×
Ad

ನ್ಯಾಯಾಲಯಗಳಲ್ಲಿ ಮೂರು ಕೋಟಿ ಪ್ರಕರಣಗಳು ಬಾಕಿ:ಸದಾನಂದ ಗೌಡ ಕಳವಳ

Update: 2016-04-16 19:50 IST

ಭೋಪಾಲ,ಎ.16: ದೇಶದ ನ್ಯಾಯಾಲಯಗಳಲ್ಲಿ ಸುಮಾರು ಮೂರು ಕೋಟಿ ಪ್ರಕರಣಗಳು ಬಾಕಿಯಿರುವುದಕ್ಕೆ ಕೇಂದ್ರ ಕಾನೂನು ಸಚಿವ ಡಿ.ವಿ.ಸದಾನಂದ ಗೌಡ ಅವರು ಶನಿವಾರ ಇಲ್ಲಿ ಕಳವಳ ವ್ಯಕ್ತಪಡಿಸಿದರು.

ಇಲ್ಲಿಯ ರಾಷ್ಟ್ರೀಯ ನ್ಯಾಯಾಂಗ ಅಕಾಡಮಿಯಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಿದ್ದ ಅವರು, ಕಳೆದ ಮೂರು ವರ್ಷಗಳಲ್ಲಿ ನ್ಯಾಯಾಲಯಗಳಲ್ಲಿ ಬಾಕಿ ಪ್ರಕರಣಗಳ ನಿರಂತರ ಹೆಚ್ಚಳಕ್ಕೆ ಕಡಿವಾಣ ಹಾಕಲಾಗಿದೆಯಾದರೂ ಮೂರು ಕೋಟಿಗೂ ಅಧಿಕ ಪ್ರಕರಣಗಳು ಇನ್ನೂ ಬಾಕಿಯಿರುವುದು ಚಿಂತೆಯ ವಿಷಯವಾಗಿದೆ ಎಂದರು.

ಶಾಸನ ಪುಸ್ತಕದಲ್ಲಿಯ ನೂರಾರು ಅಪ್ರಚಲಿತ ಕಾನೂನುಗಳನ್ನು ತೆಗೆದು ಹಾಕಲು ಸರಕಾರವು ಕ್ರಮಗಳನ್ನು ಕೈಗೊಂಡಿದೆ ಎಂದು ಅವರು ತಿಳಿಸಿದರು. ಇದರ ಜೊತೆಗೆ ಪಂಚಾಯತಿ ಮತ್ತು ಸಂಧಾನ ಕಾಯ್ದೆಗೆ ತಿದ್ದುಪಡಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ವಾಣಿಜ್ಯ ವಿವಾದಗಳನ್ನು ತ್ವರಿತವಾಗಿ ಇತ್ಯರ್ಥಗೊಳಿಸುವ ನಿಟ್ಟಿನಲ್ಲಿ ವಿಶೇಷ ವಾಣಿಜ್ಯ ನ್ಯಾಯಾಲಯಗಳ ಸ್ಥಾಪನೆಗೆ ಶಾಸನವನ್ನು ನಾವು ಅಂಗೀಕರಿಸಿದ್ದೇವೆ. ಈ ಎಲ್ಲ ಕ್ರಮಗಳು ಭಾರತವನ್ನು ವಿದೇಶಿ ಹೂಡಿಕೆಗಳಿಗೆ ಆದರ್ಶ ತಾಣವನ್ನಾಗಿಸುವಲ್ಲಿ ಸರಕಾರದ ಬದ್ಧತೆಯನ್ನು ಪ್ರತಿಬಿಂಬಿಸುತ್ತವೆ ಎಂದರು.

ಆದರೆ ಶ್ರೀಸಾಮಾನ್ಯರಿಗೆ ನ್ಯಾಯ ದೊರೆಯದಿದ್ದರೆ ಈ ಕ್ರಮಗಳು ಇದ್ದೂ ಇಲ್ಲದಂತೆ ಎಂದ ಅವರು, ಸಮಾಜದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಹಾಗೂ ಶಾಂತಿಯನ್ನು ಕಾಯ್ದುಕೊಳ್ಳಲು ನ್ಯಾಯದಾನವು ಸಹ ಮುಖ್ಯವಾಗಿದೆ. ನಿಮಗೆ ಶಾಂತಿಗಾಗಿ ಶ್ರಮಿಸಬೇಕೆಂದಿದ್ದರೆ ನ್ಯಾಯಕ್ಕಾಗಿ ಶ್ರಮಿಸಿ ಎಂದು ಸಾಮಾನ್ಯವಾಗಿ ಹೇಳಲಾಗುತ್ತದೆ. ನಾಗರಿಕತೆಯ ಬುನಾದಿಯು ನ್ಯಾಯಪೂರ್ಣ ಸಮಾಜದ ಮೇಲೆ ನಿಂತಿದೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News