ಹಂದ್ವಾರ ಗುಂಡುಹಾರಾಟ: ವಿದ್ಯಾರ್ಥಿನಿ ಮತ್ತು ಆಕೆಯ ತಂದೆ ಪೊಲೀಸ್ ಕಸ್ಟಡಿಯಲ್ಲಿ!
ಶ್ರೀನಗರ, ಎಪ್ರಿಲ್.15: ಹಂದ್ವಾರದಲ್ಲಿ ಸೈನಿಕರಿಂದ ಕಿರುಕುಳಕ್ಕೊಳಗಾಗಿದ್ದಾಳೆಂದು ಆರೋಪಕ್ಕೆ ಗುರಿಯಾದ ಶಾಲಾ ವಿದ್ಯಾರ್ಥಿನಿ ಮೂರು ದಿವಸಗಳಿಂದ ಪೊಲೀಸ್ ಕಸ್ಟಡಿಯಲ್ಲಿರುವುದಾಗಿ ವರದಿಯಾಗಿದೆ. ಕಳೆದ ದಿವಸ ವಿದ್ಯಾರ್ಥಿನಿಯ ತಂದೆಯನ್ನೂ ಪೊಲೀಸರು ಕಸ್ಟಡಿಗೆ ಪಡೆದಿದ್ದರು. ಬಾಲಕಿಯನ್ನು ಕಸ್ಟಡಿಯಿಂದ ಬಿಡುಗಡೆಗೊಳಿಸಿ ಮನೆಗೆ ಕಳುಹಿಸಲಿಕ್ಕಾಗಿ ಪೊಲೀಸ್ ಠಾಣೆಗೆ ಬರ ಹೇಳಿದ್ದರಿಂದ ಅವರುಪೊಲೀಸ್ ಠಾಣೆಗೆ ಬಂದಿದ್ದರು. ಆಗ ಪೊಲೀಸರು ಅವರನ್ನು ಕಸ್ಟಡಿಗೆ ಪಡೆದರೆಂದು ವರದಿಗಳು ತಿಳಿಸಿವೆ.
ಅದೇ ವೇಳೆ ಬಾಲಕಿ ಮತ್ತು ತಂದೆ ಸುರಕ್ಷಿತ ಕಸ್ಟಡಿಯಲ್ಲಿದ್ದಾರೆಂದು ಪೊಲೀಸ್ ಸ್ಪಷ್ಟಪಡಿಸಿದೆ. ಬಾಲಕಿ ಕುಟುಂಬ ಪೊಲೀಸ್ ರಕ್ಷಣೆ ಕೋರಿದ್ದರು ಎಂದು ಹಿರಿಯ ಪೊಲೀಸ್ ಅಧಿಕಾರಿ ಉತ್ತಮ್‌ಚಂದ್ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಆದರೆ ಪೊಲೀಸರ ಸ್ಪಷ್ಟೀಕರಣವನ್ನು ಪ್ರಜಾಹಕ್ಕು ಸಂಘಟನೆಗಳು ವಿರೋಧಿಸಿ ರಂಗಪ್ರವೇಶಿಸಿವೆ. ಬಾಲಕಿಗೆ ಅವಳ ಮನೆಯಲ್ಲಿ ರಕ್ಷಣೆ ನೀಡಬೇಕು ಪೊಲೀಸ್ ಸ್ಟೇಶನ್‌ನಲ್ಲಲ್ಲ ಎಂದು ಜೆ ಆಂಡ್ ಕೆ ಸಿವಿಲ್ ಸೊಸೈಟಿ ಪ್ರೊಗ್ರಾಂ ಕೋಆರ್ಡಿನೇಟರ್ ಕುರ್ರಂ ಪರ್ವೇರ್ ಹೇಳಿದ್ದಾರೆ.
ತನಗೆ ಸೈನಿಕರು ಕಿರುಕುಳ ನೀಡಿಲ್ಲ ಎಂದು ವೀಡಿಯೊವನ್ನು ಪೊಲೀಸರು ಹೊರಬಿಟ್ಟಿದ್ದರು. ಪೊಲೀಸ್ ಸ್ಟೇಶನ್‌ನಲ್ಲಿ ಅದನ್ನು ರೆಕಾರ್ಡಿಂಗ್ ಮಾಡಲಾಗಿತ್ತು. ಬಾಲಕಿಯನ್ನು ಮಾತಾಡುವಂತೆ ಒತ್ತಾಯಿಸುವ ಪೊಲೀಸರ ಧ್ವನಿಯೂ ಅದರಲ್ಲಿದೆ ಎಂದು ವರದಿಯಾಗಿದೆ.
ವಿದ್ಯಾರ್ಥಿನಿಗೆ ಕಿರುಕುಳ ಕೊಟ್ಟವರ ವಿರುದ್ಧ ಕ್ರಮಕೈಗೊಳ್ಳಬೇಕೆಂದು ಅಗ್ರಹಿಸಿ ಊರವರು ನಡೆಸಿದ ಪ್ರತಿಭಟನೆಯ ವಿರುದ್ಧ ಗೋಲಿಬಾರ್‌ನಲ್ಲಿಮೂವರು ಮೃತರಾಗಿದ್ದರು. ಆನಂತರ ಕಾಶ್ಮೀರದಲ್ಲಿ ಪ್ರಕ್ಷುಬ್ಧ ಪರಿಸ್ಥಿತಿ ನಿರ್ಮಾಣವಾಗಿತ್ತು. ವ್ಯಾಪಕ ಪ್ರತಿಭಟನೆ ತಲೆಎತ್ತಿತ್ತು. ಮುಹಮ್ಮದ್ ಇಕ್ಬಾಲ್,ಯುವಕ್ರಿಕೆಟ್ ತಾರೆ ನಈಂ ಭಟ್, ಮನೆಯ ಬಳಿಕೆಲಸ ನಿರತರಾಗಿದ್ದ ರಾಜಾ ಬೇಗಂ ಎಂಬವರು ಸೈನ್ಯದ ಗೋಲಿಬಾರ್‌ನಲ್ಲಿ ಮೃತರಾಗಿದ್ದರು.