ಪರೀಕ್ಷಾ ವ್ಯವಸ್ಥೆಯೇ ಬದಲಾಗಲಿ
ಇಂದು ರಸಾಯನ ಶಾಸ್ತ್ರ ಪರೀಕ್ಷೆ. ಈ ಪರೀಕ್ಷೆಯ ಕುರಿತಂತೆ ವಿದ್ಯಾರ್ಥಿ ಗಳಿಗಿಂತ ಸರಕಾರವೇ ಹೆಚ್ಚು ತಲೆಕೆಡಿಸಿಕೊಂಡಿದೆ. ಯಾಕೆಂದರೆ, ಈ ಪರೀಕ್ಷೆಯ ಪಾಸು-ಫೇಲು ಸರಕಾರದ ಮೇಲೂ ಪರಿಣಾಮ ಬೀಳಲಿದೆ. ಎಲ್ಲಕ್ಕಿಂತ ಮುಖ್ಯವಾಗಿ ರಾಜ್ಯ ಸಚಿವ ಕಿಮ್ಮನೆ ರತ್ನಾಕರ ಅವರು, ಪ್ರಶ್ನೆ ಪತ್ರಿಕೆ ಈ ಬಾರಿ ಸೋರಿಕೆಯಾದದ್ದೇ ಆದಲ್ಲಿ ತಾನು ರಾಜೀನಾಮೆ ನೀಡುತ್ತೇನೆ ಎಂದು ಹೇಳಿಕೆ ನೀಡಿರುವುದು, ವಿರೋಧ ಪಕ್ಷದ ಮಂದಿಗೆ ಒಂದಿಷ್ಟು ರೋಮಾಂಚನ ತಂದಿದೆ. ಇಂತಹದೊಂದು ಹೇಳಿಕೆಯನ್ನು ಸಚಿವ ಕಿಮ್ನನೆ ಅವರು ನೀಡುವ ಅಗತ್ಯವಿದ್ದಿರಲಿಲ್ಲ. ಪ್ರಶ್ನೆ ಪತ್ರಿಕೆ ಸಿದ್ಧಪಡಿಸುವ ಮಾಹಿತಿಯನ್ನು ಭಾಗಶಃ ಸಚಿವರಿಗೂ ಮುಚ್ಚಿಡಲಾಗುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ, ಪ್ರಶ್ನೆ ಪತ್ರಿಕೆ ಸೋರಿಕೆಯಲ್ಲಿ ಸಚಿವರ ಭಾಗೀದಾರಿಕೆ ಈವರೆಗೆ ಬೆಳಕಿಗೆ ಬಂದಿಲ್ಲ. ಅದನ್ನು ನೇರವಾಗಿ ತಡೆಯುವುದು ಸಚಿವರಾಗಿ ಕಷ್ಟ ಸಾಧ್ಯ. ಇಡೀ ರಾಜ್ಯಾದ್ಯಂತ ವಿತರಿಸಲ್ಪಡುವ ಪತ್ರಿಕೆ, ಯಾವುದೋ ಒಂದು ಮೂಲೆಯಲ್ಲಿ ಸೋರಿಕೆಯಾಗಿ ಬಿಟ್ಟರೆ ಅದರ ಮೂಲ ಹುಡುಕುವುದು ಸಣ್ಣ ವಿಷಯವಲ್ಲ. ಕಿಮ್ಮನೆ ಅವರು ರಾಜೀನಾಮೆಯ ಕೊಡುಗೆಯನ್ನು ನೀಡಿರುವುದು ದುಷ್ಕರ್ಮಿಗಳಿಗೆ ಮುಖ್ಯವಾಗಿ ರಾಜಕೀಯದೊಳಗಿರುವ ದುಷ್ಟ ಶಕ್ತಿಗಳಿಗೆ ಕುಮ್ಮಕ್ಕು ನೀಡಿದಂತಾಗಬಹುದು. ಕಿಮ್ಮನೆ ರಾಜೀನಾಮೆ ನೀಡುವ ಕಾರಣಕ್ಕಾಗಿಯಾದರೂ ಪ್ರಶ್ನೆ ಪತ್ರಿಕೆಯನ್ನು ಸೋರಿಕೆ ಮಾಡಲು ಅವರ ವಿರೋಧಿಗಳು ಸಂಚು ಹೂಡಿದರೆ, ಸದ್ಯದ ರಾಜಕೀಯ ಸಂದರ್ಭದಲ್ಲಿ ಅಚ್ಚರಿಯೇನೂ ಇಲ್ಲ. ಕಿಮ್ಮನೆಯ ವಿರುದ್ಧದ ಸಂದರ್ಭ ಬಂದಾಗಲೆಲ್ಲ ಕೋಮುಶಕ್ತಿಗಳು ಸಂಚು ಹೂಡುತ್ತಲೇ ಬಂದಿವೆ. ತೀರ್ಥಹಳ್ಳಿಯಲ್ಲಿ ವಿದ್ಯಾರ್ಥಿನಿಯ ಆತ್ಮಹತ್ಯೆಯನ್ನು ಕೊಲೆಯೆಂದು ವದಂತಿ ಹಬ್ಬಿಸಿ ಕಿಮ್ಮನೆಯ ರಾಜೀನಾಮೆ ಕೇಳಿದವರು, ಈ ಸಂದರ್ಭವನ್ನು ತಮಗೆ ಪೂರಕವಾಗಿ ಬಳಸಿಕೊಳ್ಳಲಾರರು ಎಂದು ಹೇಳುವಂತಿಲ್ಲ. ಅಧಿಕಾರಿ ವರ್ಗಗಳಲ್ಲಿಯೂ ವಿವಿಧ ರಾಜಕೀಯ ಒಲವು ಇರುವವರ ಸಂಖ್ಯೆ ಕಡಿಮೆಯೇನೂ ಇಲ್ಲ. ಆದುದರಿಂದ, ಈ ಬಾರಿ ಪ್ರಶ್ನೆ ಪತ್ರಿಕೆ ಸೋರಿಕೆಯಾಗುವ ಸಾಧ್ಯತೆ ಹಿಂದೆಂದಿಗಿಂತಲೂ ಜಾಸ್ತಿಯಿದೆ. ಇಲ್ಲಿ ವಿದ್ಯಾರ್ಥಿಗಳ ಹಿತಾಸಕ್ತಿಗಳು ರಾಜಕಾರಣಿಗಳಿಗೆ ಮುಖ್ಯವಾಗದೇ, ರಾಜಕೀಯ ಪ್ರತಿಷ್ಠೆ ಮುನ್ನೆಲೆಗೆ ಬಂದಿರುವುದರಿಂದ, ಜನರು ಹೆಚ್ಚು ಆತಂಕಪಡುವಂತಾಗಿದೆ. ಪ್ರಶ್ನೆ ಪತ್ರಿಕೆ ಯಾವ ಕಾರಣಕ್ಕೂ ರಾಜಕೀಯ ಪ್ರತಿಷ್ಠೆಯ ಪ್ರಶ್ನೆಯಾಗಬಾರದು. ಪ್ರಶ್ನೆ ಪತ್ರಿಕೆಗಳು ಸೋರಿಕೆಯಾಗಿರುವುದು ಇದೇ ಮೊದಲೇನಲ್ಲ. ಈ ಹಿಂದೆ ಹತ್ತು ಹಲವು ಬಾರಿ ಬೆಳಕಿಗೆ ಬಂದಿದೆ. ಕೆಲವು ಬಾರಿ ಸೋರಿಕೆಯಾದುದು ಯಾರ ಗಮನಕ್ಕೂ ಬರಲಿಲ್ಲ. ಗಮನಕ್ಕೆ ಬಂದರೂ ಆ ಸರಕಾರ ಅದನ್ನು ವದಂತಿ ಎಂದು ತೇಲಿಸಿ ಬಿಟ್ಟಿತ್ತು. ಆದರೆ ಈ ಬಾರಿ ಮಾತ್ರ ಸೋರಿಕೆಯನ್ನು ಸರಕಾರ ಗಂಭೀರವಾಗಿ ಪರಿಗಣಿಸಿದೆ. ಇದೇ ಸಂದರ್ಭದಲ್ಲಿ ಈ ಸೋರಿಕೆಯ ಹಿಂದೆ ವಿಧಾನಸಭೆಗೆ ಹತ್ತಿರವಿರುವ ಹೆಗ್ಗಣಗಳ ಕೈವಾಡವೂ ಬಯಲಿಗೆ ಬಂದಿದೆ. ಈಗಾಗಲೇ ತನಿಖೆಯಿಂದ ಹೊರ ಬಂದಿರುವ ವರದಿಗಳ ಹಿನ್ನೆಲೆಯಲ್ಲಿ, ಪ್ರಶ್ನೆ ಪತ್ರಿಕೆ ಸೋರಿಕೆಗೆ ಶಾಶ್ವತವಾದ ತಡೆಯನ್ನು ಹಾಕಬೇಕಾಗಿದೆ. ಯಾರು ಕಾರಣ ಎನ್ನುವುದು ಎಷ್ಟು ಮುಖ್ಯವೋ, ಅಪರಾಧಿಗಳಿಗೆ ಶಿಕ್ಷೆಯಾಗುವುದು