ಗುಜರಾತ್‌ನಲ್ಲಿ ಬಿಜೆಪಿ ಇನ್ನು ಅಧಿಕಾರಕ್ಕೆ ಬರುವುದಿಲ್ಲ: ಪಟೇಲ್ ನಾಯಕ
ಅಹ್ಮದಾಬಾದ್: ಪ್ರಧಾನಿ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿ ಆನಂದಿಬೆನ್ ಪಟೇಲ್ ಅವರ ತವರು ಜಿಲ್ಲೆ ಮೆಹ್ಸಾನಾ ಮತ್ತೆ ಕುದಿಬಿಂದುವಾಗಿದೆ. ಪಾಟಿದಾರ ಜನಾಂಗವನ್ನು ಹಿಂದುಳಿದ ವರ್ಗಗಳ ಪಟ್ಟಿಗೆ ಸೇರಿಸಬೇಕು ಎಂಬ ಹೋರಾಟಕ್ಕೆ ಹಾರ್ದಿಕ್ ಪಟೇಲ್ ಅವರಿಗೆ ಮಾರ್ಗದರ್ಶಕರಾಗಿದ್ದ ಲಾಲ್‌ಜಿ ಪಟೇಲ್ (39) ಸೋಮವಾರ ಪ್ರತಿಭಟನಾಕಾರರು ಹಾಗೂ ಪೊಲೀಸರ ನಡುವಿನ ಘರ್ಷಣೆಯಲ್ಲಿ ಗಾಯಗೊಂಡಿದ್ದಾರೆ. ಇದರಿಂದ ಉದ್ರಿಕ್ತರಾದ ಸಮುದಾಯ ಮುಖಂಡರು ಗುಜರಾತ್ ಬಂದ್ ಮಾಡುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.
ಮೆಹ್ಸಾನಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಲಾಲ್‌ಜಿ ಪಟೇಲ್ ಹಿಂದೂಸ್ತಾನ್ ಟೈಮ್ಸ್‌ಗೆ ನೀಡಿದ ವಿಶೇಷ ಸಂದರ್ಶನದಲ್ಲಿ, "ಪ್ರಧಾನಿ ನರೇಂದ್ರ ಮೋದಿ ಪಾಟಿದಾರ್ ಸಮುದಾಯದಲ್ಲಿ ನಿರಾಸೆ ಮೂಡಿಸಿದ್ದಾರೆ. ಇಡೀ ಸಮುದಾಯ ಮುಂದಿನ ವರ್ಷ ಗುಜರಾತ್ ವಿಧಾನಸಭೆಗೆ ನಡೆಯುವ ಚುನಾವಣೆಯಲ್ಲಿ ಬಿಜೆಪಿಯನ್ನು ಅಧಿಕಾರದಿಂದ ಕೆಳಗಿಳಿಸಲಿದೆ" ಎಂದು ಹೇಳಿದರು.
ಮೀಸಲಾತಿ ಹೋರಾಟವನ್ನು ನಿಭಾಯಿಸುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆಯೇ ಎಂಬ ಪ್ರಶ್ನೆಗೆ, "ಖಂಡಿತವಾಗಿಯೂ. ಬಿಜೆಇ ಇನ್ನೆಂದೂ ರಾಜ್ಯದಲ್ಲಿ ಅಧಿಕಾರಕ್ಕೆ ಬರುವುದಿಲ್ಲ. ಇದು ರಾಜ್ಯ ಬಿಜೆಪಿಗೆ ಮಾತ್ರ ಸೀಮಿತವಾಗಿಲ್ಲ. ಕೇಂದ್ರದಲ್ಲೂ ಪಕ್ಷದ ಮೇಲೆ ಪರಿಣಾಮ ಬೀರಲಿದೆ. ತಮ್ಮ ಹಕ್ಕಿಗಾಗಿ ಹೋರಾಡಿದ ಯುವಕರ ಮೇಲೆ ದೇಶದ್ರೋಹದ ಪ್ರಕರಣ ದಾಖಲಿಸಲಾಗಿದೆ. ಪ್ರತಿಭಟನಾಕಾರರ ಮೇಲೆ ಲಾಠಿ ಬೀಸಲಾಗಿದೆ. ಮನೆಯೊಳಗಿದ್ದ ಮಹಿಳೆಯರು ಹಾಗೂ ಹಿರಿಯ ನಾಗರಿಕರನ್ನೂ ಥಳಿಸಲಾಗಿದೆ. ಪಾಟಿದಾರ ಸಮುದಾಯ ಮುಂದಿನ ಚುನಾವಣೆಯಲ್ಲಿ ಬಿಜೆಪಿಗೆ ತಕ್ಕ ಉತ್ತರ ನೀಡುತ್ತದೆ" ಎಂದು ಉತ್ತರಿಸಿದರು.