ಉತ್ತಮ ಮಳೆ..ಸಮೃದ್ಧ ಬೆಳೆ..ನಳನಳಿಸಲಿದೆ ಇಳೆ
ಹೊಸದಿಲ್ಲಿ: ರೈತರಿಗೆ, ಭೀಕರ ಬರದಿಂದ ಕಂಗೆಟ್ಟ ಲಾತೂರ್‌ನಂಥ ನಗರಗಳಿಗೆ ಗುಡ್‌ನ್ಯೂಸ್. ಹವಾಮಾನ ಇಲಾಖೆ ಭವಿಷ್ಯದ ಪ್ರಕಾರ, ಈ ಮುಂಗಾರಿನಲ್ಲಿ ಸರಾಸರಿಗಿಂತಲೂ ಅಧಿಕ ಮಳೆ ಬೀಳಲಿದೆ. ಎರಡು ವರ್ಷಗಳ ಬರದ ಸರಣಿ ಕಡಿದು, ಸಮೃದ್ಧ ಬೆಳೆ ಬರಲಿದೆ. ಇದರಿಂದ ದೇಶದ ಕೃಷಿ ಆರ್ಥಿಕತೆ ನಳನಳಿಸಲಿದೆ.
ಹವಾಮಾನ ಇಲಾಖೆಯ ಧೀರ್ಘಾವಧಿ ಮುನ್ಸೂಚನೆ ಪ್ರಕಾರ ವಾಡಿಕೆ ಮಳೆಯ ಶೇಕಡ 106ರಷ್ಟು ಮಳೆ ಬೀಲಿದ್ದು, ಮಳೆಯಲ್ಲಿ ಲೋಪ ಸಾಧ್ಯತೆ ಕೇವಲ ಶೇಕಡ 5ರಷ್ಟು ಮಾತ್ರ ಇರಲಿದೆ. ಇದು ಈಗಾಗಲೇ ಪ್ರಕಟವಾಗಿರುವ ಎರಡು ಖಾಸಗಿ ಸಂಸ್ಥೆಗಳ ಮುನ್ಸೂಚನೆ ಹಾದಿಯಲ್ಲೇ ಇದೆ. ಒಟ್ಟಿನಲ್ಲಿ ಇದು ಮೋದಿ ಸರ್ಕಾರದ ಅತ್ಯುತ್ತಮ ಮಳೆ ವರ್ಷವಾಗಲಿದೆ.
ಮಳೆ ಕೊರತೆಯಿಂದಾಗಿ ಕೃಷಿ ಕ್ಷೇತ್ರದ ಬೆಳವಣಿಗೆ 2014-15ನೇ ವರ್ಷದಲ್ಲಿ ಶೇಕಡ 1.3ಕ್ಕೆ ಕುಂಠಿತವಾಗಿದ್ದು, 2015-16ರಲ್ಲಿ ಈ ಪ್ರಮಾಣ ಶೇಕಡ2ರ ಆಸುಪಾಸಿನಲ್ಲಿದೆ ಎಂದು ಅಂದಾಜು ಮಾಡಲಾಗಿದೆ. ಇದು ನಿರೀಕ್ಷಿತ ಅಭಿವೃದ್ಧಿ ದರವಾದ ಶೇಕಡ 4ರ ಪ್ರಗತಿಯ ಅರ್ಧದಷ್ಟು ಮಾತ್ರ. ಕೃಷಿ ಕ್ಷೇತ್ರ ದೇಶದ ಆರ್ಥಿಕತೆಗೆ ಅಂದರೆ ಜಿಡಿಪಿಯ ಶೇಕಡ 15ರಷ್ಟು ಕೊಡುಗೆ ನೀಡುತ್ತದೆಯಾದರೂ, ಶೇಕಡ 50ಕ್ಕಿಂತ ಅಧಿಕ ಮಂದಿಗೆ ಉದ್ಯೋಗ ಕಲ್ಪಿಸಿದೆ.
ಮಳೆ ಹಂಚಿಕೆ ಕೂಡಾ ಸಮಪ್ರಮಾಣದಲ್ಲಿ ಇರುವ ನಿರೀಕ್ಷೆ ಇದ್ದು, ಕ್ಷಾಮದಿಂದ ಕಂಗೆಟ್ಟಿರುವ ಮರಾಠವಾಡ ಮತ್ತು ವಿದರ್ಭ ಪ್ರದೇಶದಲ್ಲಿ ಕೂಡ ಉತ್ತಮ ಮಳೆಯಾಗುವ ಸಾಧ್ಯತೆ ಇದೆ. ಹತಾಶೆಯಿಂದ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದು, ಗ್ರಾಮೀಣ ಆದಾಯ ಹೆಚ್ಚಿದಲ್ಲಿ ಉತ್ತಮ ಪ್ರಗತಿಯ ಗುರಿಯನ್ನು ಸಾಧಿಸಬಹುದಾಗಿದೆ. ಮೇ ಅಂತ್ಯ ಅಥವಾ ಜೂನ್‌ನಲ್ಲಿ ಮುಂಗಾರು ನಿರೀಕ್ಷಿಸಲಾಗಿದೆ.