×
Ad

ಮೋದಿ ಸರಕಾರದ ವಿರುದ್ಧ ಕಾರ್ಮಿಕರ ಆಕ್ರೋಶ

Update: 2016-04-19 23:01 IST

ಕೇಂದ್ರದ ನರೇಂದ್ರ ಮೋದಿ ಸರಕಾರದ ಕಾರ್ಮಿಕ ವಿರೋಧಿ ಭವಿಷ್ಯ ನಿಧಿ ನೀತಿಯನ್ನು ಪ್ರತಿಭಟಿಸಿ ಸೋಮವಾರ ಬೆಂಗಳೂರಿನಲ್ಲಿ ಭುಗಿಲೆದ್ದ ಗಾರ್ಮೆಂಟ್ ಕಾರ್ಮಿಕರ ಆಕ್ರೋಶ ಮಂಗಳವಾರ ತೀವ್ರ ಸ್ವರೂಪ ಪಡೆದಿದೆ. ಉದ್ರಿಕ್ತ ಕಾರ್ಮಿಕ ಸಮೂಹವನ್ನು ನಿಯಂತ್ರಿಸಲು ಪೊಲೀಸರು ಅಶ್ರುವಾಯು ಮತ್ತು ಲಾಠಿ ಪ್ರಹಾರ ಮಾಡಿದ್ದಾರೆ. ಬೆಂಗಳೂರಿನ ಸಾರಿಗೆ ವ್ಯವಸ್ಥೆ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಸೋಮವಾರ ಬೆಂಗಳೂರಿಗೆ ಮಾತ್ರ ಸೀಮಿತವಾಗಿದ್ದ ಈ ಪ್ರತಿಭಟನೆ ಮಂಗಳವಾರ ತುಮಕೂರು, ಮಂಡ್ಯ, ರಾಮನಗರಗಳಿಗೆ ವ್ಯಾಪಿಸಿದೆ. ಕಾರ್ಮಿಕರ ಭವಿಷ್ಯನಿಧಿ ಹಣವನ್ನು ಕಾರ್ಪೊರೇಟ್ ಬಂಡವಾಳಶಾಹಿಗಳ ಮಡಿಲಿಗೆ ಹಾಕುವ ಕೇಂದ್ರ ಸರಕಾರದ ಹೊಸ ನಿಯಮಾವಳಿ ವಿರುದ್ಧ ಸೋಮವಾರ ಆರಂಭವಾದ ಪ್ರತಿಭಟನೆ ಶಾಂತಿಯುತವಾಗಿತ್ತು. ಆದರೆ ಪೊಲೀಸರು ಅಪ್ರಚೋದಿತವಾಗಿ ಮಹಿಳಾ ಕಾರ್ಮಿಕರ ಮೇಲೆ ಅತ್ಯಂತ ಅಮಾನವೀಯವಾಗಿ ಲಾಠಿ ಪ್ರಹಾರ ಮಾಡಿದ ಪರಿಣಾಮವಾಗಿ ಪರಿಸ್ಥಿತಿ ಪ್ರಕ್ಷುಬ್ಧಗೊಂಡಿದೆ. ಪೊಲೀಸ್ ಲಾಠಿ ಪ್ರಹಾರದ ಬದಲಾಗಿ ಕೇಂದ್ರ ಸಚಿವರು, ಇಲ್ಲವೇ, ಸ್ಥಳೀಯ ಜನಪ್ರತಿನಿಧಿಗಳು ರಾಜ್ಯದ ಗೃಹ ಮತ್ತು ಕಾರ್ಮಿಕ ಸಚಿವರು ಮಧ್ಯಪ್ರವೇಶ ಮಾಡಿ ಹೋರಾಟಕ್ಕಿಳಿದ ಕಾರ್ಮಿಕರಿಗೆ ಸಹಾನುಭೂತಿ ತೋರಿಸಿದ್ದರೆ ಈ ಪರಿಸ್ಥಿತಿ ಉಂಟಾಗುತ್ತಿರಲಿಲ್ಲ. ಗಾರ್ಮೆಂಟ್ ಕಾರ್ಮಿಕರ ಪ್ರತಿಭಟನೆಗೆ ಕೇಂದ್ರ ಸರಕಾರದ ಭವಿಷ್ಯ ನಿಧಿ ಹಣದ ವಾಪಸಾತಿ ಕುರಿತು ಕೈಗೊಂಡ ನಿರ್ಧಾರ ಕಾರಣವಾಗಿದೆ. ಕಾರ್ಮಿಕರ ಮೂಲ ವೇತನದಲ್ಲಿ ಪಡೆಯುವ ಪಿಎಫ್ ಹಣವನ್ನು ಮಾತ್ರ ಕಾರ್ಮಿಕರು ವಾಪಸ್ ಪಡೆಯಬಹುದು. ಆದರೆ ಮಾಲಕರಿಂದ ಜಮೆಯಾದ ಹಣವನ್ನು 58 ವರ್ಷಗಳವರೆಗೆ ಪಡೆಯುವಂತಿಲ್ಲ ಎಂಬ ಕೇಂದ್ರ ಸರಕಾರದ ತೀರ್ಮಾನ ಕಾರ್ಮಿಕರ ಆಕ್ರೋಶಕ್ಕೆ ಕಾರಣವಾಗಿದೆ. ನೌಕರರ ಭವಿಷ್ಯ ನಿಧಿಯ ಹಣ ಪಾವತಿಗೆ ಸಂಬಂಧಿಸಿದಂತೆ ಹೊಸ ನಿಯಮಾವಳಿ ಸರಿಯಿಲ್ಲ. ಇದರಿಂದ ತಮಗೆ ಅನ್ಯಾಯವಾಗುತ್ತದೆ ಎಂಬುದು ಕಾರ್ಮಿಕರ ಆಕ್ರೋಶಕ್ಕೆ ಕಾರಣವಾದ ಅಂಶವಾಗಿದೆ. ಈಗ ಇರುವ ನಿಯಮಗಳ ಪ್ರಕಾರ ನೌಕರರಿಗೆ ನಿರಂತರ 60 ದಿನಗಳ ವರೆಗೆ ಕೆಲಸ ಇಲ್ಲದಿದ್ದರೆ ಪಿಎಫ್ ಖಾತೆಯಲ್ಲಿನ ಸಂಪೂರ್ಣ ಮೊತ್ತವನ್ನು ಪಡೆಯಬಹುದಾಗಿದೆ. ಆದರೆ ಹೊಸ ನಿಯಮಾವಳಿ ಪ್ರಕಾರ ಪಿಎಫ್ ಖಾತೆಯಲ್ಲಿನ ಸಂಪೂರ್ಣ ಮೊತ್ತವನ್ನು ಪಡೆಯಲು ಸಾಧ್ಯವಾಗುವುದಿಲ್ಲ. ಇದಕ್ಕಾಗಿ ಕಾರ್ಮಿಕರು 58 ವರ್ಷಗಳವರೆಗೆ ಕಾಯಬೇಕಾಗುತ್ತದೆ. ವಾಸ್ತವವಾಗಿ ಗಾರ್ಮೆಂಟ್ ಉದ್ಯಮದಲ್ಲಿ 58 ವರ್ಷಗಳ ವರೆಗೆ ಸೇವೆ ಮಾಡುವ ಅವಕಾಶವೇ ಇರುವುದಿಲ್ಲ. ಕೆಲಸಕ್ಕೆ ಸೇರಿ 5 ವರ್ಷಗಳಾಗುವಷ್ಟರಲ್ಲಿಯೇ ಕಾರ್ಮಿಕರಿಂದ ಉದ್ಯಮಪತಿಗಳು