×
Ad

ಉಕ್ರೇನಿನಲ್ಲಿ ಚೂರಿಯಿಂದ ಇರಿದು ಇಬ್ಬರು ಭಾರತೀಯ ವೈದ್ಯಕೀಯ ವಿದ್ಯಾರ್ಥಿಗಳ ಹತ್ಯೆ

Update: 2016-04-11 19:43 IST

ಹೊಸದಿಲ್ಲಿ,ಎ.11: ಉಕ್ರೇನಿನ ಮೆಡಿಕಲ್ ಕಾಲೇಜೊಂದರಲ್ಲಿ ರವಿವಾರ ನಸುಕಿನಲ್ಲಿ ಮೂವರು ಉಕ್ರೇನಿಯನ್ ಪ್ರಜೆಗಳ ಗುಂಪು ಇಬ್ಬರು ಭಾರತೀಯ ವಿದ್ಯಾರ್ಥಿಗಳನ್ನು ಚೂರಿಯಿಂದ ಇರಿದು ಹತ್ಯೆಗೈದಿದ್ದು,ಇನ್ನೋರ್ವ ಗಾಯಗೊಂಡಿದ್ದಾನೆ.

ಉತ್ತರ ಪ್ರದೇಶದ ಮುಝಫರ್‌ನಗರದ ನಿವಾಸಿ ಪ್ರಣವ್ ಶಾಂಡಿಲ್ಯ ಮತ್ತು ಗಾಝಿಯಾಬಾದ್ ನಿವಾಸಿ ಅಂಕುರ ಸಿಂಗ್ ಮೃತ ವಿದ್ಯಾರ್ಥಿಗಳಾಗಿದ್ದಾರೆ. ಆಗ್ರಾದ ಇಂದ್ರಜೀತ ಸಿಂಗ್ ಚೌಹಾಣ್‌ನನ್ನೂ ಚೂರಿಯಿಂದ ಇರಿಯಲಾಗಿದ್ದು,ಆತ ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾನೆ.

ದುರದೃಷ್ಟಕರ ಘಟನೆಯೊಂದರಲ್ಲಿ ರವಿವಾರ ನಸುಕಿನ ಮೂರು ಗಂಟೆಯ ಸುಮಾರಿಗೆ ಮೂವರು ಉಕ್ರೇನ್ ಪ್ರಜೆಗಳು ಉಝಗೊರೊಡ್ ಮೆಡಿಕಲ್ ಕಾಲೇಜಿನ ಮೂವರು ಭಾರತೀಯ ವಿದ್ಯಾರ್ಥಿಗಳಿಗೆ ಚೂರಿಯಿಂದ ಇರಿದಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ವಿಕಾಸ ಸ್ವರೂಪ್ ಸೋಮವಾರ ಇಲ್ಲಿ ತಿಳಿಸಿದರು.

  ಶಾಂಡಿಲ್ಯ ಮೂರನೇ ವರ್ಷದ ಮತ್ತು ಸಿಂಗ್ ನಾಲ್ಕನೇ ವರ್ಷದ ವೈದ್ಯಕೀಯ ವಿದ್ಯಾರ್ಥಿಗಳಾಗಿದ್ದರು. ಗಾಯಾಳು ಚೌಹಾಣ್ ಹೇಳಿಕೆಯ ಆಧಾರದಲ್ಲಿ ಪೊಲೀಸರು ದೇಶದ ಗಡಿಯನ್ನು ದಾಟಲು ಪ್ರಯತ್ನಿಸುತ್ತಿದ್ದ ಮೂವರು ಉಕ್ರೇನ್ ಪ್ರಜೆಗಳನ್ನು ಬಂಧಿಸಿದ್ದಾರೆ. ಅವರಿಂದ ಭಾರತೀಯ ವಿದ್ಯಾರ್ಥಿಗಳ ಪಾಸ್‌ಪೋರ್ಟ್ ಮತ್ತು ಇತರ ದಾಖಲೆಗಳು ಮತ್ತು ರಕ್ತಸಿಕ್ತ ಚೂರಿಯನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿದು ಬಂದಿದೆ ಎಂದು ಸ್ವರೂಪ್ ತಿಳಿಸಿದರು.

ಇಬ್ಬರು ವಿದ್ಯಾರ್ಥಿಗಳ ಮೃತದೇಹಗಳನ್ನು ಭಾರತಕ್ಕೆ ತರಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ಕೀವ್‌ನಲ್ಲಿರುವ ಭಾರತೀಯ ರಾಯಭಾರಿ ಕಚೇರಿಯು ಭಾರತೀಯ ವಿದ್ಯಾರ್ಥಿಗಳ ಸುರಕ್ಷತೆಯ ವಿಷಯವನ್ನು ಉಕ್ರೇನಿನ ವಿದೇಶಾಂಗ ಕಚೇರಿಯೊಡನೆ ಕೈಗೆತ್ತಿಕೊಂಡಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News