ಭಾರತದಲ್ಲಿ 10 ಲಕ್ಷ ಜನರಿಗೆ ಇರುವುದು 17 ನ್ಯಾಯಾಧೀಶರು!

Update: 2016-04-17 03:33 GMT

ನವದೆಹಲಿ: ಕಾನೂನು ಆಯೋಗದ 1987ರ ವಾರ್ಷಿಕ ವರದಿ ನ್ಯಾಯಾಂಗ ವಿಭಾಗಕ್ಕೆ ಅಗತ್ಯವಿರುವ ಮಾನವ ಸಂಪನ್ಮೂಲದ ಬಗ್ಗೆ ನೀಲಿನಕ್ಷೆ ಸಿದ್ಧಪಡಿಸಿತು. ಆಗ ದೇಶದಲ್ಲಿದ್ದ ನ್ಯಾಯಾಧೀಶರ ಸಂಖ್ಯೆ 7,675 ಅಥವಾ ಹತ್ತು ಲಕ್ಷ ಮಂದಿಗೆ 10.5 ನ್ಯಾಯಾಧೀಶರು. ಇದೀಗ ನ್ಯಾಯಾಧೀಶರು- ಜನಸಂಖ್ಯೆ ಅನುಪಾತ 10 ಲಕ್ಷಕ್ಕೆ 17 ನ್ಯಾಯಾಧೀಶರ ಸಂಖ್ಯೆಗೆ ಹೆಚ್ಚಿದೆ. ಆದರೆ ದೇಶದಲ್ಲಿ ಖಾಲಿ ನ್ಯಾಯಾಧೀಶರ ಹುದ್ದೆಗಳು 5 ಸಾವಿರ ದಾಟಿವೆ.
ಹಾಲಿ ಮಂಜೂರಾಗಿರುವ ಕೆಳಹಂತದ ನ್ಯಾಯಾಧೀಶರ ಹುದ್ದೆಗಳ ಸಂಖ್ಯೆ 20,214 ಹಾಗೂ 24 ಹೈಕೋರ್ಟ್‌ಗಳ ನ್ಯಾಯಮೂರ್ತಿ ಹುದ್ದೆಗಳು 1,056. ಬಾಕಿ ಉಳಿಕೆ ಪ್ರಕರಣಗಳ ಸಂಖ್ಯೆ 3.10 ಕೋಟಿಯನ್ನು ಮೀರಿದೆ. ಮಂಜೂರಾದ ಹುದ್ದೆಗಳಲ್ಲಿ 4,600 ಕೆಳಹಂತದ ನ್ಯಾಯಾಲಯಗಳ ನ್ಯಾಯಾಧೀಶ ಹುದ್ದೆಗಳು ಖಾಲಿ ಇವೆ. ಇದು ಒಟ್ಟು ಬಲದ ಶೇಕಡ 23ರಷ್ಟು. ಹೈಕೋರ್ಟ್‌ಗಳಲ್ಲಿ ಪರಿಸ್ಥಿತಿ ಇನ್ನೂ ಶೋಚನೀಯ. ಅಂದರೆ ಶೇಕಡ 44ರಷ್ಟು ಹುದ್ದೆಗಳು ಖಾಲಿ ಇದ್ದು, ಒಟ್ಟು 462 ನ್ಯಾಯಮೂರ್ತಿ ಹುದ್ದೆಗಳು ಖಾಲಿ ಇವೆ. ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳ 31 ಹುದ್ದೆಗಳ ಪೈಕಿ ಆರು ಖಾಲಿ ಇವೆ.
ಸುಪ್ರೀಂಕೋರ್ಟ್ ಹಾಗೂ ಕೇಂದ್ರ ಸರ್ಕಾರದ ನಡುವೆ ಕೊಲಾಜಿಯಂ ವ್ಯವಸ್ಥೆ ಹಾಗೂ ನ್ಯಾಯಾಧೀಶರ ನೇಮಕಾತಿ ಸಂಬಂಧದ ಪ್ರಕ್ರಿಯೆ ಕುರಿತ ಒಪ್ಪಂದ ವಿಚಾರದಲ್ಲಿ ಭಿನ್ನಾಭಿಪ್ರಾಯ ಇರುವುದರಿಂದ ನ್ಯಾಯಾಧೀಶರ ನೇಮಕಾತಿ ನನೆಗುದಿಗೆ ಬಿದ್ದಿದೆ.
ಕಾನೂನು ಸಮಿತಿಯ 120ನೆ ವರದಿಯಲ್ಲಿ ನ್ಯಾಯ ವಿಳಂಬಕ್ಕೆ ಕಾರಣವಾದ ಅಂಶಗಳ ಬಗ್ಗೆ ವಿವರಿಸಲಾಗಿದ್ದು, ಪ್ರತಿ ಹತ್ತು ಲಕ್ಷ ಮಂದಿಗೆ 50 ಮಂದಿ ನ್ಯಾಯಾಧೀಶರು ಇರಬೇಕು ಎಂದು ಸೂಚಿಸಿದೆ. ಇದು ಅಮೆರಿಕ (107)ಕ್ಕಿಂತ ಕಡಿಮೆ. ಇಂಗ್ಲೆಂಡಿನಲ್ಲಿ ಹತ್ತು ಲಕ್ಷ ಮಂದಿಗೆ 51 ಮಂದಿ ನ್ಯಾಯಾಧೀಶರಿದ್ದು, ಕೆನಡಾದಲ್ಲಿ 75 ಹಾಗೂ ಆಸ್ಟ್ರೇಲಿಯಾದಲ್ಲಿ 42 ಮಂದಿ ಇದ್ದಾರೆ ಎಂದು ವರದಿಯಲ್ಲಿ ವಿವರಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News