×
Ad

JNU ನಿಂದ ಮತ್ತೆ ಕನ್ಹಯ್ಯ, ಉಮರ್ , ಅನಿರ್ಬನ್ ಅಮಾನತು ?

Update: 2016-04-11 21:35 IST

ಹೊಸದಿಲ್ಲಿ,ಎ.11: ಜವಾಹರಲಾಲ ನೆಹರು ವಿವಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಕನ್ಹಯ್ಯಾ ಕುಮಾರ ಹಾಗೂ ಉಮರ ಖಾಲಿದ್ ಮತ್ತು ಅನಿರ್ಬಾಣ ಭಟ್ಟಾಚಾರ್ಯ ಅವರನ್ನು ಅಮಾನತುಗೊಳಿಸುವ ಸಾಧ್ಯತೆಯಿದೆ ಎಂದು ಹಲವಾರು ಮಾಧ್ಯಮಗಳು ವರದಿ ಮಾಡಿವೆ. ಈ ವರ್ಷದ ಆರಂಭದಲ್ಲಿ ಈ ಮೂವರು ವಿದ್ಯಾರ್ಥಿಗಳ ವಿರುದ್ಧ ದೇಶದ್ರೋಹ ಆರೋಪವನ್ನು ಹೊರಿಸಲಾಗಿತ್ತು ಮತ್ತು ಬಳಿಕ ಷರತ್ತುಬದ್ಧ ಜಾಮೀನಿನಲ್ಲಿ ಬಿಡುಗಡೆಗೊಳಿಸಲಾಗಿತ್ತು.

 ಕುಮಾರ, ಫೆ.9ರ ಕಾರ್ಯಕ್ರಮದ ಸಂಘಟಕರ ಪೈಕಿ ಖಾಲಿದ್ ಮತ್ತು ಭಟ್ಟಾಚಾರ್ಯ ಹಾಗೂ ಇತರ ಇಬ್ಬರು ವಿದ್ಯಾರ್ಥಿಗಳನ್ನು ವಿವಿಯ ಶಾಸನ 32(5)ರಡಿ ಎರಡು ಸೆಮಿಸ್ಟರ್‌ಗಳ ಅವಧಿಗೆ ಅಮಾನತುಗೊಳಿಸುವ ಸಾಧ್ಯತೆಯಿದೆ ಮತ್ತು ಇತರರಿಗೆ ತುಲನಾತ್ಮಕವಾಗಿ ಲಘು ದಂಡನೆಯನ್ನು ವಿಧಿಸಬಹುದು ಎಂದು ಮೂಲಗಳನ್ನು ಉಲ್ಲೇಖಿಸಿ ವರದಿಯೊಂದು ತಿಳಿಸಿದೆ.

ಪರೀಕ್ಷೆಗಳ ಆರಂಭಕ್ಕೆ ಮೊದಲು ಪ್ರತಿಯೊಬ್ಬ ವಿದ್ಯಾರ್ಥಿಗೂ ದಂಡನೆಯ ಬಗ್ಗೆ ತಿಳಿಸಲಾಗುವುದು ಎಂದು ಅದು ಹೇಳಿದೆ.

ಎರಡು ತಿಂಗಳ ಅವಧಿಯಲ್ಲಿ ಇದೀಗ ಎರಡನೇ ಬಾರಿಗೆ ಈ ವಿದ್ಯಾರ್ಥಿಗಳ ಸಂಭಾವ್ಯ ಅಮಾನತಿನ ಬಗ್ಗೆ ವರದಿಗಳು ಕಾಣಿಸಿಕೊಂಡಿವೆ.

ಕಳೆದ ಮಾರ್ಚ್‌ನಲ್ಲಿ ಈ ವಿದ್ಯಾರ್ಥಿಗಳ ಉಚ್ಚಾಟನೆಗೆ ಜೆಎನ್‌ಯು ತನಿಖಾ ಸಮಿತಿಯು ಶಿಫಾರಸು ಮಾಡಿದೆ ಎಂದು ವರದಿಗಳು ಮಾಧ್ಯಮಗಳಲ್ಲಿ ಕಾಣಿಸಿಕೊಂಡಾಗ,ವಿವಿಯು ಹೇಳಿಕೆಯನ್ನು ನೀಡಿ ಆ ಸಾಧ್ಯತೆಯನ್ನು ನಿರಾಕರಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News