×
Ad

ಪ್ರಭಾರ ರಾಯಭಾರಿಯಿಂದ ಪಾಕಿಸ್ತಾನದೊಂದಿಗೆ ಪ್ರಸ್ತಾಪ

Update: 2016-04-13 23:43 IST

ಹೊಸದಿಲ್ಲಿ, ಎ.13: ಪಾಕಿಸ್ತಾನದ ಕಾರಾಗೃಹದಲ್ಲಿ ಭಾರತೀಯನೊಬ್ಬನು ನಿಗೂಢವಾಗಿ ಸಾವನ್ನಪ್ಪಿರುವ ಸಂಬಂಧ ಪಾಕಿಸ್ತಾನದ ವಿದೇಶಾಂಗ ಕಚೇರಿಯ ಭೇಟಿಯನ್ನು ಕೋರುವಂತೆ ಇಸ್ಲಾಮಾಬಾದ್‌ನಲ್ಲಿರುವ ಭಾರತೀಯ ಪ್ರಭಾರ ರಾಯಭಾರಿಗೆ ಭಾರತ ಸರಕಾರ ಬುಧವಾರ ಸೂಚಿಸಿದೆ.
ಪಾಕಿಸ್ತಾನದಲ್ಲಿ ಸಂಭವಿಸಿದ್ದ ಸರಣಿ ಸ್ಫೋಟ ಪ್ರಕರಣವೊಂದಕ್ಕೆ ಸಂಬಂಧಿಸಿ 20ಕ್ಕೂ ಹೆಚ್ಚು ವರ್ಷಗಳಿಂದ ಲಾಹೋರ್ ಬಂದಿಖಾನೆಯಲ್ಲಿದ್ದ ಕೃಪಾಲ್ ಸಿಂಗ್ ಎಂಬಾತ ತನ್ನ ಜೈಲು ಕೊಠಡಿಯಲ್ಲಿ ಮೃತನಾಗಿದ್ದುದು ಪತ್ತೆಯಾಗಿತ್ತು.
 ಕೃಪಾಲ್‌ನ ಪಾರ್ಥಿವ ಶರೀರವನ್ನು ಆದಷ್ಟು ಬೇಗ ಹಸ್ತಾಂತರಿಸುವಂತೆಯೂ ಪಾಕಿಸ್ತಾನಿ ಅಧಿಕಾರಿಗಳನ್ನು ವಿನಂತಿಸುವಂತೆ ರಾಯಭಾರಿಗೆ ನಿರ್ದೇಶನ ನೀಡಲಾಗಿದೆ. ಕೃಪಾಲ್ ಸಿಂಗ್‌ನ ಬಗ್ಗೆ ಇಂದು ಮಧ್ಯಾಹ್ನಕ್ಕೆ ಮೊದಲೇ ಪಾಕ್ ವಿದೇಶಾಂಗ ಕಚೇರಿಯ ಸಾಧ್ಯವಿರುವಷ್ಟು ಉನ್ನತದರ್ಜೆಯ ಅಧಿಕಾರಿಯನ್ನು ಭೇಟಿಯಾಗಿ, ಆತನ ಮೃತದೇಹವನ್ನು ಆದಷ್ಟು ಬೇಗ ಭಾರತಕ್ಕೆ ಕಳುಹಿಸುವಂತೆ ರಾಯಭಾರಿಗೆ ತಿಳಿಸಲಾಗಿದೆ. ಅವರು, ಮರಣದ ಕಾರಣ ಕುರಿತು ಅಧಿಕೃತ ಮಾಹಿತಿ ಹಾಗೂ ಮರಣೋತ್ತರ ಪರೀಕ್ಷಾ ವರದಿ ಇತ್ಯಾದಿಗಳನ್ನು ಕೇಳಲಿದ್ದಾರೆಂದು ವಿದೇಶಾಂಗ ಸಚಿವಾಲಯದ ವಕ್ತಾರ ವಿವೇಕ್ ಸ್ವರೂಪ್ ತಿಳಿಸಿದ್ದಾರೆ. ಗುರದಾಸಪುರ ಮೂಲದ ಕೃಪಾಲ್ ಸಿಂಗ್ 1992ರಲ್ಲಿ ವಾಘಾ ಗಡಿಯನ್ನು ದಾಟಿದ ವೇಳೆ ಬಂಧಿಸಲ್ಪಟ್ಟಿದ್ದನು. ಬಳಿಕ ಆತನಿಗೆ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ ನಡೆದಿದ್ದ ಸರಣಿ ಬಾಂಬ್ ಸ್ಫೋಟ ಪ್ರಕರಣದಲ್ಲಿ ಮರಣ ದಂಡನೆ ವಿಧಿಸಲ್ಪಟ್ಟಿತ್ತು. ಆದರೆ, ಲಾಹೋರ್ ಹೈಕೋರ್ಟ್ ಕೃಪಾಲ್‌ನನ್ನು ಬಾಂಬ್‌ಸ್ಫೋಟ ಪ್ರಕರಣದಿಂದ ಖುಲಾಸೆಗೊಳಿಸಿತ್ತೆನ್ನಲಾಗಿದೆ. ಆದಾಗ್ಯೂ, ಅಜ್ಞಾತ ಕಾರಣಗಳಿಗಾಗಿ ಆತನ ಮರಣ ದಂಡನೆಯನ್ನು ರದ್ದುಗೊಳಿಸಲಾಗಿಲ್ಲವೆಂದು ಹೇಳಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News