ಹೈದ್ರಾಬಾದ್ ವಿವಿ ಕುಲಪತಿ ವಜಾ ಆಗ್ರಹಿಸಿ ವಿದ್ಯಾರ್ಥಿ ಸಂಘ ನಿರ್ಣಯ

Update: 2016-04-13 14:30 GMT

ಹೈದ್ರಾಬಾದ್: ಹೈದ್ರಾಬಾದ್ ಕೇಂದ್ರೀಯ ವಿಶ್ವವಿದ್ಯಾನಿಲಯದ ಕುಲಪತಿ ಅಪ್ಪಾರಾವ್ ಪೊದಿಲೆ ತಕ್ಷಣ ರಾಜೀನಾಮೆ ನೀಡಬೇಕು ಅಥವಾ ಅವರನ್ನು ವಜಾಗೊಳಿಸಬೇಕು ಎಂದು ಆಗ್ರಹಿಸುವ ನಿರ್ಣಯವನ್ನು ಹೈದ್ರಾಬಾದ್ ವಿವಿ ವಿದ್ಯಾರ್ಥಿ ಸಂಘ ಆಂಗೀಕರಿಸಿದೆ.

ವಿಶ್ವವಿದ್ಯಾನಿಲಯ ವಿದ್ಯಾರ್ಥಿ ಸಂಘದ ಸರ್ವಸದಸ್ಯರ ಸಭೆ ಮಂಗಳವಾರ ನಡೆದಿದ್ದು, ಇದರಲ್ಲಿ 949 ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಕಳೆದ ಜನವರಿಯಲ್ಲಿ ಹಾಸ್ಟೆಲ್ ಕೊಠಡಿಯಲ್ಲಿ ಆತ್ಮಹತ್ಯೆ ಮಾಡಿಕೊಂಡ ದಲಿತ ಸಂಶೋಧನಾ ವಿದ್ಯಾರ್ಥಿ ರೋಹಿತ್ ವೆಮುಲಾ ಅವರಿಗೆ ಶ್ರದ್ಧಾಂಜಲಿ ಸಲ್ಲಿಸುವುದು ಸೇರಿದಂತೆ ಆರು ನಿರ್ಣಯಗಳನ್ನು ಸರ್ವಾನುಮತದಿಂದ ಆಂಗೀಕರಿಸಲಾಯಿತು ಎಂದು ಪ್ರಕಟಣೆ ಹೇಳಿದೆ.

ವಿಶ್ವವಿದ್ಯಾನಿಲಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಝುಹೈಲ್ ಕೆ.ಪಿ. ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು. ವೆಮುಲಾ ಆತ್ಮಹತ್ಯೆ ಬಳಿಕ ಕ್ಯಾಂಪಸ್‌ನಲ್ಲಿ ಸಂಭವಿಸಿದ ಬೆಳವಣಿಗೆಗಳನ್ನು ವಿವರಿಸಿದರು. ಸರ್ವಸದಸ್ಯರ ಸಭೆಯಲ್ಲಿ ವಿದ್ಯಾರ್ಥಿಗಳಿಂದ ಅಭಿಪ್ರಾಯಗಳನ್ನು ಆಹ್ವಾನಿಸಿದರು. ಕುಲಪತಿ ರಾಜೀನಾಮೆ ನೀಡಬೇಕು ಅಥವಾ ಅವರನ್ನು ವಜಾ ಮಾಡಬೇಕು ಎಂದು ಆಗ್ರಹಿಸುವ ನಿರ್ಣಯವನ್ನು ಮತಕ್ಕೆ ಹಾಕಿದಾಗ 948 ಮಂದಿ ಪರವಾಗಿ ಮತ ಚಲಾಯಿಸಿದರು. ಒಬ್ಬ ವಿದ್ಯಾರ್ಥಿ ಇದಕ್ಕೆ ವಿರುದ್ಧವಾಗಿ ಮತ ಚಲಾಯಿಸಿದ ಎಂದು ಪ್ರಕಟಣೆ ವಿವರಿಸಿದೆ.

ವೆಮುಲಾ ಆತ್ಮಹತ್ಯೆ ಹಿನ್ನೆಲೆಯಲ್ಲಿ ಕುಲಪತಿ ರಾಜೀನಾಮೆಗೆ ಆಗ್ರಹಿಸಿ ವಿದ್ಯಾರ್ಥಿಗಳು ತೀವ್ರ ಚಳವಳಿ ಕೈಗೊಂಡಿದ್ದರು. ಆತ್ಮಹತ್ಯೆಗೆ ಕುಮ್ಮಕ್ಕು ನಿಡಿದ ಆರೀಪದಲ್ಲಿ ಮತ್ತು ದಲಿತ ದೌರ್ಜನ್ಯ ತಡೆ ಕಾಯ್ದೆಯಡಿ ಅಪ್ಪಾರಾವ್ ವಿರುದ್ಧ ಪ್ರಕರಣವೂ ದಾಖಲಾಗಿದೆ. ಅಪ್ಪಾರಾವ್ ವಜಾಗೊಳಿಸಿ, ಕ್ಯಾಂಪಸ್ ರಕ್ಷಿಸುವಂತೆ ಕೋರಿ ವಿದ್ಯಾರ್ಥಿಗಳು ಮಾರ್ಚ್ 30ರಂದು ರಾಷ್ಟ್ರಪತಿಗೂ ಮನವಿ ಸಲ್ಲಿಸಿದ್ದರು.

ವಿಶ್ವವಿದ್ಯಾನಿಲಯದಲ್ಲಿ ಅಳವಡಿಸಿರುವ ತಡೆಗಳನ್ನು ತೆರವು ಮಾಡಬೇಕು, ಕ್ಯಾಂಪಸ್‌ನ ಮಿಲಿಟರೀಕರಣ ತಡೆಯಬೇಕು, ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಪಕ್ಷಪಾತ ಹಾಗೂ ಸ್ವಜನ ಹಿತಾಸಕ್ತಿ ತಡೆಗೆ ಸಮಿತಿ ನೇಮಿಸಬೇಕು ಎಂಬ ನಿರ್ಣಯಗಳನ್ನು ಅವಿರೋಧವಾಗಿ ಆಂಗೀಕರಿಸಲಾಯಿತು. ಜತೆಗೆ ವಿದ್ಯಾರ್ಥಿಗಳು ಮತ್ತು ಪ್ರಾಧ್ಯಾಪಕರ ಮೇಲೆ ದಾಖಲಿಸಿರುವ ಎಲ್ಲ ಪೊಲೀಸ್ ಪ್ರಕರಣಗಳನ್ನು ಕೈಬಿಡುವಂತೆಯೂ ಅವಿರೋಧ ನಿರ್ಣಯ ಆಂಗೀಕರಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News