ಜಪಾನ್ ಭೂಕಂಪ: ಕನಿಷ್ಠ 8 ಸಾವು
ಮಶಿಕಿ (ಜಪಾನ್), ಎ. 15: ನೈರುತ್ಯ ಜಪಾನ್‌ನ ಕ್ಯುಶು ದ್ವೀಪದಲ್ಲಿ ಗುರುವಾರ ರಾತ್ರಿ ಸಂಭವಿಸಿದ ಪ್ರಬಲ ಭೂಕಂಪದಲ್ಲಿ ಕನಿಷ್ಠ ಒಂಬತ್ತು ಮಂದಿ ಮೃತಪಟ್ಟಿದ್ದಾರೆ ಹಾಗೂ 860 ಮಂದಿ ಗಾಯಗೊಂಡಿದ್ದಾರೆ. ಈ ಪೈಕಿ ಕನಿಷ್ಠ 53 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.
ರಕ್ಷಣಾ ಕೆಲಸಗಾರರು ಶುಕ್ರವಾರ ಕುಸಿದ ಕಟ್ಟಡಗಳ ಅಡಿಯಲ್ಲಿ ಶೋಧ ಕಾರ್ಯಾಚರಣೆ ನಡೆಸಿದ್ದಾರೆ.
ರಿಕ್ಟರ್ ಮಾಪಕದಲ್ಲಿ 6.5ರ ತೀವ್ರತೆಯ ಭೂಕಂಪ ಸಂಭವಿಸಿದ ಬಳಿಕ ಸಾವಿರಾರು ಮಂದಿ ತಮ್ಮ ಮನೆಗಳಿಂದ ಹೊರಗೋಡಿದರು. ರಸ್ತೆಗಳಲ್ಲಿ ಮುರಿದ ಹಾಗೂ ತಿರುಚಿದ ಕಾಂಕ್ರೀಟ್ ರಾಶಿ ಕಂಡುಬಂದಿತು.
ಭೂಕಂಪದಿಂದಾಗಿ ಮನೆಗಳು ಕುಸಿದಿವೆ ಹಾಗೂ ಕಾರ್ಖಾನೆಗಳು ಕೆಲಸವನ್ನು ಸ್ಥಗಿತಗೊಳಿಸಿವೆ. ಒಂದು ಅಧಿಕ ವೇಗದ ರೈಲು ಹಳಿತಪ್ಪಿದೆ.
ಗುರುವಾರ ರಾತ್ರಿ ಸುಮಾರು 9.26ಕ್ಕೆ ಭೂಕಂಪ ಸಂಭವಿಸಿದ ಬಳಿಕ ಡಝನ್‌ಗಟ್ಟಳೆ ಪಶ್ಚಾತ್ ಕಂಪನಗಳು ಸಂಭವಿಸಿದವು. ಕುಸಿದ ಕಟ್ಟಡಗಳ ಅಡಿಯಲ್ಲಿ ಶೋಧ ಕಾರ್ಯಾಚರಣೆ ನಡೆಯುತ್ತಿರುವುದರಿಂದ ಸಾವಿನ ಸಂಖ್ಯೆ ಇನ್ನೂ ಏರಬಹುದು ಎಂಬ ಭೀತಿಯನ್ನು ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ.
ಈ ಪ್ರದೇಶದಲ್ಲಿರುವ ಪರಮಾಣು ಸ್ಥಾವರಗಳು ಸುರಕ್ಷಿತವಾಗಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ.
8 ತಿಂಗಳ ಮಗುವಿನ ರಕ್ಷಣೆ
ರಕ್ಷಣಾ ತಂಡಗಳ ಸದಸ್ಯರು ಎಂಟು ತಿಂಗಳ ಹೆಣ್ಣು ಮಗುವೊಂದನ್ನು ಕುಮಮಾಟೊ ರಾಜ್ಯದ ಮಶಿಕಿ ಎಂಬ ಪಟ್ಟಣದಲ್ಲಿ ಕಟ್ಟಡವೊಂದರ ಅವಶೇಷಗಳ ಅಡಿಯಿಂದ ನಾಟಕೀಯವಾಗಿ ರಕ್ಷಿಸಿದ್ದಾರೆ.
ಭೂಕಂಪ ಸಂಭವಿಸುವಾಗ ಮಗುವಿನ ತಾಯಿ, ಅಜ್ಜ, ಅಜ್ಜಿ ಮತ್ತು ಅಣ್ಣ ಮನೆಯ ಅಡುಗೆ ಕೋಣೆ ಮತ್ತು ಹಾಲ್‌ನಲ್ಲಿದ್ದರು. ಮಗು ಮಹಡಿಯಲ್ಲಿ ಮಲಗಿತ್ತು. ಮನೆ ಕುಸಿದಾಗ ಉಳಿದವರೆಲ್ಲರೂ ತಪ್ಪಿಸಿಕೊಂಡಿದ್ದಾರೆ. ಆದರೆ, ಮಗು ಅವಶೇಷಗಳ ಅಡಿಯಲ್ಲಿ ಸಿಕ್ಕಿಹಾಕಿಕೊಂಡಿತ್ತು.
50 ಸದಸ್ಯರ ರಕ್ಷಣಾ ತಂಡ ಮಗುವನ್ನು ಗುರುವಾರ ಮುಂಜಾನೆ ಸುರಕ್ಷಿತವಾಗಿ ಅವಶೇಷಗಳಡಿಯಿಂದ ಮೇಲಕ್ಕೆತ್ತಿತು.