ್ತವರು ಆಕೆಗೆ ವಿವಾಹ ನಿಶ್ಚಯವಾಗಿದೆಯೆಂಬುದನ್ನು ನಿರಾಕರಿಸಿದರಾದರೂ ಅಧಿಕಾರಿಗಳು ಮದುವೆಯ ಆಹ್ವಾನ ಪತ್ರಿಕೆಯನ್ನು ನೋಡಿದ್ದರು.
ಹುಡುಕಿಯಂತೂ ಭಯಭೀತಳಾಗಿದ್ದಳು. ಆದರೆ ಆಕೆಯನ್ನು ಹೆತ್ತವರಿಂದ ದೂರ ಕರೆದುಕೊಂಡು ಹೋಗಿ ವಿಚಾರಿಸಿದಾಗ ಆಕೆ ತನ್ನ 10ನೇ ತರಗತಿಯ ಅಂಕ ಪಟ್ಟಿ ತೋರಿಸಿದಳು.
ಅದರಲ್ಲಿ ಆಕೆಗೆ 88.11% ಅಂಕಗಳು ಬಂದಿತ್ತೆಂದು ತಿಳಿದಿತ್ತು.‘‘ಆಕೆಯ ಶಿಕ್ಷಣ ಮುಂದುವರಿಸಲು ಹೆತ್ತವರು ನಿರಾಕರಿಸಿದ್ದರೂ ರಾಜಲ್‌ತಾನೇ 2017ರಲ್ಲಿ ನಡೆಯುವ 12ನೇ ತರಗತಿ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದಳು,’’ಎಂದು ಅಧಿಕಾರಿಯೊಬ್ಬರು ತಿಳಿಸಿದರು.
ಮಹಿಳಾ ಪೊಲೀಸರು ಆಕೆಯ ಹೆತ್ತವರಿಗೆ ಬಾಲ್ಯ ವಿವಾಹ ನಿಷೇಧದ ಬಗ್ಗೆ, ಬಾಲ್ಯ ವಿವಾಹ ನಡೆದಲ್ಲಿ ಅವರು ಅನುಭವಿಸಬೇಕಾದ ಶಿಕ್ಷೆಯ ಬಗ್ಗೆವಿವರಿಸಿದ ನಂತರ ಆಕೆ ತಾವು ತಮ್ಮ ಮಗಳಿಗೆ ಆಕೆಯ ಇಚ್ಛೆಯಂತೆಯೇ ಶಿಕ್ಷಣ ನೀಡುವುದಾಗಿಯೂ ಆಕೆಗೆ ವಿವಾಹಕ್ಕೆ ಬಲವಂತ ಮಾಡುವುದಿಲ್ಲವೆಂದು ಅವರು ಲಿಖಿತ ಹೇಳಿಕೆ ನೀಡಿದರು.
ರಾಜ್ಯದಲ್ಲಿ ಪ್ರತಿ ವರ್ಷ ಸುಮಾರು 15 ಬಾಲ್ಯ ವಿವಾಹ ನಡೆಯುತ್ತದೆಯಾದರೂ ವಧುವೊಬ್ಬಳೇ ಬಾಲ್ಯ ವಿವಾಹದ ವಿರುದ್ಧ ದೂರಿರುವುದು ಇದೇ ಮೊದಲು, ಎಂದು 181 ಸಹಾಯವಾಣಿಯ ಅಧಿಕಾರಿಯೊಬ್ಬರು ತಿಳಿಸಿದರು.