ಫ್ಯಾನ್: ವಿಭಿನ್ನ ಕಥೆಗೆ ಶಾರುಕ್ ಅಭಿನಯದ ಮೆರುಗು

Update: 2016-04-17 07:39 GMT

ಅಭಿಮಾನಿಗಳು ಇಲ್ಲದಿದ್ದರೆ ಸೂಪರ್‌ಸ್ಟಾರ್‌ಗಳಿಗೆ ಚಿತ್ರರಂಗದಲ್ಲಿ ಉಳಿಗಾಲವಿರಲಾರದು ಅಲ್ಲವೇ? ಅದೇನೇ ಇರಲಿ, ಸಾಮಾನ್ಯ ಅಭಿಮಾನಿಗಳು ತಮ್ಮ ನೆಚ್ಚಿನ ತಾರೆಯರನ್ನು ಕಾಣಲು ತವಕಿಸುವುದು ಸಹಜ. ಆದರೆ, ಸ್ವತಃ ಸೂಪರ್‌ಸ್ಟಾರೊಬ್ಬನು ಹತಾಶೆಯಿಂದ ತನ್ನ ಅಭಿಮಾನಿಯ ಹಿಂದೆಯೇ ಓಡಬೇಕಾದ ಪರಿಸ್ಥಿತಿ ಬಂದರೆ ಏನಾದೀತು? ಶಾರುಕ್ ಅಭಿನಯದ ಫ್ಯಾನ್ ಚಿತ್ರದ ಕಥೆಯ ತಿರುಳು ಇದಾಗಿದೆ.

ಒಂದಂತೂ ನಿಜ. ಶಾರುಕ್‌ನಷ್ಟು ವಿಲಕ್ಷಣ ಸ್ವಭಾವದ ಪಾತ್ರಗಳನ್ನು ಅತ್ಯಂತ ಸಹಜವಾಗಿ ನಿರ್ವಹಿಸಲು ಬಾಲಿವುಡ್‌ನಲ್ಲಿ ಇನ್ನಾರಿಗೂ ಸಾಧ್ಯವಿಲ್ಲ.ಇದನ್ನು ಶಾರುಕ್, ಫ್ಯಾನ್‌ನಲ್ಲಿ ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ. 1990ರ ದಶಕದಲ್ಲಿ ಶಾರುಕ್ ಬಾಲಿವುಡ್ ಚಿತ್ರರಂಗದಲ್ಲಿ ಹೊಸ ಕ್ರೇಜ್ ಸೃಷ್ಟಿಸಿದ್ದ ದಿನಗಳನ್ನು ಈ ಚಿತ್ರ ನೆನಪಿಸುತ್ತದೆ. ಢರ್, ಬಾಜಿಗರ್‌ನಂತಹ ನೆಗೆಟಿವ್ ಹೀರೋ ಪಾತ್ರಗಳಲ್ಲಿ ಮಿಂಚಿದ್ದ ಶಾರುಕ್, ಈಗ ಫ್ಯಾನ್‌ನಲ್ಲಿಯೂ ಆ ಅನುಭವವನ್ನು ನೀಡಿದ್ದಾರೆ.

ಇನ್ನು ನೇರವಾಗಿ ಚಿತ್ರದ ಕಥೆಗೆ ಬರೋಣ. ದಿಲ್ಲಿಯಲ್ಲಿ ಪುಟ್ಟ ಸೈಬರ್‌ಕೆಫೆ ಯೊಂದರ ಮಾಲಕನಾದ ಗೌರವ್ ಚಂದ್‌ನಾ (ಶಾರುಕ್)ಗೆ, ಬಾಲಿವುಡ್ ಸೂಪರ್‌ಸ್ಟಾರ್ ಆರ್ಯನ್ ಖನ್ನಾ (ಈ ಪಾತ್ರದಲ್ಲೂ ಶಾರುಕ್)ನ ಕಟ್ಟಾ ಅಭಿಮಾನಿ. ಕೂತಲ್ಲಿ, ನಿಂತಲ್ಲಿ ಆತ ತನ್ನ ಮೆಚ್ಚಿನ ನಟನ ಬಗ್ಗೆಯೇ ಯೋಚಿಸುತ್ತಿರುತ್ತಾನೆ. ಆತನ ವೇಷ ಭೂಷಣ, ಹಾವಭಾವಗಳನ್ನು ಅನುಕರಿಸುತ್ತಾನೆ. ತನ್ನ ನೆಚ್ಚಿನ ತಾರೆಯ ಬಗ್ಗೆ ಯಾರೂ ಏನಾದರೂ ಆಡಿದರೂ ಸಹ ಆತನ ಸಿಟ್ಟು ನೆತ್ತಿಗೇರುತ್ತದೆ. ಜೀವನದಲ್ಲಿ ಒಂದಲ್ಲ ಒಂದು ಸಲ ಆರ್ಯನ್ ಖನ್ನಾನನ್ನು ಭೇಟಿಯಾಗಬೇಕೆಂಬುದೇ ಆತನಿಗಿರುವ ಏಕೈಕ ಕನಸಾಗಿರುತ್ತದೆ. ಅದನ್ನು ನನಸುಗೊಳಿಸಲು, ಆತ ಅಭಿನಯ ಸ್ಪರ್ಧೆಯೊಂದರಲ್ಲಿ ಪಾಲ್ಗೊಂಡು 20 ಸಾವಿರ ರೂ.ಗೆಲ್ಲುತ್ತಾನೆ. ಈ ಹಣದೊಂದಿಗೆ ಆರ್ಯನ್‌ನನ್ನು ಕಾಣಲೆಂದೇ ಮಾಯಾನಗರಿ ಮುಂಬೈ ರೈಲು ಹತ್ತುತ್ತಾನೆ. ಆರ್ಯನ್ ತನ್ನ ಸಂಕಷ್ಟದ ದಿನಗಳಲ್ಲಿ ಹೇಗೆ ಮುಂಬೈ ತಲುಪಿದ್ದನೋ, ಅದೇ ರೀತಿ ಈತ ಕೂಡಾ ಟಿಕೆಟಿಲ್ಲದೆ ಪ್ರಯಾಣಿಸುತ್ತಾನೆ. ಆರ್ಯನ್ ತನ್ನ ಚಿತ್ರಬದುಕಿನ ಆರಂಭದ ದಿನಗಳಲ್ಲಿ ಉಳಿದುಕೊಂಡಿದ್ದ ಹೊಟೇಲ್‌ನಲ್ಲಿಯೇ ರೂಂ ಪಡೆದುಕೊಳ್ಳುತ್ತಾನೆ. ಆದರೆ, ವಿಲಕ್ಷಣವಾದ ಸನ್ನಿವೇಶವೊಂದರಲ್ಲಿ ಗೌರವ್, ಆರ್ಯನ್‌ನ ಪ್ರತಿಸ್ಪರ್ಧಿ ನಟ ಸಿದ್‌ಕಪೂರ್‌ಗೆ ಥಳಿಸುತ್ತಾನೆ. ಈ ದೃಶ್ಯವು ಫೇಸ್‌ಬುಕ್‌ನಲ್ಲಿ ಪ್ರಸಾರವಾಗುತ್ತದೆ. ಘಟನೆಯ ಬಗ್ಗೆ ಮಾಧ್ಯಮಗಳು ಹಾಗೂ ಅಭಿಮಾನಿಗಳ ನಡುವೆ ತೀವ್ರ ಚರ್ಚೆಯಾಗತೊಡಗುತ್ತದೆ. ಆರ್ಯನ್ ಖನ್ನಾನೇ ಈ ಘಟನೆಗೆ ಮೂಲ ಕಾರಣವೆಂಬಂತೆ ವದಂತಿಗಳು ಹರಿದಾಡುತ್ತವೆ. ಅಂತಿಮವಾಗಿ ಆರ್ಯನ್ ಖನ್ನಾಗೂ ಈ ವಿಷಯ ತಿಳಿಯುತ್ತದೆ. ಮುಜುಗರಗೊಂಡ ಆತ ಗೌರವ್‌ ಬಂಧನಕ್ಕೊಳಗಾಗುವಂತೆ ಮಾಡುತ್ತಾನೆ. ಈ ಸಂದರ್ಭದಲ್ಲಿ ತನ್ನೊಂದಿಗೆ ಐದು ನಿಮಿಷವಾದರೂ ಮಾತನಾಡುವಂತೆ ಗೌರವ್ ಪರಿಪರಿಯಾಗಿ ಆರ್ಯನ್‌ನಲ್ಲಿ ಗೋಗರೆಯುತ್ತಾನೆ. ಆಗ ಆರ್ಯನ್ ನಿರ್ದಾಕ್ಷಿಣ್ಯವಾಗಿ ‘‘ಮೈನೆ ತುಜ್ ಕೋ ಪಾಂಚ್ ಸೆಕೆಂಡ್ ಭೀ ಕ್ಯೂ ದೂ’’ ಎಂದು ನಿರ್ದಯವಾಗಿ ಪ್ರಶ್ನಿಸುತ್ತಾನೆ. ಆಗ ಗೌರವ ರೊಚ್ಚಿಗೆದ್ದು, ಜ್ವಾಲಾಮುಖಿ ಯಾಗುತ್ತಾನೆ. ಒಂದಲ್ಲ ಒಂದು ದಿನ ಆರ್ಯನ್ ನನ್ನ ಬೆನ್ನ ಹಿಂದೆ ಬೀಳುವಂತೆ ಮಾಡುತ್ತೇನೆ ಎಂದು ಆತ ಶಪಥ ಮಾಡುತ್ತಾನೆ. ‘ಅಸಲಿ ಡ್ರಾಮಾ ಅಬ್ ತೊ ಶುರು ಹುವಾ ಹೈ’ ಎಂದು ಆತ ಸವಾಲೊಡ್ಡುತ್ತಾನೆ. ಇದರೊಂದಿಗೆ ಚಿತ್ರದ ಕಥೆಯು ವಿಚಿತ್ರ ತಿರುವನ್ನು ಪಡೆಯುತ್ತದೆ.

