ಮೋದಿ ಫ್ರೀಯಾಗಿ ಚಹಾ ಕುಡಿದರೆ ಹೊರತು ಚಾಯವಾಲರಿಗೆ ಏನೂ ಮಾಡಿಲ್ಲ: ಮಾಯಾವತಿ
ಲಕ್ನೊ ,ಎಪ್ರಿಲ್ 14: ಕಾಂಗ್ರೆಸ್, ಬಿಜೆಪಿ ಮತ್ತು ಇತರ ಪಾರ್ಟಿಗಳು ಬಾಬಾಸಾಹೇಬರನ್ನು ಗೌರವಿಸಲಿಕ್ಕಾಗಿ ಅಂಬೇಡ್ಕರ್ ಜಯಂತಿ ಮಾಡುತ್ತಿಲ್ಲ ಬದಲಾಗಿ ದಲಿತರ ವೋಟನ್ನು ಕಬಳಿಸಲಿಕ್ಕಾಗಿ ಮಾಡುತ್ತಿದ್ದಾರೆ ಎಂದು ಮಾಯಾವತಿ ಗುಡುಗಿದ್ದಾರೆ. ಎಂದು ವರದಿಗಳು ತಿಳಿಸಿವೆ. ಬಿಎಸ್ಪಿ ಸುಪ್ರೀಮೊ ಮಾಯಾವತಿ ಗುರುವಾರ ಅಂಬೇಡ್ಕರ್ ಜಯಂತಿಯ ಸಂದರ್ಭದಲ್ಲಿ ಡಾ. ಅಂಬೇಡ್ಕರ್ ಸಾಮಾಜಿಕ ಪರಿವರ್ತನ ಸ್ಥಳದಲ್ಲಿ ವಿಶೇಷ ಕಾರ್ಯಕ್ರಮದಲ್ಲಿ ಮಾತಾಡುತ್ತಿದ್ದರು. ರಾಜಕೀಯ ವಿರೋಧಿಗಳನ್ನು ತರಾಟೆಗೆತ್ತಿಕೊಂಡ ಮಾಯಾವತಿ ಕಾಂಗ್ರೆಸ್ ಬಿಜೆಪಿಯ ಅಂಬೇಡ್ಕರ್ ಜಯಂತಿಯನ್ನು ಗಾದೆಮಾತೊಂದನ್ನು ಉಪಮೆಯಾಗಿಟ್ಟು ಟೀಕಿಸಿದರು. ಬಿಎಸ್ಪಿ ಸುಪ್ರಿಮೊ ಕಾಂಗ್ರೆಸ್ ಮತ್ತು ಕೆಲವು ಪಕ್ಷಗಳು ಬಾಬಾ ಸಾಹೇಬರಿಗಾಗಿ ಈ ವರ್ಷ ಹೆಚ್ಚು ನಾಟಕ ಆಡತೊಡಗಿವೆ. ಬಾಬಾಸಾಹೇಬ್ ಯಾವಾಗ ಜೀವಂತವಿದ್ದರೋ ಮತ್ತು ಸಂಘರ್ಷ ಮಾಡುತ್ತಿದ್ದರೋ ಆಗ ಅವರ ವಿರುದ್ಧ ಬಾಬೂ ಜಗಜೀವನ್‌ರಾಂರನ್ನು ಬಳಕೆ ಮಾಡಲಾಗಿತ್ತು ಎಂದು ಮಾಯವತಿ ಆರೋಪಿಸಿದರು. ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ನಾಗಪುರದಲ್ಲಿ ಅಂಬೇಡ್ಕರ್‌ರಿಗೆ ರೋಹಿತ್ ವೇಮುಲಾರನ್ನು ಹೋಲಿಸಿದರು ಇದು ಅವರಿಗಿರುವ ಕಡಿಮೆ ಜ್ಞಾನವನ್ನು ತೋರಿಸುತ್ತಿದೆ ಎಂದು ಹೇಳಿದರು. ರೋಹಿತ್ ವೇಮುಲಾರನ್ನು ನೆಲ್ಸನ್ ಮಂಡೇಲಾ ಅಥವಾ ಕಾನ್ಶಿರಾಂರಿಗೆ ಹೋಲಿಸಬೇಕಾಗಿತ್ತು ಎಂದ ಅವರು ಉತ್ತರ ಪ್ರದೇಶ ಬಿಜೆಪಿಯ ಹೊಸ ಅಧ್ಯಕ್ಷ ಕೇಶವ ಮೌರ್ಯರಿಗೆ ಅಪರಾಧಿ ಹಿನ್ನೆಲೆಯಿದೆ ಎಂದು ಕಿಡಿಕಾರಿದರು. ಅವರು ಹಿಂದುಳಿದ ವರ್ಗದವರೇನೋ ನಿಜ ಆದರೆ ಅವರು ಬಿಜೆಪಿ ಆರೆಸ್ಸೆಸ್‌ನ ಜೀತದಾಳುವಿನ ರೀತಿಯಿದ್ದಾರೆ. ಆದ್ದರಿಂದ ಅವರ ಒಬಿಸಿ ಕಾರ್ಡ್‌ನ್ನು ಪ್ರಯೋಗಿಸಲು ಹೊರಟಿದೆ ಎಂದರು.
ಪ್ರಧಾನಿ ಮೋದಿಯವರ ಮೇಲೆ ಮಾತಿನ ಪ್ರಹಾರ ಹರಿಸಿದ ಮಾಯಾವತಿ, ಮೋದಿ ತನ್ನನ್ನು ಹಿಂದುಳಿದವ ಎನ್ನುತ್ತಾರೆ ಅವರು ಈವರೆಗೂ ಒಬಿಸಿ ಹಿತಕ್ಕೆ ಕೆಲಸ ಮಾಡಿಲ್ಲ. ಚಾಯವಾಲ ಎನ್ನುವ ಅವರು ಫ್ರೀಯಾಗಿ ಚಹಾ ಕುಡಿದರೆ ಹೊರತು ಚಾಯವಾಲರಿಗೂ ಏನೂ ಮಾಡಿಲ್ಲ ಎಂದು ಮಾಯಾವತಿ ಝಾಡಿಸಿದರು. ಕಾಂಗ್ರೆಸ್‌ನ ರಾಷ್ಟ್ರೀಯ ಉಪಾಧ್ಯಕ್ಷ ಈಗ ಅಂಬೇಡ್ಕರ್ ಜಯಂತಿ ಮಾಡುತ್ತಿದ್ದಾರೆ ಆದರೆ ಅವರು ಅಂಬೇಡ್ಕರ್‌ರ ಘೋರ ವಿರೋಧಿಯಾಗಿದ್ದಾರೆ. 2004ರಲ್ಲಿ ಕೇಂದ್ರದಲ್ಲಿದ್ದ ಕಾಂಗ್ರೆಸ್ ಸರಕಾರ ತಾಜ್ ಪ್ರಕರಣದಲದಲ್ಲಿ ತನ್ನನ್ನು ಸಿಲುಕಿಸಿ ಹಲವು ವರ್ಷಗಳವರೆಗೂ ತನ್ನನ್ನು ಕಾಡಿತ್ತು ಎಂದು ಮಾಯಾವತಿ ಹೇಳಿದರು. ನ್ಯಾಯಕ್ಕಾಗಿ ತಾನು ಸುಪ್ರೀಂ ಕೋರ್ಟ್ ಹೋಗಬೇಕಾಯಿತು. ದಲಿತ ವ್ಯಕ್ತಿಯಿಂದಲೇ ನನ್ನ ವಿರುದ್ಧ ಅರ್ಜಿ ಸಲ್ಲಿಸಲಾಯಿತು.ವಿರೋಧಿ ಪಕ್ಷಗಳು ನಮ್ಮನ್ನು ಯಾವುದೇ ರೀತಿಯ ಕೋರ್ಟು ಕಚೇರಿ ಪ್ರಕರಣದಲ್ಲಿ ಸಿಲುಕಿಸಬಹುದು ಅದಕ್ಕಾಗಿ ನಾವು ಜಿಗುಪ್ಸೆ ಪುವ ಅಗತ್ಯವಿಲ್ಲ ಎಂದು ಹೇಳಿದರು.