×
Ad

ಅಜ್ಮೀರ್ ದರ್ಗಾದಲ್ಲಿ ಪ್ರಧಾನಿ ಮೋದಿ ಪರವಾಗಿ ಚಾದರ್ ಸಮರ್ಪಣೆ

Update: 2016-04-11 15:24 IST

ಅಜ್ಮೀರ್ : ಇಲ್ಲಿನ ಖ್ಯಾತ ಸೂಫಿ ಸಂತ ಖ್ವಾಜ ಮೊಯಿನುದ್ದೀನ್ ಚಿಷ್ಟಿಯವರ ದರ್ಗಾದಲ್ಲಿ ರವಿವಾರ ಪ್ರಧಾನಿ ನರೇಂದ್ರ ಮೋದಿಯವರ ಪರವಾಗಿ ಕೇಂದ್ರ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ ‘ಚಾದರ್’ ಅರ್ಪಿಸಿದರು. ಈ ಸಂದರ್ಭ ಪ್ರಧಾನಿಯವರ ಸಂದೇಶವನ್ನು ಓದಿದ ನಖ್ವಿ ಎಲ್ಲಾ ಸಮುದಾಯಗಳ ಹಿತರಕ್ಷಣೆ ಹಾಗೂ ಅಭಿವೃದ್ಧಿಗೆ ಸರಕಾರ ಬದ್ಧವಾಗಿದೆಯೆಂದು ಹೇಳಿದರು.

ತಮ್ಮ ಸಂದೇಶದಲ್ಲಿ ಖ್ವಾಜಾ ಮೊಯಿನುದ್ದೀನ್ ಅವರ 804ನೇ ಉರೂಸ್ ಸಂದರ್ಭ ಪ್ರಧಾನಿ ಭಕ್ತರಿಗೆ ಶುಭಾಶಯಗಳನ್ನು ತಿಳಿಸುತ್ತಾ ಅವರನ್ನು ಸೂಫಿ ಪಂಥದ ಖ್ಯಾತ ನಾಯಕನೆಂದು ಬಣ್ಣಿಸಿದರು. ಅವರು ಮಾನವತೆಗೆ ಸಲ್ಲಿಸುವ ಸೇವೆಯೇ ಅತ್ಯುತ್ತಮ ಪ್ರಾರ್ಥನೆಯೆಂದು ಹೇಳಿದ್ದು ಇಂದಿಗೂ ನಮಗೆ ಪ್ರೇರಣೆಯಾಗಿದೆ ಎಂದು ಪ್ರಧಾನಿ ತಮ್ಮ ಸಂದೇಶದಲ್ಲಿ ತಿಳಿಸಿದ್ದಾರೆ.


ದೇಶದಲ್ಲಿನ ಮತೀಯ ಸೌಹಾರ್ದತೆಯಿಂದಾಗಿ ಇಲ್ಲಿ ಉಗ್ರಗಾಮಿ ಹಾಗೂ ತೀವ್ರಗಾಮಿ ಶಕ್ತಿಗಳು ತಮ್ಮ ಅಸ್ತಿತ್ವ ಸ್ಥಾಪಿಸಲು ವಿಫಲವಾಗಿವೆ,ಎಂದು ನಖ್ವಿ ಈ ಸಂದರ್ಭದಲ್ಲಿ ತಿಳಿಸಿದರು.


ದೇಶದ ಅಭಿವೃದ್ಧಿ ಹಾಗೂ ಜನರ ವಿಶ್ವಾಸ ಗಳಿಸುವುದು ಸರಕಾರದ ಉದ್ದೇಶ ಹಾಗೂ ಅದು ಈ ನಿಟ್ಟಿನಲ್ಲಿ ಬದ್ಧವಾಗಿದೆ, ಎಂದು ಅವರು ಹೇಳಿದರು.
‘‘ದುಷ್ಟ ಶಕ್ತಿಗಳು ಶಾಂತಿ ಸಾಮರಸ್ಯವನ್ನು ಧರ್ಮದ ಹೆಸರಿನಲ್ಲಿ ಕೆಡಿಸದಂತೆ ನಾವು ಸದಾ ಎಚ್ಚರಿಕೆಯಿಂದಿರಬೇಕು,’’ ಎಂದು ನಖ್ವಿ ಹೇಳಿದರು.


ವಿಶ್ವದಾದ್ಯಂತವಿರುವ ಮುಸಲ್ಮಾನರು ಹಾಗೂ ಹಿಂದೂಗಳು ಆರಾಧಿಸುವ ಖ್ವಾಜ ಮೊಯಿನುದ್ದೀನ್ ಚಿಷ್ಟಿಯವರ ಉರೂಸಿಗಾಗಿ ಸಾವಿರಾರು ಜನರು ಅಜ್ಮೀರ್ ನಗರಕ್ಕೆ ಆಗಮಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News