 ಇಲ್ಲಿಂದ ಶುರುವಾಗುತ್ತದೆ ಸೂಪರ್‌ಸ್ಟಾರ್ ನಡುವೆ ಸಂಘರ್ಷ ಆರಂಭಗೊಳ್ಳುತ್ತದೆ. ಈ ಸಂಘರ್ಷದಲ್ಲಿ ಯಾರು ಗೆಲ್ಲುತ್ತಾರೆ ಎಂಬುದೇ ಫ್ಯಾನ್‌ನ ಮುಂದಿನ ಕಹಾನಿ...

ಸೂಪರ್‌ಸ್ಟಾರ್ ಆರ್ಯನ್ ಖನ್ನಾ ಹಾಗೂ ಆತನ ಫ್ಯಾನ್ ಗೌರವ್, ಹೀಗೆ ಎರಡೂ ಪಾತ್ರಗಳನ್ನು ಶಾರುಕ್ ಅತ್ಯಂತ ಅದ್ಭುತವಾಗಿ ನಿರ್ವಹಿಸಿದ್ದಾರೆ. ಇಡೀ ಚಿತ್ರದಲ್ಲಿ ಶಾರುಕ್ ತಾನೇ ತಾನಾಗಿ ವಿಜೃಂಭಿಸಿದ್ದಾರೆ.

