ಪನಾಮಾ ಕಾಲುವೆಯಲ್ಲಿ ಸಿಲುಕಿದ ಇನ್‌ಕ್ರೆಡಿಬಲ್ ಇಂಡಿಯಾ ’ರಾಯಭಾರಿ’
ಹೊಸದಿಲ್ಲಿ, ಎ.19: ಪನಾಮಾ ದಾಖಲೆ ಹಗರಣದಲ್ಲಿ ಬಾಲಿವುಡ್ ಸೂಪರ್‌ಸ್ಟಾರ್ ಅಮಿತಾಭ್ ಬಚ್ಚನ್ ಸಿಲುಕಿಕೊಂಡಿರುವುದರಿಂದ, ಭಾರತದ ಪ್ರವಾಸಿ ತಾಣಗಳಿಗೆ ವಿದೇಶಿ ಪ್ರವಾಸಿಗಳನ್ನು ಆಕರ್ಷಿಸುವ ಬಹುದೊಡ್ಡ ಅಭಿಯಾನ ಎನಿಸಿದ ಇನ್‌ಕ್ರೆಡಿಬಲ್ ಇಂಡಿಯಾ ರಾಯಭಾರಿಯಾಗುವ ಸಾಧ್ಯತೆಯನ್ನು ಕ್ಷೀಣಿಸಿದೆ.
ಅಮಿತಾಭ್ ಬಚ್ಚನ್ ಅವರ ಹೆಸರನ್ನು ಸದ್ಯಕ್ಕೆ ತಡೆ ಹಿಡಿದು, ಇತರ ಸೆಲೆಬ್ರಿಟಿಗಳಿಗಾಗಿ ಸರ್ಕಾರ ಹುಡುಕಾಟ ಆರಂಭಿಸಿದೆ ಎಂದು ಮೂಲಗಳು ಹೇಳಿವೆ.
ತರಾತುರಿಯಲ್ಲಿ ಯಾರನ್ನೂ ನೇಮಕ ಮಾಡಲು ಸಚಿವಾಲಯ ಇಚ್ಛಿಸುತ್ತಿಲ್ಲ. ಇದು ಸರ್ಕಾರದ ಮಹತ್ವದ ಅಭಿಯಾನವಾಗಿದ್ದು, ಇದೀಗ ಬಹಿರಂಗಗೊಂಡಿರುವ ಪನಾಮಾ ದಾಖಲೆಗಳಲ್ಲಿ ಬಚ್ಚನ್ ಅವರ ಹೆಸರು ಕೇಳಿಬಂದಿರುವ ಹಿನ್ನೆಲೆಯಲ್ಲಿ, ಅವರ ನೇಮಕಾತಿ ಬಗ್ಗೆ ಸರ್ಕಾರದಿಂದ ಸ್ಪಷ್ಟನೆ ಪಡೆದ ಬಳಿಕವಷ್ಟೇ ಈ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು. ಆದರೆ ಬಚ್ಚನ್ ಅವರ ಹೆಸರನ್ನು ಸಂಪೂರ್ಣವಾಗಿ ಇನ್ನೂ ತಳ್ಳಿಹಾಕಿಲ್ಲ ಎಂದು ಮೂಲಗಳು ಸ್ಪಷ್ಟಪಡಿಸಿವೆ.
ಪನಾಮಾದ ಕಾನೂನು ಸಂಸ್ಥೆಯಾದ ಮೊಸಾಕ್ ಫೊನ್ಸೆಕಾದಿಂದ ಸೋರಿಕೆಯಾದ ದಾಖಲೆಗಳ ಪ್ರಕಾರ, ಅಮಿತಾಭ್ ಬಚ್ಚನ್ ಹಾಗೂ 500 ಮಂದಿ ಭಾರತೀಯ ಪ್ರಜೆಗಳು ಸಾಗರೋತ್ತರ ತೆರಿಗೆ ಸ್ವರ್ಗಗಳಲ್ಲಿ ಉದ್ಯಮಗಳನ್ನು ಹೊಂದಿದ್ದಾರೆ ಇಲ್ಲವೇ ಖಾತೆಗಳನ್ನು ಹೊಂದಿದ್ದಾರೆ. ಆದರೆ ಈ ಮೇರುನಟ ಇಂಥ ಯಾವುದೇ ಸಂಬಂಧವನ್ನು ನಿರಾಕರಿಸಿದ್ದಾರೆ. ತಮ್ಮ ಹೆಸರು ದುರ್ಬಳಕೆ ಮಾಡಿಕೊಳ್ಳಲಾಗಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.
ಪ್ರವಾಸೋದ್ಯಮ ಅಭಿವೃದ್ಧಿ ಸಚಿವಾಲಯದ ಮೂಲಗಳ ಪ್ರಕಾರ, ಅಮಿತಾಭ್ ಸ್ಥಾನಕ್ಕೆ ಮುಖ್ಯವಾಗಿ ಸ್ಪರ್ಧೆಯಲ್ಲಿರುವ ಹೆಸರುಗಳೆಂದರೆ ಪ್ರಿಯಾಂಕಾ ಛೋಪ್ರಾ ಮತ್ತು ಅಕ್ಷಯ್ ಕುಮಾರ್. ಈ ಬಾರಿ ಮಹಿಳಾ ರಾಯಭಾರಿಯನ್ನು ನೇಮಕ ಮಾಡಬಹುದೇ ಎಂಬ ಸಾಧ್ಯತೆ ಬಗ್ಗೆಯೂ ಸಚಿವಾಲಯ ಪರಿಶೀಲನೆ ನಡೆಸುತ್ತಿದ್ದು, ಸದ್ಯದಲ್ಲೇ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು.