ಭಾರತದ ಆರ್ಥಿಕತೆಗೆ 3 ಶುಭ ಸುದ್ದಿಗಳು!

Update: 2016-04-13 15:46 GMT

ಹೊಸದಿಲ್ಲಿ, ಎ.13: ಬರುತ್ತಿರುವ ಒಳ್ಳೆಯ ಸುದ್ದಿಗೊಂಚಲುಗಳನ್ನು ಗಮನಿಸಿದರೆ, ಭಾರತೀಯ ಆರ್ಥಿಕತೆಯು ಸಂತೋಷ ಪಡಬಹುದಾದ ಸಂಗತಿಗಳು ಹಲವಿವೆ. ಈ ವರ್ಷ ಮುಂಗಾರು ಮಳೆಯ ಪ್ರಮಾಣ ವಾಡಿಕೆಗಿಂತ ಹೆಚ್ಚಗಲಿದೆಯೆಂದು ಮಂಗಳವಾರ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಚಿಲ್ಲರೆ ಹಣದುಬ್ಬರವು 6 ತಿಂಗಳಲ್ಲಿ ಕನಿಷ್ಠಕ್ಕಿಳಿದಿದೆ. ಮೂರು ತಿಂಗಳ ಕುಸಿತದ ಬಳಿಕ ಇದೀಗ ಕೈಗಾರಿಕಾ ಉತ್ಪಾದನೆ ಹೆಚ್ಚಾಗಿದೆ.

ಸತತ ಎರಡು ವರ್ಷಗಳ ಬರಗಾಲದ ಬಳಿಕ, ಮುಂದಿನ ಮುಂಗಾರಿನಲ್ಲಿ ಸಾಮಾನ್ಯಕ್ಕಿಂತ ಹೆಚ್ಚು ಮಳೆಯಾಗಲಿದೆ. ಇದರ ಸಂಭವನೀಯತೆ ಶೇ.94 ಎಂದು ಭಾರತೀಯ ಹವಾಮಾನ ಇಲಾಖೆ ಹೇಳಿದೆ. ಮೂರು ತಿಂಗಳ ಕುಸಿತದ ಬಳಿಕ, ಭಾರತದ ಕೈಗಾರಿಕಾ ಉತ್ಪಾದನೆ ಫೆಬ್ರವರಿಗೆ ಶೇ.2ರಷ್ಟು ಹೆಚ್ಚಾಗಿದೆ. ವಾರ್ಷಿಕ ಚಿಲ್ಲರೆ ಹಣದುಬ್ಬರವು ಫೆಬ್ರವರಿಯಲ್ಲಿ ಶೇ.5.26 ಇದ್ದುದು ಮಾರ್ಚ್‌ಗೆ ಶೇ.4.83ಕ್ಕೆ ಇಳಿದಿದೆಯೆಂದು ಕೇಂದ್ರೀಯ ಅಂಕಿ-ಅಂಶ ಕಚೇರಿ ತಿಳಿಸಿದೆ. ತಿಂಗಳ ವಾರ್ಷಿಕ ಆಹಾರದುಬ್ಬರವೂ ಶೇ.5.30ದಿಂದ 5.21ಕ್ಕಿಳಿದಿದೆ. ಆದರೆ, ಉತ್ಪಾದನಾ ವಲಯದ ಒತ್ತಡ ಮುಂದುವರಿದಿದೆ. ಅದು ಫೆಬ್ರವರಿಯಲ್ಲಿ ಕೇವಲ ಶೇ.0.7ರಷ್ಟು ಬೆಳವಣಿಗೆ ಸಾಧಿಸಿದೆಯೆಂದು ಅದು ಹೇಳಿದೆ. ಗ್ರಾಮೀಣ ಭಾರತದಲ್ಲಿ ವಾರ್ಷಿಕ ಹಣದುಬ್ಬರವು ಶೇ.6.05ರಿಂದ 5.7ಕ್ಕಿಳಿದಿದೆ. ಅದೇ ವೇಳೆ, ನಗರ ವಾಸಿಗಳಿಗೆ ಮಾರ್ಚ್‌ವರೆಗಿನ 12 ತಿಂಗಳ ಬೆಲೆಯೇರಿಕೆ ಶೇ.3.95ರಷ್ಟಿತ್ತು. ಫೆಬ್ರವರಿಯ ಕೊನೆಗೆ ಅದು ಶೇ.4.30ರಷ್ಟಿತ್ತೆಂದು ಬಳಕೆದಾರರ ಬೆಲೆ ಸೂಚಿ ಮಾಹಿತಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News