ಆರ್‌ಬಿಐ ಗವರ್ನರ್‌ರ ’ಒಕ್ಕಣ್ಣ’ ಹೇಳಿಕೆಗೆ ಸರ್ಕಾರ ಗರಂ
ಹೊಸದಿಲ್ಲಿ: "ಭಾರತದ ಆರ್ಥಿಕತೆ ಅಂಧರ ನಾಡಿನಲ್ಲಿ ಒಕ್ಕಣ್ಣ ರಾಜನಂತೆ" ಎಂದು ಭಾರತೀಯ ರಿಸರ್ವ್ ಬ್ಯಾಂಕಿನ ಗವರ್ನರ್ ರಘುರಾಮ್ ರಾಜನ್ ನೀಡಿರುವ ಹೇಳಿಕೆ ಇದೀಗ ಕೇಂದ್ರದ ಕೆಂಗಣ್ಣಿಗೆ ಗುರಿಯಾಗಿದೆ. ರಾಜನ್ ಹೇಳಿಕೆಯನ್ನು ಟೀಕಿಸಿದ ವಾಣಿಜ್ಯ ಸಚಿವೆ ನಿರ್ಮಲಾ ಸೀತಾರಾಮನ್, ಈ ಅರ್ಥದ ಒಳ್ಳೆಯ ಪದ ಬಳಸಬೇಕಿತ್ತು ಎಂದು ಹೇಳಿದ್ದಾರೆ.
"ಆ ಪದ ಆಯ್ಕೆ ಬಗ್ಗೆ ನನಗೆ ಸಮಾಧಾನ ಇಲ್ಲ. ಗವರ್ನರ್ ಕೈಗೊಂಡಿರುವ ಕ್ರಮಗಳು ಫಲಿತಾಂಶ ನೀಡುತ್ತಿವೆ ಎನ್ನುವುದು ನನ್ನ ನಂಬಿಕೆ. ವಿದೇಶಿ ನೇರ ಬಂಡಾಳ ಹೂಡಿಕೆ ಸುಧಾರಿಸುತ್ತಿದೆ. ಉತ್ಪಾದನಾ ಕ್ಷೇತ್ರ ಚೇತರಿಸಿಕೊಳ್ಳುತ್ತಿರುವ ಎಲ್ಲ ಲಕ್ಷಣಗಳೂ ಕಾಣುತ್ತಿವೆ. ಹಣದುಬ್ಬರ, ಚಾಲ್ತಿ ಖಾತೆಯಲ್ಲಿನ ಕೊರತೆ ಕೂಡಾ ನಿಯಂತ್ರಣದಲ್ಲಿದೆ" ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಇದಕ್ಕೂ ಮುನ್ನ ರಾಜನ್, "ಭಾರತ ಕ್ರಾಂತಿಯ ಅಂಚಿನಲ್ಲಿದೆ" ಎಂದೂ ಹೇಳಿಕೆ ನೀಡಿದ್ದರು ಎಂದು ಸಚಿವೆ ಅಸಮಾಧಾನ ವ್ಯಕ್ತಪಡಿಸಿದರು.
"ಅವರು ಏನು ಹೇಳಬೇಕೋ ಅದನ್ನು ಹೇಳಲು ಒಳ್ಳೆಯ ಪದ ಬಳಕೆ ಮಾಡಬೇಕು. ಆಗ ಚೆನ್ನಾಗಿರುತ್ತಿತ್ತು" ಎಂದು ಅಭಿಪ್ರಾಯಪಟ್ಟರು.
ಭಾರತವನ್ನು ಜಾಗತಿಕ ಆರ್ಥಿಕತೆಯ ಪ್ರಖರ ತಾಣ ಎಂದು ಗುರುತಿಸಲಾಗುತ್ತಿದೆ ಎಂಬ ಬಗ್ಗೆ ಸಂದರ್ಶನವೊಂದರಲ್ಲಿ ಆರ್‌ಬಿಐ ಗವರ್ನರ್ ಅವರ ಗಮನ ಸೆಳೆದಾಗ, "ಅಂಧರ ನಾಡಿನ ಒಕ್ಕಣ್ಣನಂತೆ" ಎಂದು ಭಾರತದ ಆರ್ಥಿಕತೆಯನ್ನು ರಾಜನ್ ಬಣ್ಣಿಸಿದ್ದರು. ನಮ್ಮ ಸ್ಥಿತಿ ಇನ್ನೂ ನಮಗೆ ತೃಪ್ತಿ ತಂದಿಲ್ಲ ಎಂದು ಸ್ಪಷ್ಟಪಡಿಸಿದ್ದರು. ದೇಶದ ಅರ್ಥಿಕತೆ ಬಗ್ಗೆ ಮುಕ್ತವಾಗಿ ಮಾತನಾಡಿದ ರಾಜನ್, "ಸಾಕಷ್ಟು ಒಳ್ಳೆಯ ಕೆಲಸ ಆಗಿದೆ. ಆದರೆ ಸಾಧಿಸಬೇಕಾದ್ದು ಮತ್ತಷ್ಟು ಇದೆ" ಎಂದು ಹೇಳಿದ್ದರು.