ಮಹಾತ್ಮಾ ಗಾಂಧಿಯವರ ಮೊಮ್ಮಗಳಿಗೆ ಉನ್ನತ ಫ್ರೆಂಚ್ ಪ್ರಶಸ್ತಿ ಪ್ರದಾನ
ಹೊಸದಿಲ್ಲಿ,ಎ.21: ಮಹಾತ್ಮಾ ಗಾಂಧಿಯವರ ಮೊಮ್ಮಗಳು ತಾರಾ ಗಾಂಧಿ ಭಟ್ಟಾಚಾರ್ಜಿ ಅವರು ಶಾಂತಿ,ಏಕತೆ,ಸಂಸ್ಕೃತಿ,ಶಿಕ್ಷಣ ಮತ್ತು ಅಭಿವೃದ್ಧಿ ಕ್ಷೇತ್ರಗಳಲ್ಲಿ ತನ್ನ ಕೊಡುಗೆಗಳಿಗಾಗಿ ಅತ್ಯುನ್ನತ ಫ್ರೆಂಚ್ ಪ್ರಶಸ್ತಿಗಳಲ್ಲೊಂದಾಗಿರುವ ‘ದಿ ಆರ್ಡರ್ ಆಫ್ ಆರ್ಟ್ಸ್ ಆ್ಯಂಡ್ ಲೆಟರ್ಸ್’ಗೆ ಭಾಜನರಾಗಿದ್ದಾರೆ.
ಫ್ರಾನ್ಸ್ ಅಧ್ಯಕ್ಷರ ಪರವಾಗಿ ಫ್ರೆಂಚ್ ರಾಯಭಾರಿ ಫ್ರಾಂಕೋಯಿಸ್ ರಿಷೆರ್ ಅವರು ಬುಧವಾರ ರಾತ್ರಿ ಭಟ್ಟಾಚಾರ್ಜಿ(82) ಅವರಿಗೆ ಈ ಪ್ರತಿಷ್ಠಿತ ಪ್ರಶಸ್ತಿಯನ್ನು ಪ್ರದಾನಿಸಿದರು.
ಪ್ರಶಸ್ತಿಯನ್ನು ಸ್ವೀಕರಿಸಿ ಮಾತನಾಡಿದ ಭಟ್ಟಾಚಾರ್ಜಿ ಅವರು, ಗಾಂಧೀಜಿಯವರ ನಿರ್ಭಯತೆಯನ್ನು ಕಲಿಯಬೇಕಾದ ಅಗತ್ಯವಿದೆ. ಅವರ ನಿರ್ಭಯತೆಯು ವಿಭಿನ್ನವಾಗಿತ್ತು. ಅವರು ಪ್ರೀತಿ ಮತ್ತು ಅನುಕಂಪದ ಸಾಕಾರಮೂರ್ತಿಯಾಗಿದ್ದರು. ನನಗಿನ್ನೂ ನೆನಪಿದೆ, ಅವರ ಕೋಣೆಯ ಬಾಗಿಲುಗಳು ಸದಾ ತೆರೆದೇ ಇರುತ್ತಿದ್ದವು. ಅವರನ್ನು ಭೇಟಿಯಾಗಲು ಯಾರೇ ಆದರೂ ಮೊದಲೇ ಸಮಯವನ್ನು ಗೊತ್ತು ಮಾಡಿಕೊಳ್ಳುವ ಅಗತ್ಯವಿರಲಿಲ್ಲ. ತಾವು ಗಾಂಧಿಯವರ ಅಭಿಪ್ರಾಯಗಳನ್ನು ಒಪ್ಪಿಕೊಳ್ಳುವುದಿಲ್ಲ ಎಂದು ಅವರ ಕೋಣೆಯಿಂದ ಹೊರಬರುತ್ತಿದ್ದ ರಾಜಕಾರಣಿಗಳು ಹೇಳುತ್ತಿದ್ದುದು ನನಗೆ ನೆನಪಿದೆ. ಆದರೆ ಖಂಡಿತವಾಗಿಯೂ ಅವರು ಗಾಂಧಿಯವರ ಮಿತ್ರರಾಗಿಬಿಡುತ್ತಿದ್ದರು. ಅಂತಹ ನಿರ್ಭಯತೆ ನಮಗಿಂದು ಅಗತ್ಯವಿದೆ ಎಂದು ಹೇಳಿದರು.
ದಿ.ದೇವದಾಸ ಗಾಂಧಿ ಮತ್ತು ದಿ.ಲಕ್ಷ್ಮೀ ಅವರ ಪುತ್ರಿಯಾಗಿರುವ ತಾರಾ ಭಟ್ಟಾಚಾರ್ಜಿಯವರ ಪತಿ ದಿ.ಜ್ಯೋತಿಪ್ರಸಾದ ಭಟ್ಟಾಚಾರ್ಜಿ ಖ್ಯಾತ ಆರ್ಥಿಕ ತಜ್ಞರಾಗಿದ್ದರು.
ಮಹಾತ್ಮಾ ಗಾಂಧಿಯವರು ತಮ್ಮ ಪತ್ನಿಯ ಸ್ಮರಣಾರ್ಥ ಗ್ರಾಮೀಣ ಭಾರತದ ಬಡಮಹಿಳೆಯರು ಮತ್ತು ಮಕ್ಕಳ ಸೇವೆಗಾಗಿ ಸ್ಥಾಪಿಸಿದ್ದ ಕಸ್ತೂರ್‌ಬಾ ಗಾಂಧಿ ರಾಷ್ಟ್ರೀಯ ಸ್ಮಾರಕ ಟ್ರಸ್ಟ್‌ನಲ್ಲಿ ಭಟ್ಟಾಚಾರ್ಜಿ ಕಳೆದ 28 ವರ್ಷಗಳಿಂದಲೂ ಕಾರ್ಯ ನಿರ್ವಹಿಸುತ್ತಿದ್ದಾರೆ.
ಈ ಮೊದಲು ಈ ಪ್ರಶಸ್ತಿಗೆ ಭಾಜನರಾದ ಭಾರತೀಯರಲ್ಲಿ ಶಾರುಕ್ ಖಾನ್, ಪಂಡಿತ್ ಹರಿಪ್ರಸಾದ ಚೌರಾಸಿಯಾ, ಐಶ್ವರ್ಯಾ ರೈ,ಹಬೀಬ್ ತನ್ವೀರ್ ಮೊದಲಾದವರಿದ್ದಾರೆ.