ಸಂಪೂರ್ಣವಾಗಿ ವಿಭಿನ್ನ ಕಥಾವಸ್ತುವನ್ನು ಹೊಂದಿರುವ ಈ ಚಿತ್ರದಲ್ಲಿ ರೋಮಾನ್ಸ್ ದೃಶ್ಯಗಳಿಗೆ ಜಾಗವಿಲ್ಲ. ಅದೇ ರೀತಿ ಚಿತ್ರದ ನಿರ್ದೇಶನ ಹಾಗೂ ಚಿತ್ರಕಥೆ ಕೂಡಾ ಅತ್ಯಂತ ಹೊಸತಾಗಿದ್ದು, ಬಾಲಿವುಡ್‌ನ ಇತರ ಯಾವುದೇ ಚಿತ್ರಗಳ ಜೊತೆಗೂ ಹೋಲಿಕೆ ಸಾಧ್ಯವಿಲ್ಲ. ಇದಕ್ಕಾಗಿಯಾದರೂ ಫ್ಯಾನ್‌ಗೆ ಹ್ಯಾಟ್ಸ್ ಅಪ್ ಹೇಳಲೇಬೇಕು.

ನಿರ್ದೇಶಕ ಮನೀಶ್ ಶರ್ಮಾ ವಿಭಿನ್ನವಾದ ಕಥಾವಸ್ತುವನ್ನು ಬೆಳ್ಳಿತೆರೆಯಲ್ಲಿ ಅತ್ಯಂತ ನಾಜೂಕಾಗಿ ಮೂಡಿಸಿದ್ದಾರೆ. ಅವರ ಸೃಷ್ಟಿಯಲ್ಲಿ ಲೋಪದೋಷಗಳನ್ನು ಹುಡುಕುವುದು ಅಷ್ಟು ಸುಲಭವಲ್ಲ. ಚಿತ್ರದ ಆರಂಭದಿಂದಲೇ ಪ್ರೇಕ್ಷಕರನ್ನು ಸೆರೆಹಿಡಿಯುವ ಫ್ಯಾನ್, ಮೊದಲಾರ್ಧದಲ್ಲಿ ಒಂದು ನಿಮಿಷ ಕೂಡಾ ಬೋರೆನಿಸುವುದಿಲ್ಲ. ಆದರೆ ಇಂಟರ್‌ವಲ್ ನಂತರ ಚಿತ್ರಕ್ಕೆ ಸಂಬಂಧವೇ ಇರದ ರೀತಿಯಲ್ಲಿ ಕೆಲವೊಂದು ಪಾತ್ರಗಳನ್ನು ಅನಗತ್ಯವಾಗಿ ತುರುಕಿಸಲಾಗಿದೆ. ಹೊಸಮುಖಗಳಾದ ನಾಯಕ ನಟಿಯರಿಬ್ಬರು (ವಲೂಚಾ ಡಿಸೋಝಾ ಹಾಗೂ ಶ್ರೀಯಾ ಪಿಲ್ಗಾಂವ್‌ಕರ್) ಗಮನಸೆಳೆಯುವ ಅಭಿನಯ ನೀಡಲು ವಿಫಲರಾಗಿದ್ಜಾರೆ. ತಮ್ಮ ಏಕೈಕ ಪುತ್ರನ ಭಾವನೆಗಳನ್ನು ಅರಿಯಲು ಸಾಧ್ಯವಾಗದ ಗೌರವ್‌ನ ಪೋಷಕರ ಪಾತ್ರದಲ್ಲಿ ಯೋಗೇಂದ್ರ ಟೀಕೂ ಹಾಗೂ ದೀಪಿಕಾ ಅಮೀನ್ ಹೃದಯಸ್ಪರ್ಶಿ ಅಭಿನಯ ನೀಡಿದ್ದಾರೆ.

