ಜಾಟ್ ಹಿಂಸಾಚಾರದ ಸಂತ್ರಸ್ತರಿಗೆ ಒಟ್ಟು 53.93 ಕೋಟಿ ರೂ. ಪರಿಹಾರ
ಚಂಡೀಗಡ, ಎ.16:ಮೀಸಲಾತಿಗೆ ಆಗ್ರಹಿಸಿ ಕಳೆದ ಫೆಬ್ರವರಿಯಲ್ಲಿ ಜಾಟ್ ಸಮುದಾಯ ನಡೆಸಿದ ಪ್ರತಿಭಟನೆಯ ಸಂದರ್ಭದಲ್ಲಿ ಭುಗಿಲೆದ್ದ ಹಿಂಸಾಚಾರದಲ್ಲಿ ಆಸ್ತಿಪಾಸ್ತಿ ಹಾನಿ ಅನುಭವಿಸಿದವರಿಗೆ ಹರ್ಯಾಣ ಸರಕಾರ ಒಟ್ಟು 53.93 ಕೋಟಿ ರೂ. ಪಾವತಿಸಿದೆ. ಪರಿಹಾರ ಕೋರಿ ಒಟ್ಟು 2,077 ಅರ್ಜಿಗಳು ಬಂದಿದ್ದು, ಆ ಪೈಕಿ 1,839 ಅರ್ಜಿಗಳು ನಗರ ಹಾಗೂ 238 ಅರ್ಜಿಗಳು ಗ್ರಾಮೀಣ ಪ್ರದೇಶಗಳನ್ನು ಒಳಗೊಂಡಿವೆ ನಗರ ಪ್ರದೇಶಗಳಲ್ಲಿ 1,500 ಹಾಗೂ ಗ್ರಾಮಾಂತರ ಪ್ರದೇಶಗಳಲ್ಲಿ 289 ಆಸ್ತಿಪಾಸ್ತ್ತಿಗಳಿಗೆ ಹಾನಿಯಾಗಿವೆಯೆಂದು ರಾಜ್ಯಸರಕಾರದ ವಕ್ತಾರರೊಬ್ಬರು ತಿಳಿಸಿದ್ದಾರೆ.
ಸಂತ್ರಸ್ತರಿಗೆ ಮಧ್ಯಂತರ ಪರಿಹಾರವಾಗಿ 23.31 ಕೋಟಿ ರೂ. ಪರಿಹಾರ ನೀಡಲಾಗಿದೆ. ಅಂತಿಮ ಪರಿಹಾರವಾಗಿ ನಗರ ಪ್ರದೇಶಗಳ ಸಂತ್ರಸ್ತರಿಗೆ 27.76 ಕೋಟಿ ರೂ. ಹಾಗೂ ಗ್ರಾಮಾಂತರ ಪ್ರದೇಶಗಳ ಜನರಿಗೆ 2.86 ಕೋಟಿ ರೂ. ಪರಿಹಾರ ನೀಡಲಾಗಿದೆ ಎಂದವರು ತಿಳಿಸಿದ್ದಾರೆ. ವಿಮೆಯಿರುವ ಆಸ್ತಿಗಳ ಮಾಲಕರಿಗೆ ಖಾಸಗಿ ಹಾಗೂ ಸರಕಾರಿ ವಿಮಾ ಕಂಪೆನಿಗಳು 10.97 ಕೋಟಿ ರೂ. ಪಾವತಿಸಿವೆಯೆಂದರು. ಜಾಟ್ ಮೀಸಲಾತಿ ಆಂದೋಲನದ ವೇಳೆ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿ ಆಸ್ತಿ ಹಾನಿ, ಕಳವು , ರಸ್ತೆ ಹಾಗೂ ಸರಕಾರಿ ಕರ್ತವ್ಯ ನಿರ್ವಹಣೆಗೆ ಅಡ್ಡಿಪಡಿಸಿದ ಪ್ರಕರಣಗಳಿಗೆ ಸಂಬಂಧಿಸಿ 2,040 ಎಫ್‌ಐಆರ್‌ಗಳನ್ನು ದಾಖಲಿಸಲಾಗಿದೆಯೆಂದವರು ತಿಳಿಸಿದ್ದಾರೆ.