ಆರ್‌ಬಿಐ ಹೆಸರಿನಲ್ಲಿ ವಂಚನೆಗಳ ವಿರುದ್ಧ ರಘುರಾಮ ರಾಜನ್ ಎಚ್ಚರಿಕೆ
ಮುಂಬೈ,ಎ.11: ಹಣಕ್ಕಾಗಿ ಬೇಡಿಕೆಯಿರಿಸಿ ತನ್ನ ಅಥವಾ ರಿಝರ್ವ್ ಬ್ಯಾಂಕ್ ಹೆಸರಿನಲ್ಲಿ ನಕಲಿ ಇ-ಮೇಲ್‌ಗಳ ವಿರುದ್ಧ ಸೋಮವಾರ ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದ ಆರ್‌ಬಿಐ ಗವರ್ನರ್ ರಘುರಾಮ ರಾಜನ್ ಅವರು, ಇಂತಹ ವಂಚನೆಗಳಿಗೆ ಬಲಿಯಾಗದಂತೆ ಸೂಚಿಸಿದರು.
ಇಲ್ಲಿ ಏಕೀಕೃತ ಹಣ ಪಾವತಿ ವ್ಯವಸ್ಥೆಗೆ ಚಾಲನೆ ನೀಡಿ ಮಾತನಾಡಿದ ಅವರು, ಹಣ ಪಾವತಿಯನ್ನು ಕೋರಿ ಆರ್‌ಬಿಐ ಎಂದೂ ಇ-ಮೇಲ್‌ಗಳನ್ನು ಕಳುಹಿಸುವುದಿಲ್ಲ. ನಮ್ಮಲ್ಲಿ ಸುಮಾರು 360 ಶತಕೋಟಿ ಅಮೆರಿಕನ್ ಡಾಲರ್‌ಗಳಷ್ಟು ವಿದೇಶಿ ವಿನಿಮಯ ಮೀಸಲು ಸಂಗ್ರಹವಿದೆ ಮತ್ತು ಸುಮಾರು ಎಂಟು ಲಕ್ಷ ಕೋ.ರೂ.ಗಳ ಸರಕಾರಿ ಬಾಂಡ್‌ಗಳಿವೆ. ನಮಗೆ ನಿಜಕ್ಕೂ ಸಾರ್ವಜನಿಕರ ಹಣದ ಅಗತ್ಯವೇ ಇಲ್ಲ ಎಂದು ಹೇಳಿದರು.
ವಂಚಕರು ಈ ಹಿಂದೆ ಅಧಿಕ ಬಡ್ಡಿ ಮತ್ತು ಲಾಟರಿಯಲ್ಲಿ ಬಹುಮಾನ ಗೆದ್ದ ಆಮಿಷವೊಡ್ಡಿ ಆರ್‌ಬಿಐ ಹೆಸರಿನಲ್ಲಿ ಜನರಿಗೆ ನಕಲಿ ಇ-ಮೇಲ್‌ಗಳನ್ನು ಕಳುಹಿಸಿರುವ ಹಲವಾರು ನಿದರ್ಶನಗಳಿವೆ. ಆರಂಭದಲ್ಲಿ ಸಂಸ್ಕರಣಾ ಶುಲ್ಕವಾಗಿ ಸ್ವಲ್ಪ ಹಣವನ್ನು ಪಾವತಿಸುವಂತೆ ತಮ್ಮ ಸಂಭಾವ್ಯ ಬಲಿಪಶುಗಳಿಗೆ ಸೂಚಿಸುವ ಈ ವಂಚಕರು ಬಳಿಕ ಅವರಿಂದ ಕಂತುಗಳಲ್ಲಿ ಹಣ ಸುಲಿಗೆ ಮಾಡುತ್ತಾರೆ. ಈ ಹಣವನ್ನು ಬ್ಯಾಂಕಿನ ನಿರ್ದಿಷ್ಟ ಖಾತೆಗೆ ಜಮೆ ಮಾಡುವಂತೆ ಸೂಚಿಸಲಾಗಿರುತ್ತದೆ. ಈ ಖದೀಮರ ಆಮಿಷಕ್ಕೆ ಬಲಿ ಬಿದ್ದು ಅದೆಷ್ಟೋ ಜನರು ತಮ್ಮ ಲಕ್ಷಾಂತರ ರೂ.ಗಳನ್ನು ಕಳೆದುಕೊಂಡಿದ್ದಾರೆ.
ಇಂತಹ ಇ-ಮೇಲ್‌ಗಳು ಬಂದರೆ ಅವುಗಳನ್ನು ಕಡೆಗಣಿಸುವಂತೆ ರಾಜನ್ ಸಾರ್ವಜನಿಕರನ್ನು ಕೋರಿಕೊಂಡರು.