ಜಶ್ಪುರ್ ಜಿಲ್ಲಾಧಿಕಾರಿ ವಾಹನಕ್ಕೆ 6 ವರ್ಷದ ಬಾಲಕ ಬಲಿ
ರಾಯಪುರ್, ಎ.19: ಜಶ್ಪುರ್ ಜಿಲ್ಲಾಧಿಕಾರಿಯವರ ಅಧಿಕೃತ ವಾಹನ ರವಿವಾರ ಸಂಜೆ ಢಿಕ್ಕಿ ಹೊಡೆದ ಪರಿಣಾಮ ಗಂಭೀರ ಗಾಯಗೊಂಡಿದ್ದ ಆರು ವರ್ಷದ ಬಾಲಕನೊಬ್ಬ ಚಿಕಿತ್ಸೆ ಫಲಕಾರಿಯಾಗದೆ ರಾಂಚಿಯ ಆಸ್ಪತ್ರೆಯಲ್ಲಿ ಸೋಮವಾರ ಮೃತಪಟ್ಟಿದ್ದಾನೆ. ಬಾಲಕನ ಅಂತ್ಯಕ್ರಿಯೆ ಆತನ ಗ್ರಾಮವಾದ ಭಿಂಜ್‌ಪುರದ ಕುನ್ಕುರಿಯಲ್ಲಿ ದುಃಖತಪ್ತ ಕುಟುಂಬ ವರ್ಗ ಹಾಗೂ ಗ್ರಾಮಸ್ಥರ ಸಮ್ಮುಖದಲ್ಲಿ ನೆರವೇರಿತು.
ಜಶ್ಪುರದ ಜಿಲ್ಲಾಧಿಕಾರಿ ಪ್ರಿಯಾಂಕಾ ಶುಕ್ಲ ಸಭೆಯೊಂದರಲ್ಲಿ ಭಾಗವಹಿಸಿ ಹಿಂದಿರುಗುತ್ತಿದ್ದ ಸಂದರ್ಭ ವೇಗವಾಗಿದ್ದ ಅವರ ವಾಹನವು ‘ರಸ್ತೆಯಲ್ಲಿ ಒಮ್ಮೆಲೇ ಪ್ರತ್ಯಕ್ಷನಾದ’ ರೋಶನ್ ಎಂಬ ಬಾಲಕನಿಗೆ ಢಿಕ್ಕಿ ಹೊಡೆದಿತ್ತೆನ್ನಲಾಗಿದೆ. ಅಪಘಾತದಿಂದ ಗಂಭೀರ ಗಾಯಗೊಂಡಿದ್ದ ರೋಶನ್‌ನನ್ನು ಕೂಡಲೇ ಆಸ್ಪತ್ರೆಗೆ ಸೇರಿಸಿದ್ದ ಜಿಲ್ಲಾಧಿಕಾರಿ ತನ್ನ ವಾಹನ ಹಾಗೂ ಚಾಲಕನನ್ನು ಪೊಲೀಸ್ ಠಾಣೆಗೆ ಕಳುಹಿಸಿದ್ದರು. ರೋಶನ್‌ನಿಗೆ ಅತ್ಯುತ್ತಮ ಚಿಕಿತ್ಸೆ ದೊರೆಯುವಂತೆ ಕಾಳಜಿ ವಹಿಸಿದ ಜಿಲ್ಲಾಧಿಕಾರಿ ಆತನನ್ನು ಕುನ್ಕುರಿಯ ಹೋಲಿ ಕ್ರಾಸ್ ಆಸ್ಪತ್ರೆಯಿಂದ ರಾಂಚಿಯ ರಾಜೇಂದ್ರ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ಸೇರಿಸಿದ್ದರು. ಆದರೆ ಬಾಲಕನ ತಲೆಗೆ ಆಳವಾದ ಗಾಯವಾದ ಕಾರಣ ಆತ ಕೊನೆಯುಸಿರೆಳೆದನೆಂದು ಎಸ್ಪಿಜಿ.ಎಸ್.ಜೈಸ್ವಾಲ್ ತಿಳಿಸಿದ್ದಾರೆ.