ಚಿತ್ರಮಂದಿರದಿಂದ ಹೊರಬಂದ ಬಳಿಕವೂ ಗೌರವ್‌ನ ಪಾತ್ರ ಪ್ರೇಕ್ಷಕರ ಮನಸ್ಸಿನಲ್ಲಿ ಮರೆಯಾಗುವುದಿಲ್ಲ. ಇತ್ತೀಚಿನ ವರ್ಷಗಳಲ್ಲಿ ಶಾರುಕ್, ಇಷ್ಟು ಉತ್ತಮವಾಗಿ ನಟಿಸಿದ ಚಿತ್ರ ಬಂದಿಲ್ಲವೆಂದೇ ಹೇಳಬಹುದು. ಹಬೀಬ್ ಫೈಸಲ್ ಕಥೆ, ಮನು ಆನಂದ್ ಅವರ ಛಾಯಾಗ್ರಹಣ ಚಿತ್ರದ ಪ್ರಮುಖ ಹೈಲೈಟ್‌ಗಳಾಗಿವೆ. ಸಾಮಾನ್ಯವಾಗಿ ಶಾರುಕ್ ಚಿತ್ರಗಳಿಗೆ ಹಾಡುಗಳೇ ಜೀವಾಳವಾಗಿರುತ್ತದೆ. ಆದರೆ ಫ್ಯಾನ್‌ನಲ್ಲಿ ಹಾಡುಗಳು ಮಾಯವಾಗಿವೆ. ನಮ್ರತಾ ಶೇಖರ್ ಅವರ ಹರಿತವಾದ ಸಂಕಲನ ಚಿತ್ರಕ್ಕೆ ಜೀವ ತುಂಬಿದೆ. ಆಸ್ಕರ್ ವಿಜೇತ ಮೇಕಪ್ ಕಲಾವಿದ ಗ್ರೆಗ್ ಕ್ಯಾನೊ, ಗೌರವ್ ಪಾತ್ರದಲ್ಲಿ ಶಾರುಕ್‌ರನ್ನು ಅತ್ಯಂತ ವಿಭಿನ್ನವಾಗಿ ತೋರಿಸಿದ್ದಾರೆ. ಚಿತ್ರದ ಕತೆ ವಾಸ್ತವತೆಗಿಂತ ತುಸು ದೂರವೆಂಬಂತೆ ಭಾಸವಾಗುತ್ತದೆ. ಉತ್ತರಾರ್ಧ ತುಸು ದೀರ್ಘವಾಗಿದೆ. ಆಲ್ಲಿ ಕಥೆಯು ಲಂಡನ್‌ನಿಂದ ಹಿಡಿದು ಮುಂಬೈ ಹಾಗೂ ದಿಲ್ಲಿವರೆಗೂ ಸಾಗುತ್ತದೆ. ನಿರ್ದೇಶಕರು ಮನಸ್ಸು ಮಾಡಿದ್ದರೆ, ಇಲ್ಲಿ ಕಥೆಗೆ ವಿಭಿನ್ನವಾದ ಅಯಾಮವನ್ನು ನೀಡಬಹುದಿತ್ತು.

  ಶಾರುಕ್ ರೋಮಾಂಚಕಾರಿ ಅಭಿನಯ, ವಿಭಿನ್ನ ಕತೆ, ರೋಚಕ ಸನ್ನಿವೇಶಗಳಿಂದ ಫ್ಯಾನ್ ಪ್ರೇಕ್ಷಕರನ್ನು ಮೋಡಿಗೊಳಿಸುತ್ತದೆ.ಸಿನೆಮಾ ತಾರೆಯರ ಅಂಧಭಿಮಾನಿಗಳಿ ಗಂತೂ ಫ್ಯಾನ್ ಒಂದು ಬಲವಾದ ಮೆಸೇಜ್ ನೀಡುತ್ತದೆ. ಕಥೆಯಲ್ಲಿ ಲಾಜಿಕ್‌ಗೆ ಸ್ಥಾನವಿಲ್ಲವಾದರೂ, ಶಾರುಕ್ ಬಹಳ ಸಮಯದ ಬಳಿಕ ತನ್ನ ಅಭಿನಯ ಕಲೆಗಾರಿಕೆ ಯನ್ನು ಪ್ರದರ್ಶಿಸಿದ್ದಾರೆ. ಆ ಕಾರಣಕ್ಕಾಗಿಯಾದರೂ ಫ್ಯಾನ್ ನೋಡಲೇಬೇಕು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News