ಪ್ರತಿಭಟನಾಕಾರರ ಮೇಲೆ ಗುಂಡು: ಸೈನಿಕರು ಲೈಂಗಿಕ ಹಿಂಸೆ ನೀಡಿಲ್ಲ
ಶ್ರೀನಗರ: ಸೈನಿಕರು ನನಗೆ ಯಾವುದೇ ಲೈಂಗಿಕ ಕಿರುಕುಳ ನೀಡಿಲ್ಲ ಎಂದು ಯುವತಿ ಹೇಳುವ ಮೂಲಕ ಕಾಶ್ಮೀರದಲ್ಲಿ ಪ್ರತಿಭಟನಾಕಾರರ ಮೇಲೆ ಗುಂಡು ಹಾಕಿದ ಘಟನೆ ವಿಚಿತ್ರ ತಿರುವು ಪಡೆದುಕೊಂಡಿದೆ.
ಯುವತಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಸೈನಿಕರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದವರ ಮೇಲೆ ಸೈನಿಕರು ಗುಂಡು ಹಾರಿಸಿದ ಘಟನೆಯಲ್ಲಿ ಇಬ್ಬರು ಮೃತಪಟ್ಟಿದ್ದರು.
ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಯೂಟ್ಯೂಬ್ ವಿಡಿಯೊ ಸಂದರ್ಶನದಲ್ಲಿ, "ನನ್ನ ಮೇಲೆ ಯಾವ ಸೈನಿಕರು ಕೂಡಾ ದೌರ್ಜನ್ಯ ಎಸಗಿಲ್ಲ" ಎಂದು ಈ ಹದಿಹರೆಯದ ಯುವತಿ ಸ್ಪಷ್ಟಪಡಿಸಿದ್ದಾಳೆ.
"ನಾನು ಸಾರ್ವಜನಿಕ ಶೌಚಾಲಯಕ್ಕೆ ಹೋಗುವಾಗ ನನ್ನ ಕೈಚೀಲವನ್ನು ಸ್ನೇಹಿತೆ ಬಳಿ ಕೊಟ್ಟಿದ್ದೆ. ನಾನು ವಾಪಾಸು ಬಂದಾಗ ಒಬ್ಬ ಕಾಶ್ಮೀರಿ ವಿದ್ಯಾರ್ಥಿ ನನಗೆ ಕೀಟಲೆ ಮಾಡಿ, ನನ್ನ ಬ್ಯಾಗ್ ಕಿತ್ತುಕೊಂಡ. ನನಗೆ ಹೊಡೆದು, ಈ ಕಣಿವೆ ರಾಜ್ಯದಲ್ಲಿ ಬೇರೆ ಯಾವ ಹುಡುಗರೂ ಇಲ್ಲವೇ ಎಂದು ಅವಮಾನಿಸಿದ. (ಸೈನಿಕನ ಜತೆ ಪ್ರೇಮಸಂಬಂಧ ಇದೆ ಎಂದು ಕೋಪದಿಂದ ಕೂಗಾಡಿದ). ಆತ ಏನು ಹೇಳುತ್ತಿದ್ದಾನೆ ಎಂಬ ಬಗ್ಗೆ ನನಗೆ ಗೊಂದಲವಾಯಿತು ಹಾಗೂ ಆಘಾತವೂ ಆಯಿತು. ದಿಢೀರನೇ ಹಲವು ಹುಡುಗರು ಬಂದರು. ಅವರೊಂದಿಗೆ ಪೊಲೀಸ್ ಠಾಣೆಗೆ ಬರುವಂತೆ ಒತ್ತಾಯಿಸಿದರು. ಅಲ್ಲೇ ಪಕ್ಕದಲ್ಲಿ ಪೊಲೀಸ್ ಇದ್ದರು. ನನ್ನ ಬ್ಯಾಗ್ ವಾಪಾಸು ಕೊಡುವಂತೆ ಕೇಳಿ, ಪೊಲೀಸ್ ಜತೆಗೆ ಠಾಣೆಗೆ ಬರುತ್ತೇನೆ ಎಂದು ಹೇಳಿದೆ. ಬ್ಯಾಗ್ ಕೊಡಲು ನಿರಾಕರಿಸಿ, ನನ್ನನ್ನು ನಿಂದಿಸಲು ಆರಂಭಿಸಿದ" ಎಂದು ವಿವರಿಸಿದ್ದಾಳೆ.
