×
Ad

ಮಗ ಸತ್ತರೂ ಪರವಾಗಿಲ್ಲ...

Update: 2016-04-20 23:45 IST

ಹೈದರಾಬಾದ್ ವಿಶ್ವವಿದ್ಯಾನಿಲಯದ ಸಂಶೋಧಕ ವಿದ್ಯಾರ್ಥಿ ರೋಹಿತ್ ವೇಮುಲಾರನ್ನು ನಿಜಕ್ಕೂ ಕೊಂದವರು ಯಾರು? ಈ ಪ್ರಶ್ನೆ ಮತ್ತೆ ಚರ್ಚೆಗೊಳಗಾಗಬೇಕಾಗಿದೆ. ಅಥವಾ ಚರ್ಚೆಗೊಳಗಾಗುವಂತಹ ಸನ್ನಿವೇಶವನ್ನು ಮಾಯಾವತಿ ಯಂತಹ ಹಿರಿಯ ದಲಿತ ನಾಯಕರೇ ನಿರ್ಮಾಣ ಮಾಡಿದ್ದಾರೆ. ರೋಹಿತ್‌ವೇಮುಲಾನನ್ನು ಒಂದು ಅರ್ಥದಲ್ಲಿ ಕೊಂದದ್ದು ಮೇಲ್ವರ್ಗವಲ್ಲ. ಆತನನ್ನು ವಿವಿಧ ಇಸಂ, ಭಿನ್ನಮತಗಳ ಹೆಸರಿನಲ್ಲಿ ಒಬ್ಬಂಟಿಯಾಗಿಸಿದ ದಲಿತ ಸಂಘಟನೆಗಳು ಮತ್ತು ಕಾಮ್ರೇಡ್‌ಗಳೇ ಆತನನ್ನು ಸಾವಿನ ದವಡೆಗೆ ನೂಕಿದರು. ದಲಿತರು ಬಹುಸಂಖ್ಯಾತರು ಎಂಬ ಅಂಕಿಸಂಕಿಗಳು ಹೊರಬಿದ್ದರೆ ನಾವೆಲ್ಲ ಉಬ್ಬಿ ಬಿಡುತ್ತೇವೆ. ಆದರೆ, ರೋಹಿತ್‌ರಂತಹ ಒಬ್ಬ ದಲಿತ ವಿದ್ಯಾರ್ಥಿಗೆ ಅನ್ಯಾಯ ವಾದಾಗ ಆತನ ಜೊತೆ ನಿಲ್ಲಲು ಹತ್ತು ದಲಿತರೂ ಇಲ್ಲ ಎಂದ ಮೇಲೆ, ಈ ಅಂಕಿಸಂಕಿಗಳನ್ನು ಕಟ್ಟಿಕೊಂಡು ಮಾಡುವುದಾದರೂ ಏನನ್ನು? ಒಂದು ವೇಳೆ ಎಲ್ಲ ದಲಿತ ಮತ್ತು ಶೋಷಿತ ಸಮುದಾಯ ಸಂಘಟಿತವಾಗಿ ನಿಂತಿದ್ದರೆ, ರೋಹಿತ್ ವೇಮುಲಾ ಪ್ರಕರಣವೇ ಘಟಿಸುತ್ತಿರಲಿಲ್ಲ. ವಿಶ್ವವಿದ್ಯಾನಿಲಯದ ಕುಲಪತಿಗೆ ಅನ್ಯಾಯ ಬಗೆಯುವ ಧೈರ್ಯವೂ ಬರುತ್ತಿರಲಿಲ್ಲ. ಅನ್ಯಾಯವಾದ ಸಂದರ್ಭದಲ್ಲಾದರೂ ಆತನ ಧರಣಿಗೆ ಜೊತೆ ನೀಡಿದಿದ್ದರೆ, ವಿಶ್ವವಿದ್ಯಾನಿಲಯ ನ್ಯಾಯ ನೀಡುವುದಕ್ಕೆ ಸಿದ್ಧವಾಗಿ ಬಿಡುತ್ತಿತ್ತು. ಆದರೆ ಆತ ವಿಶ್ವವಿದ್ಯಾನಿಲಯದ ಬಯಲಲ್ಲಿ ಒಬ್ಬಂಟಿಯಾಗಿದ್ದ. ಆ ಧೈರ್ಯದಿಂದಲೇ ಮೋದಿ ಬಳಗಕ್ಕೆ ರೋಹಿತ್ ವೇಮುಲಾ ವಿರುದ್ಧ ಅನ್ಯಾಯವೆಸಗಲು ಧೈರ್ಯ ಮೂಡಿತು. ರೋಹಿತ್ ವೇಮುಲಾ ತನ್ನ ಶತ್ರುಗಳನ್ನು ಕಂಡು ಭಯಪೀಡಿತನಾಗಿ ಆತ್ಮಹತ್ಯೆ ಮಾಡಿಕೊಂಡಿ ರುವುದಲ್ಲ ಬದಲಿಗೆ, ತನ್ನವರೆಲ್ಲ ತನ್ನನ್ನು ಒಂಟಿಯಾಗಿ ಬಿಟ್ಟ ಹತಾಶೆಯಲ್ಲಿ ಖಿನ್ನತೆಯಿಂದ ಆತ್ಮಹತ್ಯೆ ಮಾಡಿಕೊಂಡಿರುವುದು. ಈ ಕಾರಣದಿಂದಲೇ ರೋಹಿತ್ ಆತ್ಮಹತ್ಯೆಯಲ್ಲಿ ಮೇಲ್ವರ್ಗದ ಪಾತ್ರಕ್ಕಿಂತ, ದಲಿತ ಮತ್ತು ಇನ್ನಿತರ ಸಂಘಟನೆಗಳ ಪಾತ್ರವೇ ಬಹುದೊಡ್ಡದು. ಆತನ ಆತ್ಮಹತ್ಯೆಯ ಘಟನೆಯ ಬಳಿಕವಾದರೂ ಶೋಷಿತ ಸಂಘಟನೆಗಳು ದೇಶಾದ್ಯಂತ ಒಂದಾಗಿ ಧ್ವನಿಯೆತ್ತಿದ್ದರೆ ಇಂದು ಹೈದರಾಬಾದ್ ವಿವಿಯ ಕುಲಪತಿ ವಜಾಗೊಳ್ಳುತ್ತಿದ್ದರೇನೋ. ಆದರೆ ಆತನ ಆತ್ಮಹತ್ಯೆ ಬಳಿಕವೂ ದಲಿತ ಸಂಘಟನೆಗಳ ನಡುವೆ ಒಂದು ರೀತಿಯ ಸೂತಕ ವೌನ ಆವರಿಸಿತ್ತು. ಕೆಲವು ಸಂಘಟನೆಗಳು ಪ್ರತಿಭಟನೆಗಳನ್ನು ಹಮ್ಮಿಕೊಂಡವಾದರೂ ಅದಕ್ಕೆ ಒಂದು ಸರಕಾರವನ್ನೋ ಒಂದು ಸಮಾಜವನ್ನೋ ಅಲ್ಲಾಡಿಸುವ ಯಾವ ಇಚ್ಛಾಶಕ್ತಿಯೂ ಇದ್ದಿರಲಿಲ್ಲ. ಮಾಯಾವತಿಯಂತಹ ರಾಜಕೀಯ ನಾಯಕರು ಈ ಸಂದರ್ಭದಲ್ಲಿ ಮುಂಚೂಣಿಗೆ ಬಂದಿದ್ದರೂ, ರೋಹಿತ್ ವೇಮುಲಾ ಸಾವು ದೇಶಾದ್ಯಂತ ಸುದ್ದಿಯಾಗಿ ವಿಶ್ವವಿದ್ಯಾನಿಲಯಗಳಲ್ಲಿ ದಲಿತರ ಸ್ಥಿತಿಗತಿ ಮುನ್ನೆಲೆಗೆ ಬರುತ್ತಿತ್ತೋ ಏನೋ? ಆದರೆ ಅವರು ಮತ್ತು ಅವರು ನೇತೃತ್ವ ವಹಿಸಿರುವ ಪಕ್ಷವೂ ರೋಹಿತ್ ಕುರಿತಂತೆ ಆಸಕ್ತಿ ವಹಿಸಲಿಲ್ಲ. ಅದಕ್ಕೆ ಬೇರೆ ಬೇರೆ ಕಾರಣಗಳಿವೆ. ಒಂದು, ರೋಹಿತ್‌ನ ರಾಜಕೀಯ ಹಿನ್ನೆಲೆ. ಬಿಎಸ್‌ಪಿಯಂತಹ ಸಂಘಟನೆಯ ಜೊತೆಗೆ ನೇರವಾಗಿ ಗುರುತಿಸಿಕೊಳ್ಳದೇ ಇರುವುದು. ಇದೇ ಸಂದರ್ಭದಲ್ಲಿ, ಆತನ ತಂದೆಯ ಜಾತಿಯ ಕುರಿತಂತೆ ಇರುವ ಗೊಂದಲ. ವೈಯಕ್ತಿಕವಾಗಿ ಬಿಎಸ್‌ಪಿಗೆ ಈ ಹೋರಾಟದಿಂದ ಎಷ್ಟರಮಟ್ಟಿಗೆ ಲಾಭವಾಗಬಹುದು, ನಷ್ಟವಾಗಬಹುದು ಎಂಬ ಲೆಕ್ಕಾಚಾರದಲ್ಲೇ ಬಿಎಸ್‌ಪಿ ದಿನಗಳನ್ನು ಎಣಿಸತೊಡಗಿತು. ಇದೇ ಸಂದರ್ಭದಲ್ಲಿ, ರೋಹಿತ್ ಪರವಾದ ಹೋರಾಟದ ಖಾಲಿ ಜಾಗವನ್ನು ಜೆಎನ್‌ಯು ವಿದ್ಯಾರ್ಥಿಗಳು ತುಂಬಿದರು. ಮೋದಿ, ಆರೆಸ್ಸೆಸ್, ಬ್ರಾಹ್ಮಣ್ಯವಾದ ಇವುಗಳ ಬಗ್ಗೆ ಅತ್ಯಂತ ಸ್ಪಷ್ಟವಾಗಿ ಮಾತನಾಡಿದ ಕಾರಣಕ್ಕಾಗಿಯೇ ಕನ್ಹಯ್ಯಾ ಮತ್ತು ಆತನ ಗೆಳೆಯರು ಜೈಲಿಗೆ ಹೋಗಬೇಕಾಯಿತು. ಆದರೆ ಇದರ ಜೊತೆಗೆ ರೋಹಿತ್ ವೇಮುಲಾ ಆತ್ಮಹತ್ಯೆ ಪ್ರಕರಣ ರಾಷ್ಟ್ರಮಟ್ಟಕ್ಕೆವ್ಯಾಪಿಸಿತು. ನರೇಂದ್ರ ಮೋದಿ, ಸ್ಮತಿ ಇರಾನಿಯಂತಹ ರಾಜಕಾರಣಿಗಳ ಬೂಟಾಟಿ ಕೆಯ ಮಾತಿಗೆ, ಕನ್ಹಯ್ಯಾರಂತಹ ಒಬ್ಬ ತರುಣ ಪರಿಣಾಮಕಾರಿಯಾದ ಉತ್ತರ ವನ್ನು ನೀಡಿದ್ದು ನೋಡಿ ದೇಶ ಬೆಕ್ಕಸ ಬೆರಗಾಗಿದ್ದು, ಮಾಧ್ಯಮಗಳು ಅವನ ಹಿಂದೆಓಡಾಡಿದ್ದನ್ನು ನಾವು ಕಂಡೆವು. ಇಲ್ಲಿ ಕನ್ಹಯ್ಯಾ ತನ್ನಷ್ಟಕ್ಕೆ ನಾಯಕನಾಗಲಿಲ್ಲ. ರೋಹಿತ್ ವೇಮುಲಾನ ಪರವಾಗಿ ಧ್ವನಿಯೆತ್ತಿ, ಸ್ಪಷ್ಟವಾಗಿ ಮಾತನಾಡಿದ ಕಾರಣಕ್ಕಾಗಿ ನಾಯಕನಾಗಿ ಮೂಡಿಬಂದರು. ಹೈದರಾಬಾದ್ ವಿಶ್ವವಿದ್ಯಾನಿಲಯಕ್ಕೆ ನುಗ್ಗುವ ಧೈರ್ಯ ಮಾಡಿದರು. ಕನ್ಹಯ್ಯೆ ಕಾರಣದಿಂದಲೇ ಹೈದರಾಬಾದ್ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳು ಮತ್ತೆ ಸಂಘಟಿತರಾಗಿ ಅಲ್ಲಿನ ವ್ಯವಸ್ಥೆಯ ವಿರುದ್ಧ ಹೋರಾಟಕ್ಕೆ ಇಳಿಯುವಂತಾಯಿತು. ಅತ್ಯಂತ ವಿಪರ್ಯಾಸದ ಸಂಗತಿಯೆಂದರೆ, ಈ ದೇಶದ ಕೆಲವು ದಲಿತ ನಾಯಕರಿಗೆ ಅದರಲ್ಲೂ ಮಾಯಾವತಿಯಂತಹ ಹಿರಿಯ ನಾಯಕಿಗೆ, ಈ ಹೋರಾಟ ಸಂತೋಷ ಕೊಡದೇ ಇರುವುದು. ರೋಹಿತ್‌ವೇಮುಲಾ ಮೂಲಕ ಕನ್ಹಯ್ಯೆ ದೇಶಾದ್ಯಂತ ಬೆಳೆಯುತ್ತಿದ್ದಂತೆಯೇ, ಅದನ್ನು ಅವರು ಸಮಸ್ಯೆಯಾಗಿ ಗುರುತಿಸಲಾರಂಭಿಸಿದ್ದಾರೆ. ಯಾಕೆಂದರೆ, ಯಾವ ಖಾಲಿ ಜಾಗವನ್ನು ತಾವು ತುಂಬಿ ಹೋರಾಟವನ್ನು ನಡೆಸಬೇಕಾಗಿತ್ತೋ, ಆ ಖಾಲಿ ಜಾಗವನ್ನು ಕನ್ಹಯ್ಯೋ ಆವರಿಸಿಕೊಂಡಿದ್ದಾರೆ ಎನ್ನುವುದು ಸದ್ಯಕ್ಕೆ ಅವರ ಸಮಸ್ಯೆ. ಈ ಸಂದರ್ಭದಲ್ಲಿ ರೋಹಿತ್ ಮತ್ತು ಅವರಂತಹ ಇತರ ದಲಿತ ವಿದ್ಯಾರ್ಥಿಗಳ ಪರವಾಗಿ ಮಾಯಾವತಿಯೇ ಒಂದು ಹೋರಾಟವನ್ನು ಕೈಗೆತ್ತಿ ಕೊಳ್ಳಬಹುದಿತ್ತು. ಅಥವಾ ಕನ್ಹಯ್ಯಿ ಆರಂಭಿಸಿದ ಹೋರಾಟಕ್ಕೆ ಶಕ್ತಿ ತುಂಬಿ ಅದನ್ನು ಇನ್ನಷ್ಟು ಬೆಳೆಸಬಹುದಿತ್ತು. ಆದರೆ ಅದರ ಬದಲಿಗೆ ಋಣಾತ್ಮಕ ತಂತ್ರವನ್ನು ಮಾಯಾವತಿ ಮತ್ತು ಅವರ ಬಳಕ ಅನುಸರಿಸಲು ಹೊರಟಿದೆ. ತಾವು ಹೋರಾಟ ರೂಪಿಸುವ ಬದಲು, ಕನ್ಹಯ್ಯಿ ಬಳಗದ ಹೋರಾಟವನ್ನು ಅಡಗಿಸುವ ದಾರಿಯನ್ನು ಅವರು ಆರಿಸಿಕೊಂಡಿದ್ದಾರೆ. ಕನ್ಹಯ್ಯಾನನ್ನೇ ‘ದಲಿತರ ಶತ್ರು’ ಎಂದು ಮಾಧ್ಯಮಗಳಲ್ಲಿ ಬಿಂಬಿಸುವ ಪ್ರಯತ್ನ ಮಾಡಿದ್ದಾರೆ. ಕನ್ಹಯ್ಯಾನ ಜಾತಿ ‘ಭೂಮಿಹಾರ್’ ಆಗಿದ್ದು, ಆತನ ಜಾತಿಯ ಜನರು ಈ ಹಿಂದೆ ದಲಿತರ ಹತ್ಯೆಗಳಲ್ಲಿ ಪಾತ್ರ ವಹಿಸಿದ್ದಾರೆ, ಆದುದರಿಂದ ಕನ್ಹಯ್ಯಾನಿಗೆ ‘ಜೈ ಭೀಮ್’ ಎಂದು ಹೇಳುವ ಅಧಿಕಾರವಿಲ್ಲ ಎನ್ನುವ ಸಮಯ ಸಾಧಕತನದ ಹೇಳಿಕೆಯನ್ನು ನೀಡಿದ್ದಾರೆ. ಮೊದಲು ಕನ್ಹಯ್ಯಾನ ಜಾತಿಯವರು ದಲಿತರ ಕ್ಷಮೆ ಕೇಳಲಿ, ಬಳಿಕ ಕನ್ಹಯ್ಯಾ ರೋಹಿತ್ ವೇಮುಲಾ ಪರವಾಗಿ ಹೋರಾಡಲಿ ಎಂಬ ನಿಕೃಷ್ಟವಾದ ಮಾತುಗಳನ್ನಾಡಿದ್ದಾರೆ. ಈ ಹಿಂದೆ, ಇದೇ ಮಾಯಾವತಿಯವರು ಬಿಜೆಪಿಯವರ ಜೊತೆಗೆ ಕೈ ಜೋಡಿಸಿ ಅಧಿಕಾರ ಹಿಡಿದಾಗ ಆರೆಸ್ಸೆಸ್‌ನವರು ದಲಿತರ ಕ್ಷಮೆಯಾಚಿಸಿದ್ದರೇ? ಬಹುಜನಪಕ್ಷವನ್ನು ಸರ್ವಜನ ಪಕ್ಷ ಎಂದು