1 ಲಕ್ಷ ಗ್ರಾಮ ಪಂಚಾಯತುಗಳಿಗೆ ವೈಫೈ !
ನವದೆಹಲಿ : ಸರಕಾರದ ಗ್ರಾಮೀಣ ಬ್ರಾಡ್‌ಬ್ಯಾಂಡ್ ಯೋಜನೆ ಕಾರ್ಯಾರಂಭಕ್ಕೆ ಬಹಳ ವಿಳಂಬವಾಗುತ್ತಿದ್ದಂತೆಯೇ ಬಿಎಸ್ಸೆನ್ನೆಲ್ ಪಾರ್ಯಾಯ ವೈಫೈ ಆಧರಿತ ನೆಟ್‌ವರ್ಕ್ ಮುಖಾಂತರ ಸುಮಾರು ಒಂದು ಲಕ್ಷ ಗ್ರಾಮ ಪಂಚಾಯತುಗಳಿಗೆಹೈಸ್ಪೀಡ್ ಇಂಟರ್ನೆಟ್ ಒದಗಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುತ್ತಿದೆ.
‘ಯೋಜನೆಗಾಗಿ ಫೈಬರ್ ನೆಟ್‌ವರ್ಕ್ ಕೇಬಲ್ಲುಗಳನ್ನು ಅಳವಡಿಸುವುದು ಬಹಳ ತ್ರಾಸದಾಯಕ ಕೆಲಸವಾಗುವುದರಿಮದ ನಾವು ವೈಫೈ ಮುಖಾಂರ ಗ್ರಾಮೀಣ ಪ್ರದೇಶಗಳಿಗೆ ಅಂತರ್ಜಾಲ ಸಂಪರ್ಕ ಒದಗಿಸುವ ಬಗ್ಗೆ ಯೋಚಿಸುತ್ತಿದ್ದೇವೆ,’’ಎಂದು ಬಿಎಸ್ಸೆನ್ನೆಲ್ಅಧ್ಯಕ್ಷ ಹಾಗೂ ಆಡಳಿತ ನಿರ್ದೇಶಕ ಅನುಪಮ್ ಶ್ರೀವಾಸ್ತವ ತಿಳಿಸಿದ್ದಾರೆ. ಈ ರೀತಿಯಾಗಿ ಯೋಜನೆಯನ್ನು ಕಾರ್ಯಗತಗೊಳಿಸಬಹುದೇ ಎಂಬುದನ್ನುರಾಜಸ್ಥಾನದ ಆಲ್ವಾರ್ ಜಿಲ್ಲೆಯ ಮೂರು ಗ್ರಾಮಗಳಲ್ಲಿ ಪ್ರಾಯೋಗಿಕವಾಗಿ ಜಾರಿಗೊಳಿಸಿ ಪರಿಶೀಲಿಸಲಾಗುತ್ತಿದೆ. ‘‘ನಾವು ಟೆಲಿಕಾಂ ಇಲಾಖೆಗೆ ಈ ಬಗ್ಗೆ ಪತ್ರ ಬರೆದಿದ್ದು ಯುಎಸ್‌ಓ ನಿಧಿ ದೊರೆಯುವ ಬಗ್ಗೆಯೂ ಆಶಾವಾದ ಹೊಂದಿದ್ದೇವೆ. ಒಪ್ಪಿಗೆ ಸಿಕ್ಕಿದಕೂಡಲೇ ಕೆಲಸ ಆರಂಭವಾಗುತ್ತದೆ,’’ಎಂದವರು ತಿಳಿಸಿದರು.
ಕೇಂದ್ರ ಸರಕಾರವು ಎನ್‌ಓಎಫ್‌ಎನ್ಯೋಜನೆಯನ್ವಯ2011ರಲ್ಲಿ ರೂ 20,100 ಕೋಟಿ ಮೊತ್ತದ ಯೋಜನೆಗೆ ಅನುಮತಿ ನೀಡಿದ್ದು ಇದರಂಗವಾಗಿ2.5 ಲಕ್ಷಗ್ರಾಮ ಪಂಚಾಯತುಗಳಿಗೆಕನಿಷ್ಠ 100 ಎಂಬಿಪಿಎಸ್ಸ್ಪೀಡಿನ ಅಂತರ್ಜಾಲ ಸಂಪರ್ಕ ಕೊಡಲುದ್ದೇಶಿಸಲಾಗಿತ್ತು.
ಈ ಯೋಜನೆ 2013ರೊಳಗಾಗಿ ಮುಕ್ತಾಯಗೊಳ್ಳಬೇಕಿದ್ದರೂ ಇದೀಗ ಹಲವಾರು ಗಡುಗಳನ್ನು ದಾಟಿದೆ. ಮೇ 2014ರಲ್ಲಿ ಅಧಿಕಾರಕ್ಕೆ ಬಂದ ಎನ್‌ಡಿಎ ಸರಕಾರಮಾರ್ಚ್ 2015ರೊಳಗಾಗಿ 50,000 ಗ್ರಾಮ ಪಂಚಾಯತುಗಳಿಗೆ, ಮಾರ್ಚ್ 2016ರೊಳಗಾಗಿ1 ಲಕ್ಷ ಗ್ರಾಮ ಪಂಚಾಯತುಗಳಿಗೆ ಹಾಗೂ ಡಿಸೆಂಬರ್ 2016ರೊಳಗಾಗಿ ಉಳಿದ ಒಂದು ಲಕ್ಷ ಗ್ರಾಮ ಪಂಚಾಯತುಗಳಿಗೆ ಅಂತರ್ಜಾಲ ಸಂಪರ್ಕ ಕಲ್ಪಿಸಲುದ್ದೇಶಿಸಿತ್ತು.
ಆದರೆ ಈಗ ಅದು ಯೋಜನೆಯನ್ನು 2018ರೊಳಗಾಗಿ ಪೂರ್ಣಗೊಳಿಸಿ ಒಂದು ಲಕ್ಷ ಪಂಚಾಯತುಗಳಿಗೆ ಬ್ರಾಡ್ ಬ್ಯಾಂಡ್ ಸಂಪರ್ಕ ನೀಡಲು ತೀರ್ಮಾನಿಸಿದೆ.