ಉತ್ತರ ಕಾಶ್ಮೀರದ ಹಂದ್ವಾರಾ ಶಿಬಿರದಲ್ಲಿ ರಾಷ್ಟ್ರೀಯ ರೈಫಲ್‌ನ ಸೈನಿಕರು ಯುವತಿ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂಬ ಸುದ್ದಿ ಕಾಳ್ಗಿಚ್ಚಿನಂತೆ ಹರಡಿ ಮಂಗಳವಾರ ಮಧ್ಯಾಹ್ನ ಬೃಹತ್ ಪ್ರತಿಭಟನೆ ಭುಗಿಲೆದ್ದಿತು. ಪ್ರತಿಭಟನಾಕಾರರು ಸೇನಾ ಶಿಬಿರಕ್ಕೆ ಬೆಂಕಿ ಇಟ್ಟು, ಕಲ್ಲು ತೂರಾಟ ನಡೆಸಿದರು. ಪೊಲೀಸರ ಮೇಲೂ ದಾಳಿ ಮಾಡಿ ಸ್ಥಳೀಯ ಠಾಣೆಯನ್ನೂ ಧ್ವಂಸಗೊಳಿಸಿದರು. ಹಲವು ಮಂದಿ ಪೊಲೀಸರು ಪ್ರತಿಭಟನಾಕಾರರಿಂದ ಏಟು ತಿಂದರು. ಸೈನಿಕರು ಗುಂಡು ಹಾರಿಸಿದಾಗ ಮಹಿಳೆ ಸೇರಿದಂತೆ ಇಬ್ಬರು ಮೃತಪಟ್ಟರು.
"ವಾಷ್‌ರೂಂ ಅಥವಾ ಪಕ್ಕದಲ್ಲಿ ಯಾವ ಸೈನಿಕರೂ ಇರಲಿಲ್ಲ. ನಾನು ಪರಿಚಿತ ಯುವಕನೊಬ್ಬನನ್ನು ನೋಡಿದೆ. ಆತ ಕೂಡಾ ನನಗೆ ಹೊಡೆದು ಇಂಥ ಅಕ್ರಮ ಸಂಬಂಧ ಏಕೆ ಬೆಳೆಸಿದೆ ಎಂದು ನಿಂದಿಸಿದ. ನಾನು ಆಗ ನಮ್ಮ ಬಗ್ಗೆ, ಕುಟುಂಬದ ಬಗ್ಗೆ ಗೊತ್ತಿದ್ದೂ ಹೀಗೆ ಆರೋಪ ಏಕೆ ಮಾಡುತ್ತಿದ್ದೀರಿ ಎಂದು ಪ್ರಶ್ನಿಸಿದೆ. ಬಹುಶಃ ಅವರು ಮೊದಲೇ ಪಿತೂರಿ ನಡೆಸಿದಂತಿತ್ತು. ಆ ಹುಡುಗ ತೊಂದರೆ ಸೃಷ್ಟಿಸುವಂತೆ ಎಲ್ಲರನ್ನೂ ಪ್ರಚೋದಿಸಿದ" ಎಂದು ವಿಡಿಯೊದಲ್ಲಿ ಯುವತಿ ಹೇಳಿಕೊಂಡಿದ್ದಾಳೆ.
ಈ ವಿಡಿಯೊದಲ್ಲಿ ಯುವತಿ ಸತ್ಯ ಬಹಿರಂಗಪಡಿಸುವ ಮೂಲಕ ದಾಳಿಕೋರರ ದುರುದ್ದೇಶವನ್ನು ಬಹಿರಂಗಪಡಿಸಿದ್ದಾಳೆ ಎಂದು ರಕ್ಷಣಾ ಇಲಾಖೆ ವಕ್ತಾರ ಕರ್ನಲ್ ಮನೀಶ್ ಕುಮಾರ್ ಪ್ರತಿಕ್ರಿಯಿಸಿದ್ದಾರೆ. ಈ ಮಧ್ಯೆ ಘಟನೆಯಲ್ಲಿ ತೀವ್ರ ಗಾಯಗೊಂಡಿದ್ದ ರಾಜಾ ಬೇಗಂ ಎಂಬ ಮಹಿಳೆ ಮಂಗಳವಾರ ರಾತ್ರಿ ಮೃತಪಟ್ಟಿದ್ದಾಳೆ. ಇದರೊಂದಿಗೆ ಮೃತಪಟ್ಟವರ ಸಂಖ್ಯೆ ಮೂರಕ್ಕೆ ಏರಿದೆ. ಆಕೆಯ ಶವವನ್ನು ಬುಧವಾರ ಮನೆಗೆ ತಂದಾಗ ಅಲ್ಲೂ ಪ್ರತಿಭಟನೆ ನಡೆದು, ಉದ್ವಿಗ್ನ ಸ್ಥಿತಿ ನಿರ್ಮಾಣವಾಯಿತು.
ಹಂದ್ವಾರ ಮತ್ತು ಶ್ರೀನಗರದಲ್ಲಿ ಕರ್ಫ್ಯೂ ವಿಧಿಸಲಾಗಿದೆ.