ಬಲವಂತವಾಗಿ ರಾಜೀನಾಮೆ ಪಡೆಯುತ್ತಾರೆ, ಇಲ್ಲವೇ ವಜಾ ಮಾಡುತ್ತಾರೆ. ಹೀಗಾದಾಗ ಬೀದಿಪಾಲಾಗುವ ಕಾರ್ಮಿಕರಿಗೆ ಪಿಎಫ್ ಹಣ ಸಿಗದೆ ಬೇರೆ ಗತಿ ಇರುವುದಿಲ್ಲ. ಆದರೆ, ಮೋದಿ ಸರಕಾರ ಕಾರ್ಮಿಕರ ಜೇಬಿಗೆ ಕೈಹಾಕಿ ಅವರ ಖಾತೆಯಲ್ಲಿನ ಹಣವನ್ನು ಕಾರ್ಪೊರೇಟ್ ವಲಯಕ್ಕೆ ದಾನ ಮಾಡಲು ಹೊರಟಿದೆ. ಈ ದೇಶದಲ್ಲಿ ಅತ್ಯಂತ ಶೋಷಣೆಗೆ ಒಳಗಾದ ಕಾರ್ಮಿಕರೆಂದರೆ ಗಾರ್ಮೆಂಟ್ ಕಾರ್ಮಿಕರಾಗಿದ್ದಾರೆ. ಈ ಉದ್ಯಮದಲ್ಲಿ ಮಹಿಳೆಯರೇ ಹೆಚ್ಚಿನ ಸಂಖ್ಯೆಯಲ್ಲಿ ಕೆಲಸ ಮಾಡುತ್ತಾರೆ. ಯಾವುದೇ ಶಾಸನಬದ್ಧ ಸೌಲಭ್ಯ ಇರುವುದಿಲ್ಲ. ಬೆಳಗ್ಗಿನ ಜಾವ ಮನೆಯಲ್ಲಿ ಅಡುಗೆ ಮಾಡಿಟ್ಟು ಕೆಲಸಕ್ಕೆ ಹೋದರೆ ಮತ್ತೆ ಇವರು ವಾಪಸ್ ಬರುವುದು ಕತ್ತಲಾದ ನಂತರ. ಇಂತಹ ಅಸಂಘಟಿತ ಕಾರ್ಮಿಕರನ್ನು ಸಂಘಟಿಸುವಲ್ಲಿ ಕೇಂದ್ರೀಯ ಕಾರ್ಮಿಕ ಸಂಘಟನೆಗಳು ಈ ವರೆಗೆ ಆಸಕ್ತಿ ತೋರಿಸಿಲ್ಲ. ಅಂದರೆ, ಸ್ವಯಂ ಪ್ರೇರಿತರಾಗಿ ಅವರು ಬೀದಿಗಿಳಿದು ಪ್ರತಿಭಟಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ಹೊಣೆ ಹೊತ್ತುಕೊಂಡ ಪೊಲೀಸರು ಕೊಂಚ ತಾಳ್ಮೆಯಿಂದ ವರ್ತಿಸಬೇಕಾಗುತ್ತದೆ. ಆದರೆ, ಬೆಂಗಳೂರಿನಲ್ಲಿ ಗಾರ್ಮೆಂಟ್ ಕಾರ್ಮಿಕರ ಮೇಲೆ ಪೊಲೀಸರು ನಡೆಸಿದ ದೌರ್ಜನ್ಯ ಮಾನವ ಹಕ್ಕು ಉಲ್ಲಂಘನೆಯಾಗಿದೆ. ರಾಜ್ಯದ ಗೃಹ ಸಚಿವರು ಕೂಡಾ ತುಂಬಾ ತಡವಾಗಿ ಈ ಘಟನೆ ಬಗ್ಗೆ ಸ್ಪಂದಿಸಿದ್ದಾರೆ.