ಎಷ್ಟು ಮುಖ್ಯವೋ ಹಾಗೆಯೇ ಭವಿಷ್ಯದಲ್ಲೆಂದೂ ಇಂತಹ ಘಟನೆ ನಡೆಯದಂತೆ ಬಂದೋಬಸ್ತ್ ಏರ್ಪಡಿಸುವುದು ಅಷ್ಟೇ ಮುಖ್ಯ. ಶಿಕ್ಷಣ ಇಲಾಖೆಯಲ್ಲಿ ಎಲ್ಲೆಲ್ಲ ಬಿಲಗಳಿವೆಯೋ ಅವುಗಳನ್ನು ಶಾಶ್ವತವಾಗಿ ಮುಚ್ಚಿಸುವುದಕ್ಕೆ ಈ ಸೋರಿಕೆ ವಿವಾದ ಕಾರಣವಾಗಬೇಕು. ಆದರೆ ಅದರ ಬದಲು ವಿರೋಧ ಪಕ್ಷಗಳು ಇದನ್ನು ರಾಜಕೀಯಗೊಳಿಸಿದಷ್ಟೂ ಈ ಸೋರಿಕೆ ಇನ್ನಷ್ಟು ಜಟಿಲವಾಗುತ್ತದೆ. ಪೋಷಕರು, ಅಧಿಕಾರಿಗಳಲ್ಲದೇ ರಾಜಕಾರಣಗಳಿಗೂ ಸೋರಿಕೆ ಅತ್ಯಗತ್ಯವಾಗಿ ಬಿಡುತ್ತದೆ. ಇದರ ಪರಿಣಾಮವನ್ನು ಅನುಭವಿಸುವವರು ಮಾತ್ರ ವಿದ್ಯಾರ್ಥಿಗಳು. ಒಮ್ಮೆ ಪ್ರಶ್ನೆಪತ್ರಿಕೆಗಳಲ್ಲಿ ಈ ಥರದ ರಾಜಕೀಯ ಹಗ್ಗಜಗ್ಗಾಟ ಆರಂಭವಾದರೆ ಅದು ಪ್ರತಿವರ್ಷ ಮುಂದುವರಿಯ ತೊಡಗುತ್ತದೆ. ರಾಜಕೀಯ ಇಡೀ ಶಿಕ್ಷಣವ್ಯವಸ್ಥೆಯನ್ನೇ ನುಂಗಿ ಹಾಕಬಹುದು. ಮಕ್ಕಳು ಪರೀಕ್ಷೆ ಬರೆದ ಬಳಿಕವೂ ನೆಮ್ಮದಿಯಿಂದ ಭವಿಷ್ಯದ ಕುರಿತಂತೆ ಯೋಜನೆಗಳನ್ನು ರೂಪಿಸುವುದು ಕಷ್ಟಕರವಾಗಬಹುದು. ವದಂತಿಗಳು ವಿದ್ಯಾರ್ಥಿಗಳಲ್ಲಿ ಅಭದ್ರತೆಯನ್ನು, ಆತಂಕವನ್ನು, ಒತ್ತಡಗಳನ್ನು ಬಿತ್ತಬಹುದು. ಈ ಬಾರಿ ಎಲ್ಲೆಡೆ ಬಿಗಿ ಭದ್ರತೆಯನ್ನು ಕೈಗೊಳ್ಳಲಾಗಿದೆ. ಪ್ರತಿ ಶಾಲೆಗಳಲ್ಲೂ ಸಿಸಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ. ವಿದ್ಯಾರ್ಥಿಗಳ ಮೇಲೆ ಕಣ್ಣಿಡಲು ವಿಶೇಷ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಒಂದು ರೀತಿಯಲ್ಲಿ ಪರೀಕ್ಷೆಯ ನೆಪದಲ್ಲಿ ಇಡೀ ರಾಜ್ಯದ ವಿದ್ಯಾರ್ಥಿಗಳಿಗೆ ಒಂದು ದಿನದ ದಿಗ್ಬಂಧವನ್ನೇ ವಿಧಿಸಿದಂತಾಗಿದೆ. ಒಂದು ರೀತಿಯಲ್ಲಿ, ಎತ್ತಿಗೆ ಜ್ವರ ಬಂದರೆ, ಎಮ್ಮೆಗೆ ಬರೆ ಹಾಕಿದಂತಾಗಿದೆ. ಈ ಒತ್ತಡದ ಸಂಪೂರ್ಣ ಫಲಾನುಭವಿಗಳು ವಿದ್ಯಾರ್ಥಿಗಳಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರಶ್ನೆ ಪತ್ರಿಕೆಗಳನ್ನು ತಯಾರಿಸಿ, ಅದನ್ನು ಸೋರಿಕೆಯಾಗದಂತೆ ತಡೆಯಲು ಹಗಲು ರಾತ್ರಿ ನಿದ್ರೆ ಕಳೆಯುವುದಕ್ಕಿಂತ, ಪರೀಕ್ಷೆಯ ವ್ಯವಸ್ಥೆಯನ್ನೇ ಸಂಪೂರ್ಣ ಬದಲಿಸುವತ್ತ ಸರಕಾರ ಯೋಚಿಸುವುದು ಒಳಿತು. ಇಂದು ಶಿಕ್ಷಣ ಇಲಾಖೆ ಹಮ್ಮಿಕೊಳ್ಳುತ್ತಿರುವ ಪರೀಕ್ಷಾ ಕ್ರಮ ಎರಡು, ಮೂರು ದಶಕಗಳಷ್ಟು ಹಿಂದಿನದು. ಈ ವ್ಯವಸ್ಥೆಗೆ ಸರಕಾರ ಭಾರೀ ಹಣವನ್ನೂ ವೆಚ್ಚ ಮಾಡುತ್ತಿದೆ. ಇದರ ಬದಲಿಗೆ, ಆಧುನಿಕ ದಿನಗಳಿಗೆ ಪೂರಕವಾಗಿ, ವಿದ್ಯಾರ್ಥಿಗಳ ಪ್ರತಿಭೆಯನ್ನಷ್ಟೇ ಯಶಸ್ವಿಯಾಗಿ ಒರೆಗೆ ಹಚ್ಚುವಂತಹ ಮಾರ್ಗವೊಂದನ್ನು ಕಂಡುಕೊಳ್ಳುವುದಕ್ಕೆ ಇದು ಸರಿಯಾದ ಸಮಯವಾಗಿದೆ. ಈ ನಿಟ್ಟಿನಲ್ಲಿ ಈ ನಾಡಿನ ಶಿಕ್ಷಣ ತಜ್ಞರು, ಅಧಿಕಾರಿಗಳು, ಚಿಂತಕರ ನಡುವೆ ಶಿಕ್ಷಣ ಇಲಾಖೆ ಸಭೆ, ಚರ್ಚೆಗಳನ್ನು ನಡೆಸಬೇಕಾಗಿದೆ. ಮಾಹಿತಿ ತಂತ್ರಜ್ಞಾನವನ್ನು ಈ ಪರೀಕ್ಷೆಗಳಿಗೆ ಹೇಗೆ ಪೂರಕವಾಗಿ ಬಳಸಿಕೊಳ್ಳಬಹುದು ಎನ್ನುವುದನ್ನೂ ಸರಕಾರ ಯೋಚಿಸಬೇಕು. ಪರೀಕ್ಷೆಯೆನ್ನುವುದು ವಿಧಾನಸಭಾ ಚುನಾವಣೆಯಲ್ಲ. ಒಬ್ಬನ ಪ್ರತಿಭೆಯನ್ನು ಕೇವಲ ಮೂರು ಗಂಟೆಯಲ್ಲಿ ಅಳೆಯಲು ಹೊರಡುವುದು ಹಳೆಯ ತಂತ್ರ. ಇಂದು ವಿದ್ಯಾರ್ಥಿಗಳು ಅತ್ಯಾಧುನಿಕವಾಗಿ ಯೋಚನೆ ಮಾಡುತ್ತಿರುವಾಗ, ಶಿಕ್ಷಕರು, ಶಿಕ್ಷಣ ಇಲಾಖೆ ಕೂಡ ಅವರ ಜೊತೆ ಜೊತೆಗೆ ವೇಗವಾಗಿ ಸಾಗಬೇಕು. ಅವರ ಬುದ್ಧಿಮತ್ತೆಗೆ ಸರಿಗಟ್ಟುವ ಪರೀಕ್ಷಾ ಕ್ರಮಗಳನ್ನು ಅಳವಡಿಸಿದರೆ, ಈ ಸೋರಿಕೆಯ ಸಮಸ್ಯೆಯಿಂದಲೂ ಸುಲಭದಲ್ಲಿ ಪಾರಾಗಬಹುದು.