ಕೇಂದ್ರ ಸರ್ಕಾರದಿಂದ ಪ್ರಜಾಪ್ರಭುತ್ವದ ಬುಡಕ್ಕೇ ಕೊಡಲಿಯೇಟು: ಉತ್ತರಾಖಂಡ ಹೈಕೋರ್ಟ್ ಛೀಮಾರಿ
ನೈನಿತಾಲ್: ಉತ್ತರಾಖಂಡದಲ್ಲಿ ಒಂಬತ್ತು ಮಂದಿ ಶಾಸಕರನ್ನು ಅನರ್ಹಗೊಳಿಸಿರುವ ಬಗ್ಗೆ ಕ್ರಮ ಕೈಗೊಳ್ಳುವುದು ನಿಮಗೆ ಸಂಬಂಧಿಸಿದ್ದಲ್ಲ; ಇಂಥ ಪರಿಸ್ಥಿತಿಯಲ್ಲಿ ಹಸ್ತಕ್ಷೇಪ ಮಾಡಲು ಕೇವಲ ತೀರಾ ವಿಶೇಷ ಸಂದರ್ಭಗಳಲ್ಲಷ್ಟೇ ಅವಕಾಶವಿದೆ ಎಂದು ಉತ್ತರಾಖಂಡ ಹೈಕೋರ್ಟ್, ಕೇಂದ್ರ ಸರ್ಕಾರಕ್ಕೆ ಛೀಮಾರಿ ಹಾಕಿದೆ.
"ವಾಸ್ತವವಾಗಿ ನೀವು ಇದರಿಂದ ದೂರವಿದ್ದು, ತಟಸ್ಥ ನಿಲುವು ಹೊಂದಿರಬೇಕು"ಎಂದು ಉತ್ತರಾಖಂಡದ ಪದಚ್ಯುತ ಮುಖ್ಯಮಂತ್ರಿ ಹರೀಶ್ ರಾವತ್ ಸಲ್ಲಿಸಿದ ರಿಟ್ ಅರ್ಜಿ ವಿಚಾರಣೆಯ ವೇಳೆ ಹೈಕೋರ್ಟ್ ಅಭಿಪ್ರಾಯಪಟ್ಟಿದೆ. ಮಾರ್ಚ್ 27ರಂದು ಈ ಗುಡ್ಡಗಾಡು ರಾಜ್ಯದ ಮೇಲೆ ರಾಷ್ಟ್ರಪತಿ ಆಳ್ವಿಕೆ ಹೇರಿರುವ ಕೇಂದ್ರ ಸರ್ಕಾರದ ಕ್ರಮವನ್ನು ಪ್ರಶ್ನಿಸಿ, ರಾವತ್ ಅರ್ಜಿ ಸಲ್ಲಿಸಿದ್ದರು. "ಕೇಂದ್ರ ಸರ್ಕಾರದ ಕ್ರಮ ಪ್ರಜಾಪ್ರಭುತ್ವದ ಬುಡಕ್ಕೇ ಕೊಡಲಿಯೇಟು ನೀಡುವಂಥದ್ದು" ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
ರಾಜ್ಯಪಾಲರು ಸದನದಲ್ಲಿ ಬಹುಮತ ಸಾಬೀತುಪಡಿಸಲು ದಿನಾಂಕವನ್ನು ನಿಗದಿಪಡಿಸಿದ ಬಳಿಕ ತರಾತುರಿಯಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರುವ ಅಗತ್ಯವೇನಿತ್ತು ಎಂದೂ ಕೇಂದ್ರವನ್ನು ತರಾಟೆಗೆ ತೆಗೆದುಕೊಂಡಿದೆ. ಕಳೆದ ವಾರ ಕೂಡಾ ಹೈಕೋರ್ಟ್, ನ್ಯಾಯಾಲಯದ ರಜಾ ಕಾಲದಲ್ಲಿ (ಏಪ್ರಿಲ್ 13 ರಿಂದ 17) ರಾಜ್ಯದಲ್ಲಿ ಯಾವುದೇ ರಾಜಕೀಯ ಕಸರತ್ತಿಗೆ ಕೈಹಾಕದಂತೆಯೂ ಕೇಂದ್ರಕ್ಕೆ ಎಚ್ಚರಿಕೆ ನೀಡಿತ್ತು.