×
Ad

ಭಾರತದ ಹಿಮಾಲಯದಲ್ಲಿ ಗಾಂಜಾ ಬೆಳೆಯ ರಹಸ್ಯ ಕೃಷಿ

Update: 2016-04-11 19:31 IST

ಹೊಸದಿಲ್ಲಿ,ಎ.11: ವಿಶಿಷ್ಟ ಸಂಪ್ರದಾಯಗಳ ಆಗರವಾಗಿರುವ ಭಾರತದ ಹಿಮಾಲಯದಲ್ಲಿ ಹರಡಿಕೊಂಡಿರುವ ಸಾವಿರಾರು ಗ್ರಾಮಗಳು ಅಂತರರಾಷ್ಟ್ರೀಯ ನಿಷೇಧದ ನಡುವೆಯೂ ಗಾಂಜಾ ಮತ್ತು ಅಫೀಮು ಬೆಳೆಯನ್ನೇ ನಂಬಿಕೊಂಡು ಉಸಿರು ಹಿಡಿದುಕೊಂಡಿವೆ. ಭಾರತದಲ್ಲಿ ತಯಾರಾಗುವ ಚರಸ್ ಮತ್ತು ಹಶಿಷ್‌ಗಳಿಗೆ ಕಚ್ಚಾ ಸರಕು ಪೂರೈಕೆಯಾಗುತ್ತಿರುವುದೇ ಈ ಹಿಮಾಲಯದ ಮಡಿಲಿನಿಂದ!

ಭಾರತದಲ್ಲಿ ಗಾಂಜಾ ಅಥವಾ ಭಂಗಿಸೊಪ್ಪಿನ ಬಳಕೆ ವೇದಗಳ ಕಾಲದಿಂದಲೂ ನಡೆದುಕೊಂಡು ಬಂದಿದೆ. ಶತಶತಮಾನಗಳಿಂದಲೂ ಅದು ಧಾರ್ಮಿಕ ವಿಧಿಗಳು ಮತ್ತು ಉತ್ಸವಗಳ ಭಾಗವಾಗಿದೆ. ಚರಸ್ ತಯಾರಿಕೆಗೆ ಬಳಕೆಯಾಗುವ ‘ಕ್ಯಾನಬೀಸ್ ಇಂಡಿಕಾ’ ಎಂಬ ವೈಜ್ಞಾನಿಕ ಹೆಸರು ಹೊಂದಿರುವ ಗಾಂಜಾವನ್ನು ಹಿಮಾಲಯದ ಹಲವಾರು ಭಾಗಗಳಲ್ಲಿ ವ್ಯಾಪಕವಾಗಿ ಬೆಳೆಸಲಾಗುತ್ತಿದೆ. ಎಲ್ಲ ನಿಯಂತ್ರಣಗಳನ್ನೂ ಮೀರಿ ಹೆಚ್ಚೆಚ್ಚು ಎತ್ತರದ ಪ್ರದೇಶಗಳಲ್ಲಿ ಬೆಳೆಯಲಾಗುತ್ತಿರುವ ಗಾಂಜಾ ಬೆಳೆಯ ಹುಟ್ಟಡಗಿಸಲು ಅಧಿಕಾರಿಗಳಿಗೆ ಅಸಾಧ್ಯವಾಗಿದೆ. ವ್ಯಾಪಕವಾಗಿ ಬೆಳೆಯಲಾಗುತ್ತಿದ್ದರೂ ಈ ಬಗ್ಗೆ ಯಾವುದೇ ಸಮೀಕ್ಷೆ ಈವರೆಗೆ ನಡೆಯದ್ದರಿಂದ ಯಾವುದೇ ಅಧಿಕೃತ ಅಂಕಿಅಂಶಗಳು ಲಭ್ಯವಿಲ್ಲ.

1980ರ ದಶಕದವರೆಗೂ ಗಾಂಜಾ ಮತ್ತು ಅಫೀಮು ಭಾರತದಲ್ಲಿ ಕಾನೂನು ಬದ್ಧವಾಗಿದ್ದು,ಸರಕಾರದ ಅನುಮತಿ ಪಡೆದುಕೊಂಡು ಖರೀದಿಸಬಹುದಾಗಿತ್ತು. ಹಿಂದೆ ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಯು ಗಾಂಜಾ ವ್ಯಾಪಾರದಲ್ಲಿ ತೊಡಗಿಕೊಂಡಿತ್ತು. 1985ರಲ್ಲಿ ಭಾರತವು ವಿವಾದಾತ್ಮಕ ಎನ್‌ಡಿಪಿಎಸ್ ಕಾಯ್ದೆಯನ್ನು ಅಂಗೀಕರಿಸಿದ್ದು, ಇದರ ಅನ್ವಯ ಗಾಂಜಾ ಕೃಷಿ ಮತ್ತು ಸೇವನೆ ಅಪರಾಧವಾಗಿದೆ. ಆದರೆ ಈ ಕಾಯ್ದೆಯು ಗಾಂಜಾವನ್ನು ನಿಯಂತ್ರಿಸುವಲ್ಲಿ ವಿಫಲಗೊಂಡಿದೆ. ಗಾಂಜಾ ಕಳ್ಳಸಾಗಣೆ ದಿನೇದಿನೇ ಹೆಚ್ಚುತ್ತಲೇ ಇದೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಮಾದಕ ದ್ರವ್ಯಗಳ ಬೆಲೆಗಳೂ ಹೆಚ್ಚುತ್ತಲೇ ಇವೆ.

ಚರಸ್‌ನ್ನು ವಿಶ್ವದಲ್ಲಿಯೇ ಅತ್ಯುತ್ತಮ ಹಶಿಷ್ ಎಂದು ಪರಿಗಣಿಸಲಾಗುತ್ತಿದ್ದು, ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಕೇವಲ ಒಂದು ಗ್ರಾಂ ಸುಮಾರು 20 ಅಮೆರಿಕನ್ ಡಾಲರ್‌ಗಳಿಗೆ ಮಾರಾಟವಾಗುತ್ತದೆ. ಆದರೆ ಚರಸ್ ಉತ್ಪಾದಕರಿಗೆ ಸಿಗುವುದು ಅಲ್ಪ ಲಾಭ ಮಾತ್ರ. ಅವರು ಇಂದಿಗೂ ಆಧುನಿಕತೆಯಿಂದ ದೂರವಾಗಿ ಪ್ರತಿಕೂಲ ಸ್ಥಿತಿಗಳಲ್ಲಿ ದೈನ್ಯದ ಬದುಕನ್ನು ಸಾಗಿಸುತ್ತಿದ್ದಾರೆ. ಅವರಿಗೆ ಬದಲಿ ಜೀವನೋಪಾಯಗಳೂ ಇಲ್ಲ. ಗಾಂಜಾ ಮತ್ತು ಅಫೀಮು ದೇವರ ಉಡುಗೊರೆ ಎಂದು ಅವರು ಭಾವಿಸಿದ್ದಾರೆ. ಜಗತ್ತು ಬದಲಾವಣೆಗಳಿಗೆ ತೆರೆದುಕೊಳ್ಳುತ್ತಿದ್ದರೂ ಗಾಂಜಾವನ್ನು ಭಾರತದಲ್ಲಿ ಕಾನೂನುಬದ್ಧಗೊಳಿಸುವ ಕುರಿತಂತೆ ಚರ್ಚೆಯು ಇನ್ನೂ ಭ್ರೂಣಾವಸ್ಥೆಯಲ್ಲಿಯೇ ಇದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News