ಕಾಶ್ಮೀರದಲ್ಲಿ ಸೇನೆಯ ಗುಂಡಿಗೆ ಓರ್ವ ಬಲಿ,ಮೂವರಿಗೆ ಗಾಯ
Update: 2016-04-15 21:14 IST
ಕುಪ್ವಾರಾ,ಎ.15: ಈ ವಾರದ ಪೂರ್ವಾರ್ಧದಲ್ಲಿ ನಾಲ್ವರು ನಾಗರಿಕರ ಸಾವನ್ನು ವಿರೋಧಿಸಿ ಶುಕ್ರವಾರ ಕುಪ್ವಾರಾ ಜಿಲ್ಲೆಯಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಜನರ ಮೇಲೆ ಸೇನೆಯು ಗುಂಡು ಹಾರಾಟ ನಡೆಸಿದ್ದರಿಂದ ಓರ್ವ ಯುವಕ ಮೃತಪಟ್ಟಿದ್ದು,ಇತರ ಮೂವರು ಗಾಯಗೊಂಡಿದ್ದಾರೆ.
ಅವುರಾ ಗ್ರಾಮದ ನಿವಾಸಿ ಆರಿಫ್(19) ಮೃತ ಯುವಕ. ನತುನ್ಸಾ ಗ್ರಾಮದಲ್ಲಿ ಸೇನಾ ಶಿಬಿರದ ಮೇಲೆ ಕಲ್ಲು ತೂರಾಟದಲ್ಲಿ ತೊಡಗಿದ್ದ ಜನರ ಗುಂಪಿನ ಮೇಲೆ ಯೋಧರು ಗುಂಡುಗಳನ್ನು ಹಾರಿಸಿದ್ದು, ತೀವ್ರವಾಗಿ ಗಾಯಗೊಂಡಿದ್ದ ಆರಿಫ್ ಜಿಲ್ಲಾಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾನೆ.
ಮಂಗಳವಾರ ಹಂದ್ವಾರಾದಲ್ಲಿ ಯುವತಿಯೋರ್ವಳಿಗೆ ಯೋಧರು ಲೈಂಗಿಕ ಕಿರುಕುಳ ನೀಡಿದ್ದಾರೆಂದು ಆರೋಪಿಸಿ ಪ್ರತಿಭಟನೆ ವೇಳೆ ಗುಂಡೇಟಿನಿಂದ ಇಬ್ಬರು ಸಾವನ್ನಪ್ಪಿದ್ದರು. ಗಾಯಾಳು ಮಹಿಳೆಯೋರ್ವಳು ಬುಧವಾರ ಸಾವನ್ನಪ್ಪಿದ್ದರೆ,ಅದೇ ದಿನ ಯುವ ಕ್ರಿಕೆಟಿಗನೋರ್ವ ಸೇನೆಯು ಸಿಡಿಸಿದ್ದ ಅಶ್ರುವಾಯು ಶೆಲ್ ಬಡಿದು ಮೃತಪಟ್ಟಿದ್ದ.