ಅಪ್ಪನ ಆತ್ಮಹತ್ಯೆ ತಡೆದ ಪುಟ್ಟ ಪೋರಿ!
ಕೊಲ್ಕತ್ತಾ, ಎ.13: ಪೊಲೀಸ್ ಸಹಾಯವಾಣಿ "100"ರ ದೂರವಾಣಿ ರಿಂಗಣಿಸಿದಾಗ ಫೋನ್ ಎತ್ತಿಕೊಂಡ ಪೊಲೀಸ್ ಪೇದೆಗೆ ಇನ್ನೊಂದು ಕಡೆಯಿಂದ "ನನ್ನ ತಂದೆ ಆತ್ಮಹತ್ಯೆ ಮಾಡಿಕೊಳ್ಳುವ ಪ್ರಯತ್ನದಲ್ಲಿದ್ದಾರೆ. ಪ್ಲೀಸ್ ಅವರನ್ನು ರಕ್ಷಿಸಿ" ಎಂಬ ಗದ್ಗದಿತ ಧ್ವನಿ ಕೇಳಿಸಿತು. ಆರಂಭದಲ್ಲಿ ಇದು ಹುಸಿ ಕರೆ ಎನಿಸಿದರೂ, ಕರ್ತವ್ಯದ ಕರೆ ಅವರನ್ನು ಸುಮ್ಮನಿರಲು ಅವಕಾಶ ಕೊಡಲಿಲ್ಲ. ಕರೆಯ ಜಾಡು ಹಿಡಿದು ಸೌತ್ ಸಿಂಥಿಯಲ್ಲಿ ಬಂದಿಳಿದಾಗ, ವ್ಯಕ್ತಿಯೊಬ್ಬ ಬೆಂಕಿಯಲ್ಲಿ ವಿಲವಿಲನೆ ಒದ್ದಾಡುತ್ತಿರುವ, ತಾಯಿ, ಮಗಳು ಅಳುವ ದೃಶ್ಯ ಕಂಡುಬಂತು!
ಶೇಕಡ 40ರಷ್ಟು ಸುಟ್ಟಗಾಯಗಳಾಗಿರುವ ಉದ್ಯಮಿ ರಾಜೀವ್ ಖನ್ನಾ ಅವರಿಗೆ ಸೂಕ್ತಸಮಯಕ್ಕೆ ಚಿಕಿತ್ಸೆ ದೊರಕಿದ್ದರಿಂದ ಅವರು ಬದುಕಿ ಉಳಿಯುವ ಸಾಧ್ಯತೆ ಇದೆ. ಆದರೆ ಇದೆಲ್ಲ ಸಾಧ್ಯವಾದದ್ದು 10 ವರ್ಷದ ಪೋರಿ ರಾಶಿಯ ಸಮಯಪ್ರಜ್ಞೆಯಿಂದ.
"ಕಷ್ಟಕಾಲದಲ್ಲಿ 100 ದೂರವಾಣಿ ಸಂಖ್ಯೆಗೆ ಕರೆ ಮಾಡಬೇಕು ಎನ್ನುವುದನ್ನು ಮೆಟ್ರೊ ಸ್ಟೇಷನ್‌ನಲ್ಲಿ ಜಾಹೀರಾತು ನೋಡಿದ್ದೆ" ಎಂದು ಕೊಲ್ಕತ್ತಾ ಪಬ್ಲಿಕ್ ಸ್ಕೂಲ್‌ನಲ್ಲಿ ಓದುತ್ತಿರುವ ರಾಶಿ ಹೇಳುತ್ತಾಳೆ. ಬೆಳಿಗ್ಗೆ 8.15ರ ಸುಮಾರಿಗೆ ಆಕೆ ಶಾಲೆಗೆ ಹೊರಡುವ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ನೆರೆಯವರು ಹೇಳುವಂತೆ, ಬೆಳಿಗ್ಗೆ ಖನ್ನಾ ಅವರ ಮನೆಯಿಂದ ವಾಗ್ವಾದ ಕೇಳಿಬಂತು.