ಅಂಬಾನಿ, ಅದಾನಿಯಂತಹ ಭಾರೀ ಬಂಡವಾಳಗಾರರಿಗೆ ಮೂರು ಲಕ್ಷ ಕೋಟಿ ರೂ.ಯಷ್ಟು ರಿಯಾಯಿತಿ ತೋರಿಸುವ ಮೋದಿ ಸರಕಾರ ಕಾರ್ಮಿಕ ವರ್ಗದ ಏಕೈಕ ಆಸರೆಯಾದ ಭವಿಷ್ಯನಿಧಿ ವ್ಯವಸ್ಥೆಯನ್ನೇ ನಾಶಮಾಡಲು ಹುನ್ನಾರ ನಡೆಸಿದೆ. ಮುಂಚೆ ಕಡ್ಡಾಯವಾಗಿದ್ದ ಭವಿಷ್ಯ ನಿಧಿಗೆ ಈಗ ಬೇಕಾದವರು ಮಾತ್ರ ಸೇರಿಕೊಳ್ಳಬಹುದೆಂದು ನಿಯಮಾವಳಿಗಳನ್ನು ಬದಲಿಸಿದೆ. ಅಷ್ಟೇ ಅಲ್ಲ ಭವಿಷ್ಯ ನಿಧಿಯಲ್ಲಿರುವ ಹಣವನ್ನು ವಾಪಸ್ ಪಡೆದರೆ, ತೆರಿಗೆ ವಿಧಿಸಲು ಕೇಂದ್ರ ಸರಕಾರ ಹುನ್ನಾರ ನಡೆಸಿತ್ತು. ಆದರೆ ಕಾರ್ಮಿಕ ಸಂಘಟನೆಗಳ ಪ್ರತಿಭಟನೆಯಿಂದಾಗಿ ಅದು ಆ ನಿಲುವನ್ನು ಬದಲಿಸಿತು. ಸಂಘಟಿತ ಕಾರ್ಮಿಕ ವರ್ಗ ತನ್ನ ಬೇಡಿಕೆಗಾಗಿ ಆಗಾಗ ಮುಷ್ಕರಕ್ಕೆ ಕರೆ ಕೊಡುತ್ತದೆ. ಆದರೆ ಗಾರ್ಮೆಂಟ್ ಉದ್ಯಮದಲ್ಲಿ ಕೆಲಸ ಮಾಡುವ ಅಸಂಘಟಿತ ಕಾರ್ಮಿಕರ ಆಕ್ರಂದನ ಅರಣ್ಯ ರೋದನವಾಗಿದೆ. ಇನ್ನಾದರೂ ಸರಕಾರ ಗಾರ್ಮೆಂಟ್ ಕಾರ್ಮಿಕರಿಗೆ ಉದ್ಯೋಗ ಭರವಸೆ ಒದಗಿಸಲಿ. ಭವಿಷ್ಯನಿಧಿ ಹಣದ ವಾಪಸಾತಿಗೆ ಸಂಬಂಧಿಸಿದಂತೆ ಹಿಂದಿನ ನಿಯಮಾವಳಿಗಳನ್ನೇ ಮುಂದುವರಿಸಲಿ ಮತ್ತು ಬೆಂಗಳೂರಿನ ಗಾರ್ಮೆಂಟ್ ಕಾರ್ಮಿಕರ ಮೇಲೆ ನಡೆದ ಪೊಲೀಸ್ ದೌರ್ಜನ್ಯದ ಬಗ್ಗೆ ನ್ಯಾಯಾಂಗ ತನಿಖೆಯಾಗಲಿ ಮತ್ತು ಗೋಲಿಬಾರ್ ಮತ್ತು ಲಾಠಿ ಪ್ರಹಾರದಲ್ಲಿ ಗಾಯಗೊಂಡವರಿಗೆ ಸರಕಾರ ಸೂಕ್ತ ಪರಿಹಾರ ನೀಡಲಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News