ಘೋಷಿಸಿದ ಸಂದರ್ಭದಲ್ಲಿ ಬ್ರಾಹ್ಮಣರು ದಲಿತರ ಕ್ಷಮೆಯನ್ನು ಯಾಚಿಸಿದ ಉದಾಹರಣೆ ಇತ್ತೇ? ಇದೀಗ ಕನ್ಹಯ್ಯಾರಂತಹ ಎಳೆ ಹುಡುಗರು ಬೀದಿಗಿಳಿದು ರೋಹಿತ್ ಪರವಾಗಿ ಹೋರಾಟ ಮಾಡುತ್ತಿರುವಾಗ, ಅವರ ಹೋರಾಟವನ್ನು ದಮನಿಸಿ, ಅವರನ್ನೇ ಶತ್ರುಗಳನ್ನಾಗಿ ಬಿಂಬಿಸುವುದರಿಂದ ಲಾಭ ಯಾರಿಗೆ? ಮಾಯಾವತಿಗೆ ತಕ್ಷಣ ಕೆಲವು ರಾಜಕೀಯ ಲಾಭಗಳಿರಬಹುದಾದರೂ, ಅಂತಿಮವಾಗಿ ಅದರ ಸುದೀರ್ಘ ಫಲಾನುಭವಿಗಳು ಆರೆಸ್ಸೆಸ್ ಮತ್ತು ಅವರ ಬಳಗ ಎನ್ನುವುದು ಮಾಯಾವತಿಗೆ ಗೊತ್ತಿಲ್ಲವೇ?
 ಇಂದು ದೇಶ, ಕನ್ಹಯ್ಯನನ್ನು ಕೇವಲ ಕಮ್ಯುನಿಸ್ಟ್ ಎಂಬ ನೆಲೆಯಲ್ಲಿ ಗುರುತಿಸುತ್ತಿಲ್ಲ. ಕಾರ್ಮಿಕ ವರ್ಗ ಮತ್ತು ಅಂಬೇಡ್ಕರ್ ಚಿಂತನೆಗಳು ಕನ್ಹಯ್ಯಿ ಮೂಲಕ ಒಂದಾಗಿರುವುದರಿಂದ ಭವಿಷ್ಯದಲ್ಲಿ ಹೋರಾಟ ಹೊಸ ಸಾಧ್ಯತೆಗಳನ್ನು ಪಡೆಯಬಹುದೆಂಬ ನಿರೀಕ್ಷೆಗಳನ್ನಷ್ಟೇ ದೇಶ ಹೊಂದಿದೆ. ಹಾಗೆ ನೋಡಿದರೆ, ಕನ್ಹಯ್ಯೆರನ್ನು ಕಮ್ಯುನಿಸ್ಟರೇ, ಸುದೀರ್ಘ ಕಾಲ ಸಹಿಸಿಕೊ ಳ್ಳುವುದು ಅನುಮಾನ. ಹೀಗಿರುವಾಗ, ಕನ್ಹಯ್ಯೆ ಈ ದೇಶದ ದಲಿತ ಮತ್ತು ಶೋಷಿತ ಚಳವಳಿ ಯನ್ನು ಇನ್ನಷ್ಟು ವಿಸ್ತಾರಕ್ಕೆ ಒಯ್ದರೆ ಅದಕ್ಕೆ ಮಾಯಾವತಿಯಂತಹ ನಾಯಕರು ಸಂತೋಷ ಪಡಬೇಕು. ಪರೋಕ್ಷವಾಗಿ ಬೆಂಬಲ ನೀಡಬೇಕು. ಆದರೆ, ಅದಕ್ಕೆ ಬದಲಾಗಿ ಕನ್ಹಯ್ಯೆರನ್ನೇ ಶತ್ರುವಾಗಿ ಬಿಂಬಿಸಲು ಹೊರಟಿರುವ ಮಾಯಾವತಿಯ ಪ್ರಯತ್ನ, ‘ಮಗ ಸತ್ತರೂ ಪರವಾಗಿಲ್ಲ, ಸೊಸೆ ವಿಧವೆಯಾಗಬೇಕು’ ಎನ್ನುವ ಮನಸ್ಥಿತಿಯಾಗಿದೆ.ಇಂತಹ ಮನಸ್ಥಿತಿ ಆಘಾತಕಾರಿ ಮಾತ್ರವಲ್ಲ, ಇದು ಈ ದೇಶದ ಯಾರಿಗೂ ಒಳ್ಳೆಯದನ್ನು ಮಾಡುವುದಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News