ದೇಶದ ಜಸಂಖ್ಯೆ ಹೆಚ್ಚಿಸುವುದು ಅತ್ಯವಶ್ಯ: ಚಂದ್ರಬಾಬು ನಾಯ್ಡು
ಹೈದರಾಬಾದ್: ದೇಶದ ಜನಸಂಖ್ಯೆಯನ್ನು ಹೆಚ್ಚಿಸುವುದು ಅತ್ಯವಶ್ಯವಾಗಿರುವುದರಿಂದ ಜನಸಂಖ್ಯೆ ನಿಯಂತ್ರಣದ ಬದಲು ಜನಸಂಖ್ಯೆ ಹೆಚ್ಚಿಸುವತ್ತ ಹೆಚ್ಚಿನ ಗಮನಹರಿಸುವ ಅಗತ್ಯವಿದೆಯೆಂದು ಆಂಧ್ರ ಪ್ರದೇಶ ಮುಖ್ಯಮಂತ್ರಿ ಎನ್.ಚಂದ್ರಬಾಬು ನಾಯ್ಡು ಹೇಳಿದ್ದಾರೆ.
ಬುಧವಾರ ತನ್ನ 66ನೆ ಜನ್ಮ ದಿನಾಚರಣೆಯಂಗವಾಗಿ ನಾಲ್ಕು ಆರೋಗ್ಯ ಯೋಜನೆಗಳನ್ನು ವಿಜಯಾಡದಲ್ಲಿ ಜಾರಿಗೊಳಿಸಿ ಮಾತನಾಡಿದ ಅವರು, ‘‘ಹೆಚ್ಚುತ್ತಿರುವ ವೃದ್ಧರ ಅಥವಾ ವಯಸ್ಸಾಗುತ್ತಿರುವವರ ಜನಸಂಖ್ಯೆಯನ್ನು ಗಮನದಲ್ಲಿರಿಸಿ ಜಪಾನ್ ಮತ್ತು ಚೀನಾ ಜನಸಂಖ್ಯೆ ಹೆಚ್ಚಳಕ್ಕೆ ಒತ್ತು ನೀಡುತ್ತಿವೆ. ನಾವುಕೂಡ ಹಾಗೆಯೇ ಮಾಡಬೇಕಾಗುತ್ತದೆ. ನಮ್ಮ ರಾಜ್ಯದಲ್ಲಿ ನವಜಾತ ಶಿಶುಗಳ ಹಾಗೂ ತಾಯಂದಿರ ಸಾವಿನ ಪ್ರಮಾಣ ಕಡಿಮೆಯಾಗುತ್ತಿದೆ’’ಎಂದವರು ಹೇಳಿದರು.
ಜನಸಂಖ್ಯೆ ಹೆಚ್ಚಳಕ್ಕೆ ಒತ್ತು ನೀಡಬೇಕೆಂದು ನಾಯ್ಡು ಹೇಳುತ್ತಿರುವುದು ಇದೇ ಮೊದಲಲ್ಲ. ಜನವರಿಯಲ್ಲಿ ಈಳೂರು ಎಂಬ ಗ್ರಾಮದ ಜನತೆಯನ್ನು ಉದ್ದೇಶಿಸಿ ಮಾತನಾಡಿದ ಅವರುಗ್ರಾಮದಲ್ಲಿ ಕಿರಿಯರ ಹಾಗೂ ಹಿರಿಯರ ಅನುಪಾತವನ್ನು ಉಲ್ಲೇಖಿಸುತ್ತಾ ಜನರು ಹೆಚ್ಚು ಮಕ್ಕಳನ್ನು ಹೊಂದುವಂತೆ ಸಲಹೆ ನೀಡಿದ್ದರಲ್ಲದೆ ರಾಜ್ಯವು ಯುವ ಹಾಗೂ ಆರೋಗ್ಯವಂತ ಜನಸಂಖ್ಯೆ ಹೊಂದಬೇಕೆಂದಿದ್ದರು.
ಬುಧವಾರ ನಾಯ್ಡುಗ್ರಾಮೀಣ ಪ್ರದೇಶಗಳಿಗಾಗಿ ಸಂಚಾರ ಆರೋಗ್ಯ ಸೇವಾ ಸೌಕರ್ಯ ‘ಚಂದ್ರಣ್ಣ ಸಂಚಾರ ಚಿಕಿತ್ಸ’ ಉದ್ಘಾಟಿಸಿದರು. ಈ ಸಂಚಾರ ಚಿಕಿತ್ಸಾ ಘಟಕವು13,000 ಗ್ರಾಮಗಳನ್ನು ಸಂದರ್ಶಿಸಿ ಜನರಿಗೆ ಆರೋಗ್ಯ ಸೇವೆ ಒದಗಿಸಲಿದೆ. ನಾಲ್ಕು ಸರಕಾರಿ ಆಸ್ಪತ್ರೆಗಳಲ್ಲಿ ಉಚಿತ ಸಿಟಿ ಸ್ಕ್ಯಾನ್ ಸೌಕಂರ್ವನ್ನು ಒದಗಿಸುವ ಪ್ರಾಯೋಗಿಕ ಯೋಜನೆಯನ್ನೂ ಈ ಸಂದರ್ಭದಲ್ಲಿ ಆರಂಭಿಸಲಾಯಿತು.